ಬಳ್ಳಾರಿ ವಿವಿಯ ಪಠ್ಯದಲ್ಲಿ ನೂರಾರು ದೋಷಗಳು

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ಬಿ.ಕಾಂ, ಬಿಬಿಎ ಮೊದಲ ಸೆಮಿಸ್ಟರ್‌ನ ವಾಣಿಜ್ಯ ಸೌರಭ ಪಠ್ಯದಲ್ಲಿ ಕುಲಪತಿ ಹೆಸರನ್ನೇ ತಪ್ಪಾಗಿ ಮುದ್ರಿಸಲಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸಿರುವ ಬಿಎಸ್ಸಿ, ಬಿಸಿಎ, ಬಿಕಾಂ, ಬಿಬಿಎ, ಬಿಎ ಪ್ರಥಮ ಸೆಮಿಸ್ಟರ್‌ನ ಪಠ್ಯಗಳಲ್ಲಿ ನೂರಾರು ಮುದ್ರಣ ದೋಷಗಳು ಕಂಡು ಬಂದಿವೆ. ಸರಿಯಾಗಿ ಪರಿಷ್ಕೃತಗೊಳಿಸದ, ದೋಷವಿರುವ ಪಠ್ಯಕ್ರಮವನ್ನೇ ಮಕ್ಕಳಿಗೆ ಪೂರೈಕೆ ಮಾಡಲಾಗಿದೆ.

ಮುದ್ರಣದ ದೋಷದ ಜೊತೆಗೆ ಪುನರಾವರ್ತನೆ, ಅಪೂರ್ಣ ವಿವರ ಮತ್ತಿತರ ಅಂಶಗಳು ಕಂಡು ಬಂದಿವೆ. ವಿಪರ್ಯಾಸ ಸಂಗತಿ ಎಂದರೆ ಬಿ.ಕಾಂ, ಬಿಬಿಎ ಮೊದಲ ಸೆಮಿಸ್ಟರ್‌ನ ವಾಣಿಜ್ಯ ಸೌರಭ ಪಠ್ಯದಲ್ಲಿ ಕುಲಪತಿ ಹೆಸರನ್ನೇ ತಪ್ಪಾಗಿ ಮುದ್ರಿಸಲಾಗಿದೆ. ಆದರೆ, ವಿಶ್ವವಿದ್ಯಾಲಯ ದೋಷಪೂರಿತ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮುನ್ನ ದೋಷಗಳನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ಹೀಗಾಗಿ ಮೊದಲ ಸೆಮಿಸ್ಟರ್‌ನ ನೂರಾರು ತಪ್ಪುಗಳಿಂದ ಕೂಡಿರುವ ಪಠ್ಯಕ್ರಮವನ್ನೇ ಓದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವಂತಾಗಿದೆ. ವಿಶ್ವವಿದ್ಯಾಲಯದ ಪ್ರಸಾರಾಂಗ ಮಾಡಿರುವ ಎಡವಟ್ಟಿನಿಂದ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ದೋಷಪೂರಿತ ಪಠ್ಯವನ್ನೇ ಅಧ್ಯಯನ ಮಾಡಿದ್ದು ಈ ತಪ್ಪಿಗೆ ಹೊಣೆ ಯಾರು? ಎಂಬ ಪ್ರಶ್ನೆ ಮೂಡಿದೆ.

ಎಷ್ಟೆಷ್ಟು ತಪ್ಪುಗಳು?: ಬಳ್ಳಾರಿ ವಿವಿಯ ಮೊದಲ ಸೆಮಿಸ್ಟರ್‌ನ ಬಿಎ ಪ್ರಥಮ ವಿದ್ಯಾರ್ಥಿಗಳಿಗೆ ಕಲಾಸೌರಭ (ಸಾಮಾನ್ಯ ಕನ್ನಡ), ಬಿ.ಕಾಂ/ಬಿಬಿಎ ವಿದ್ಯಾರ್ಥಿಗಳಿಗೆ ವಾಣಿಜ್ಯ ಸೌರಭ ಹಾಗೂ ಬಿಎಸ್ಸಿ/ಬಿಸಿಎ ವಿದ್ಯಾರ್ಥಿಗಳಿಗೆ ವಿಜ್ಞಾನ ಸೌರಭ ಹೆಸರಿನಲ್ಲಿ ಪಠ್ಯಗಳನ್ನು ಪ್ರಸಾರಾಂಗದಿಂದ ಪ್ರಕಟಿಸಿ, ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪೂರೈಸಿದೆ. ವಿವಿ ವ್ಯಾಪ್ತಿಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 20ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 28 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೋಷಪೂರಿತ ಪಠ್ಯವನ್ನೇ ಓದಿ ಪರೀಕ್ಷೆ ಎದುರಿಸಿದ್ದಾರೆ.

ಪಠ್ಯದಲ್ಲಿ ನೂರಾರು ದೋಷಗಳಿವೆ ಎಂದು ಗೊತ್ತಿದ್ದೂ ವಿಶ್ವವಿದ್ಯಾಲಯ ಮಕ್ಕಳ ಬಗ್ಗೆ ಕಾಳಜಿ ವಹಿಸದಿರುವ ವಿವಿಯ ನಡೆ ತೀವ್ರ ಟೀಕೆಗೆ ಗುರಿಯಾಗಿದೆ. ಮೂರು ವಿಭಾಗಗಳ ಮೊದಲ ಸೆಮಿಸ್ಟರ್ ನ ಸಾಮಾನ್ಯ ಕನ್ನಡದ ಪಠ್ಯದ ತಾಂತ್ರಿಕ ಪುಟದಲ್ಲಿ ಐಚ್ಛಿಕ ಕನ್ನಡವೆಂದು ತಪ್ಪು ಬರೆಯುವ ಮೂಲಕ ಶುರುಗೊಳ್ಳುವ ದೋಷಗಳು ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋಗುತ್ತವೆ.

ವಾಣಿಜ್ಯ ಸೌರಭದ ಪ್ರಧಾನ ಸಂಪಾದಕರ ಮಾತಿನಲ್ಲಿ ಕುಲಪತಿ ಪ್ರೊ.ಎಂ. ಮುನಿರಾಜು ಹೆಸರಿನ ಬದಲಿಗೆ ಮುನಿನಾರಾಯಣಪ್ಪ ಎಂದು ತಪ್ಪಾಗಿ ಮುದ್ರಣಗೊಂಡಿದೆ. ಮೂರು ಪಠ್ಯಗಳ ವಿಷಯ ಜೋಡಣೆಯಲ್ಲಿ ಸರಿಯಾದ ಕ್ರಮ ಅನುಸರಿಸಿಲ್ಲ. ಕವಿ, ಸಾಹಿತಿಗಳ ಹಿರಿತನ ಪರಿಗಣಿಸಿಲ್ಲ. ವಾಣಿಜ್ಯ ಸೌರಭದ ಜನಪದ ಸಾಹಿತ್ಯ ಭಾಗದಲ್ಲಿ ಶಿವಕೋಟ್ಯಾಚಾರ್ಯರ ಹಳಗನ್ನಡದ ವಡ್ಡಾರಾಧನೆ ಸೇರಿಸಲಾಗಿದೆ. ಮೂರು ಪಠ್ಯಗಳಲ್ಲಿ ಭಾಷೆ ಮತ್ತು ವ್ಯಾಕರಣ ಭಾಗದಲ್ಲಿ ಒಬ್ಬರೇ ಲೇಖಕರ ಒಂದೇ ಲೇಖನ ಅಳವಡಿಸಲಾಗಿದೆ. ವಾಣಿಜ್ಯ ಸೌರಭದಲ್ಲಿ ಸುಮಾರು 180ಕ್ಕೂ ಹೆಚ್ಚು ದೋಷಗಳು ಕಂಡು ಬಂದಿದ್ದು, ಬೇರೆಯದೇ ಅರ್ಥಗಳನ್ನು ನೀಡುತ್ತಿವೆ. ಕಲಾ ಹಾಗೂ ವಿಜ್ಞಾನ ಸೌರಭದ ಪಠ್ಯದಲ್ಲೂ ಸಾಕಷ್ಟು ಮುದ್ರಣ ದೋಷಗಳು ಕಂಡು ಬಂದಿವೆ. ಈ ಕುರಿತು ವಿವಿಯ ಕುಲಪತಿಗೆ ಪತ್ರ ಬರೆದಿರುವ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಬಿ.ಜಿ. ಕನಕೇಶ ಮೂರ್ತಿ ಕೂಡಲೇ ದೋಷಗಳನ್ನು ಸರಿಪಡಿಸಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ತರಾತುರಿಯಲ್ಲಾದ ಮುದ್ರಣ: ವಿವಿಯ ಪಠ್ಯಗಳ ರಚನೆಗೆ ಸಾಕಷ್ಟು ಸಮಯ ನೀಡಲಾಗಿಲ್ಲ. ಬರೀ 15 ದಿನದಲ್ಲಿ ಪಠ್ಯ ರಚಿಸುವಂತೆ ಸೂಚಿಸಲಾಗಿದೆ. ಬಳಿಕ ಪ್ರೂಫ್ ರೀಡಿಂಗ್ ಆಗಿಲ್ಲ. ಹೀಗಾಗಿಯೇ ಮೂರು ಪಠ್ಯಗಳಲ್ಲಿ ನೂರಾರು ಸಂಖ್ಯೆಯ ಮುದ್ರಣ ದೋಷಗಳು ಕಂಡು ಬಂದಿವೆ.

ಮೊದಲ ಸೆಮಿಸ್ಟರ್ ಕೊನೆಯ ವಾರದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ತಲುಪಿವೆ. ಮೊದಲ ಸೆಮಿಸ್ಟರ್ ನ ಅವಧಿ ಮುಗಿಯುತ್ತಿದ್ದು, ಈವರೆಗೆ ಪಿಡಿಎಫ್‌ನಲ್ಲಿ ಬಂದ ಮಾಹಿತಿಯನ್ನು ಮುದ್ರಿಸಿಕೊಂಡು ವಿದ್ಯಾರ್ಥಿಗಳು ಓದಿಕೊಂಡಿದ್ದಾರೆ.

ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್‌ ನ ಪಠ್ಯಗಳಲ್ಲಿ ದೋಷಗಳು ಕಂಡು ಬಂದಿರುವುದು ನಿಜ. ಈ ಸಂಬಂಧ ಕುಲಪತಿಗಳು ದೋಷ ಸರಿಪಡಿಸಿ ಮರುಮುದ್ರಣಕ್ಕೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎನ್ನುತ್ತಾರೆ ಬಳ್ಳಾರಿ ವಿವಿ ಪ್ರಸಾರಾಂಗ ನಿರ್ದೇಶಕ ಡಾ.ಅರುಣ ಕುಮಾರ್ ಲಗಶೆಟ್ಟಿ.

Share this article