ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಮೊದಲೇ ಮಳೆ ಇಲ್ಲದೆ, ಸೂರ್ಯನ ಪ್ರಖರತೆಗೆ ಪ್ರಕೃತಿ ಸೌಂದರ್ಯ ಸೊರಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಧಗಧಗಿಸಿ ಉರಿಯುತ್ತಿದೆ.ಈ ನಡುವೆ ಅರಣ್ಯ ಸಂಪತ್ತನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆ ವಿರುದ್ಧ ಆರೋಪಗಳು ಕೇಳಿ ಬಂದಿವೆ.ಹೌದು! ಕಳೆದ ಹತ್ತು ದಿನಗಳಿಂದ ಸೋಂಪುರ ಹೋಬಳಿಯ ವೀರಸಾಗರ ಗ್ರಾಮದ ಬಳಿಯ ದಟ್ಟಡವಿಯಲ್ಲಿ ಬೆಂಕಿ ಕಾಣಿಸುತ್ತಿದ್ದು, ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಭಸ್ಮವಾಗಿದೆ. ಅಪರೂಪದ ಸಸ್ಯ ರಾಶಿಯನ್ನು ಹೊಂದಿರುವ ಈ ಭಾಗದಲ್ಲಿ ಅರಣ್ಯ ನಾಶವಾಗುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟ್ಯಂತರ ರು. ವ್ಯರ್ಥ:ಸರ್ಕಾರ ಪ್ರತಿ ವರ್ಷ ಅರಣ್ಯದಲ್ಲಿ ಸಸಿ ನೆಡಲು ಕೋಟ್ಯಂತರ ರು. ವ್ಯಯಿಸುತ್ತಿದೆ. ಆದರೆ ಈ ಬಾರಿ ನೆಟ್ಟ ಗಿಡಗಳು ಬಿಸಿಲಿನ ಝಳಕ್ಕೆ ನೀರಿಲ್ಲದೆ ಒಣಗಿ ಹೋಗಿವೆ. ಈ ನಡುವೆ ಈ ಬೆಂಕಿಯ ಹಾವಳಿ ಅರಣ್ಯನಾಶಕ್ಕೆ ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.
ನೆಪಕ್ಕೆ ಮಾತ್ರ ಫೈರ್ ಲೈನ್:ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ತಡೆಯಲು ರಸ್ತೆ ಪಕ್ಕ ಹಾಗೂ ಹೊಸದಾಗಿ ಗಿಡ ನೆಟ್ಟಿರುವ ಬಳಿ ಬೆಂಕಿ ಅರಣ್ಯಕ್ಕೆ ತಾಗದಂತೆ ಫೈರ್ ಲೈನ್ ಮಾಡಲಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ಓಡಾಡುವ ಜಾಗವನ್ನು ಹೊರತು ಪಡಿಸಿ ಇನ್ನುಳಿದ ಜಾಗದಲ್ಲಿ ಫೈರ್ ಲೈನ್ ಮಾಡದೇ ಇರುವುದೇ ಬೆಂಕಿ ಬೀಳಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯವರೇ ಬೆಂಕಿ ಇಟ್ಟಿರುವ ಆರೋಪ:ದಟ್ಟ ಅರಣ್ಯದೊಳಗೆ ಕರಡಿ, ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ವಾಸಿಸುವ ಕಾರಣ ಯಾರೊಬ್ಬರೂ ಓಡಾಡುವುದಿಲ್ಲ, ಬೆಂಕಿ ಬಿದ್ದರೆ ರಸ್ತೆ ಪಕ್ಕದಿಂದ ಹೋಗಬೇಕು. ಆದರೆ ಅರಣ್ಯದ ಮಧ್ಯ ಭಾಗದಲ್ಲಿ ಬೆಂಕಿ ಹತ್ತಿಕೊಂಡು ಭಸ್ಮವಾಗಿರುವುದು ಅರಣ್ಯ ಇಲಾಖೆಯವರೇ ಹೊಸದಾಗಿ ಸಸಿಗಳನ್ನು ನೆಡಲು ಟೆಂಡರ್ ಕರೆಯಲು ಈ ರೀತಿ ಅರಣ್ಯ ನಾಶ ಮಾಡುತ್ತಾರೆಂದು ವೀರಸಾಗರ ಗ್ರಾಮಸ್ಥರು ಆರೋಪಿಸಿದ್ದಾರೆ.
2023-24ನೇ ಸಾಲಿನಲ್ಲಿ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ವಲಯ ನೆಲಮಂಗಲದವರು ನಿಜಗಲ್ ಮೂರನೇ ಬ್ಲಾಕ್ ಒಂದರಲ್ಲಿಯೇ 10.75 ಹೆಕ್ಟೇರ್ ಪ್ರದೇಶದಲ್ಲಿ 5375 ಗಿಡಗಳನ್ನು ನೆಟ್ಟಿದ್ದು, ಇದಕ್ಕಾಗಿ ಕೋಟ್ಯಂತರ ಹಣ ಬಿಲ್ ಮಾಡಲಾಗಿದೆ. ಆದರೆ, ಈಗ ಉಳಿದಿರುವುದು ಕೆಲವೇ ಕೆಲವು ಗಿಡಗಳು. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‘ದಟ್ಟಡವಿಯಲ್ಲಿ ಅನೇಕ ಪ್ರಾಣಿ, ಪಕ್ಷಿಗಳಿವೆ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ಕಾರಣ ಅವೆಲ್ಲವೂ ಕಾಡಂಚಿನ ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಅರಣ್ಯ ಇಲಾಖೆ ನೇಮಿಸಿರುವ ರೇಂಜರ್ ಸತೀಶ್ ಕಾಡಿನೊಳಗೆ ಒಮ್ಮೆಯೂ ಪ್ರವೇಶಿಸಿ ಪರಿಶೀಲನೆ ನಡೆಸುವುದಿಲ್ಲ. ವಾಚರ್ ಗಳು ಇದ್ದರೂ ಪ್ರಯೋಜನವಿಲ್ಲ. ಆದ್ದರಿಂದ ಇವರ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಪರಿಸರ ಸಂರಕ್ಷಿಸಬೇಕು.’
-ಮಂಜುನಾಥ್, ಪರಿಸರ ಪ್ರೇಮಿ, ವೀರಸಾಗರ‘ಅರಣ್ಯಕ್ಕೆ ಬೆಂಕಿ ಬಿದ್ದ ತಕ್ಷಣ ಜಿಪಿಎಸ್ ಮುಖಾಂತರ ಮುಖ್ಯ ಕಚೇರಿಗೆ ಸಿಗ್ನಲ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಆರ್‌ಎಫ್‌ಓಗೆ ಅಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದೇವೆ. ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು.’
-ಸುನಿಲ್, ಎಸಿಎಫ್