ರಾಯರ ಮಠದ ಹುಂಡಿಯಲ್ಲಿ ದಾಖಲೆ ದೇಣಿಗೆ ಸಂಗ್ರಹ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಸುಮಾರು ₹4 ಕೋಟಿ 15 ಲಕ್ಷ, 44 ಗ್ರಾಂ ಚಿನ್ನ, 3642 ಗ್ರಾಂ ಬೆಳ್ಳಿ ಸಂಗ್ರಹ. ಶ್ರೀಮಠದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಕಾಣಿಕೆ ಇದೆ ಮೊದಲು. ಹೊಸ ವರ್ಷ, ಸಂಕ್ರಾಂತಿ, ರಾಮ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಸುಕ್ಷೇತ್ರಕ್ಕೆ ಹರಿದುಬಂದಿದ್ದ ಭಕ್ತರು.

ಕನ್ನಡಪ್ರಭ ವಾರ್ತೆ ರಾಯಚೂರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ದಾಖಲೆ ದೇಣಿಗೆ (ಕಾಣಿಕೆ) ಸಂಗ್ರಹಗೊಂಡಿದ್ದು, ಪ್ರಸಕ್ತ ಜನವರಿಯಲ್ಲಿ ಸುಕ್ಷೇತ್ರಕ್ಕೆ ಹರಿದುಬಂದಿದ್ದ ಶ್ರೀಗುರುರಾಯರ ಭಕ್ತರು ನಗದು, ಚಿನ್ನ-ಬೆಳ್ಳಿ ರೂಪದಲ್ಲಿ ತೋರಿದ ಭಕ್ತಿಗೆ ನಿದರ್ಶನವಾಗಿ ನಿಂತಿದೆ.ದಾಖಲೆ ದೇಣಿಗೆ

ಕಳೆದ ವರ್ಷ ಡಿಸೆಂಬರ್ ಕೊನೆ ವಾರದಿಂದ ಜ.29ವರೆಗೆ ಒಟ್ಟು 33 ದಿನಗಳ ಹುಂಡಿಯ ಎಣಿಕೆಯನ್ನು ಸೋಮವಾರ ಆರಂಭಿಸಿ ಮಂಗಳವಾರ ಬೆಳಗ್ಗೆ ಮುಕ್ತಾಯ ಮಾಡಿದ್ದು, ಸತತ ಎರಡು ದಿನಗಳ ಕಾಲ ಶ್ರೀಮಠದ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹುಂಡಿ ಎಣಿಕೆ ಕಾರ್ಯವನ್ನು ನಡೆಸಿದ್ದಾರೆ.

ಈ ವೇಳೆ ರು.4 ಕೋಟಿ 7 ಲಕ್ಷ 11 ಸಾವಿರ 838 ನಗದು ನೋಟು, ರು. 8 ಲಕ್ಷ 20 ಸಾವಿರ 900 ನಾಣ್ಯಗಳು ಸೇರಿ ಒಟ್ಟು 4 ಕೋಟಿ ರು.15 ಲಕ್ಷ 32 ಸಾವಿರ 738 ನಗದು, 44 ಗ್ರಾಂ ಚಿನ್ನ, 3642 ಗ್ರಾಂ ಬೆಳ್ಳಿ ಸಂಗ್ರಹಗೊಂಡಿದೆ. ಇಷ್ಟೊಂದು ಪ್ರಮಾಣದಲ್ಲಿ ದೇಣಿಗೆ ಸಂಗ್ರಹಗೊಂಡಿರುವುದು ಶ್ರೀಮಠದ ಇತಿಹಾಸದಲ್ಲಿ ದಾಖಲೆಯಾಗಿರುವುದು ವಿಶೇಷವಾಗಿದೆ.ಕಾಣಿಕೆಗೆ ಕಾರಣ

ಡಿಸೆಂಬರ್‌ನಿಂದ ಜನವರಿಯಲ್ಲಿ ಶ್ರೀರಾಯರ ಮಠಕ್ಕೆ ಲಕ್ಷಾಂತರ ಭಕ್ತರು ಹರಿದು ಬಂದಿದ್ದಾರೆ. ಅದರಲ್ಲಿಯೂ ವರ್ಷಾಂತ್ಯದ ರಜೆ, ಹೊಸ ವರ್ಷದ ಆಚರಣೆ, ಸಂಕ್ರಾಂತಿ ಹಬ್ಬ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಹಮ್ಮಿಕೊಂಡಿದ್ದ ಶ್ರೀರಾಮನೋತ್ಸವ, ಗಣರಾಜ್ಯೋತ್ಸವ ನಿಮಿತ್ತ ದೊರೆತ ಸತತ ರಜೆಗಳ ಪರಿಣಾಮವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಹರಿದು ಬಂದ ಭಕ್ತಸಾಗರ ಶ್ರೀಗುರುರಾಯರಿಗೆ ಸಮರ್ಪಿಸಿದ ಭಕ್ತಿಯ ಸೇವೆಯೆ ದಾಖಲೆ ಮಟ್ಟದ ಕಾಣಿಕೆ ಸಂಗ್ರಹಕ್ಕೆ ಕಾರಣವಾಗಿದೆ.ಜವನರಿಗೆ ಸಂಬಂಧಿಸಿದಂತೆ ಮಂತ್ರಾಲಯದ ಶ್ರೀರಾಯರ ಮಠದಲ್ಲಿ ಎರಡು ದಿನಗಳ ಕಾಲ ನಡೆದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಕಳೆದ 33 ದಿನಗಳಲ್ಲಿ ರು. ಒಟ್ಟು 4 ಕೋಟಿ 15 ಲಕ್ಷದ 32 ಸಾವಿರ 738 ರು. ನಗದು, 44 ಗ್ರಾಂ ಚಿನ್ನ, 3642 ಗ್ರಾಂ ಬೆಳ್ಳಿ ದೇಣಿಗೆ ಸಂಗ್ರಹಗೊಂಡಿದ್ದು ಇದು ಶ್ರೀಮಠದ ಇತಿಹಾಸದಲ್ಲಿಯೇ ಮೊದಲಾಗಿದೆ.

ಎಸ್‌.ಕೆ.ಶ್ರೀನಿವಾಸ ರಾವ್, ವ್ಯವಸ್ಥಾಪಕರು, ರಾಯರ ಮಠ, ಮಂತ್ರಾಲಯ

Share this article