ಬೈಂದೂರು : ಇಲ್ಲಿನ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವನೆಯಿಂದ ನೂರಕ್ಕೂ ಅಧಿಕ ಮಂದಿ ಆಮಶಂಕೆ ಕಾಯಿಲೆಗೊಳಗಾಗಿದ್ದು, ಇದರಿಂದ ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಿಹಳ್ಳಿ ಮತ್ತು ಮಡಿಕಲ್ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಆಮಶಂಕೆ ಕಾಯಿಲೆ ಹರಡುತ್ತಿದ್ದು, ಇಲ್ಲಿನ ಪ್ರತಿ ಮನೆಯಲ್ಲಿ ಒಬ್ಬಿಬ್ಬರಿಗೆ ವಾಂತಿ ಬೇಧಿ ಕಂಡುಬಂದಿದೆ. ಆರೋಗ್ಯ ಇಲಾಖೆಯ ತಕ್ಷಣದ ಕ್ರಮದಿಂದ ಕಾಯಿಲೆ ಹತೋಟಿಗೆ ಬಂದಿದೆ.ಆಮಶಂಕೆ ಕಾಯಿಲೆಯು ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ ಮತ್ತು ನೀರಿನ ಮೂಲಕ ದೇಹವನ್ನು ಸೇರಿಕೊಂಡು ವಾಂತಿ ಬೇಧಿಗೆ ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ವಾರ್ಡ್‌ಗಳಿಗೆ ಗ್ರಾ.ಪಂ.ನಿಂದ ಪೂರೈಸಲಾಗುತ್ತಿರುವ ಕಲುಷಿತ ನೀರಿನಿಂದಲೇ ಈ ಕಾಯಿಲೆ ಹರಡಿರುವುದು ಪತ್ತೆಯಾಗಿದೆ. ಉಪ್ಪುಂದ ಗ್ರಾ.ಪಂ.ಗೆ ಕಾಸನಹಾಡಿ ಎಂಬಲ್ಲಿನ ಬಾವಿಯಿಂದ ನೀರು ಪೂರೈಕೆ ಮಾಡವಾಗುತ್ತಿದ್ದು, ಈ ಬಾವಿಯ ನೀರಿನ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಸ್ತುತ 2 ದಿನಗಳಿಂದ ಈ ವಾರ್ಡುಗಳಿಗೆ ಗ್ರಾ.ಪಂ. ವತಿಯಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಾಯಿಲೆ ಹರಡುವುದು ಹತೋಟಿಗೆ ಬಂದಿದೆ. ಪ್ರಸ್ತುತ 80ರ ಒಬ್ಬ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರು ಚೇತರಿಸಿಕೊಂಡಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗಡಾದ್, ಈ ಕಾಯಿಲೆ ನೀರಿನಿಂದಲೇ ಬಂದಿರುವುದು ಖಚಿತವಾಗಿದೆ. ಆದರೆ ಬಾವಿ ನೀರಿನಿಂದಲೇ ಬಂದಿದೆಯೇ ಅಥವಾ ಬೇರೆ ನೀರಿನ ಮೂಲಗಳಿಂದ ಬಂದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸೆ.30ರಂದು 78 ಮಂದಿಗೆ, ಅ.1 ರಂದು 24 ಮಂದಿಗೆ, ಅ.2ರಂದು 15 ಮಂದಿಗೆ ಆಮಶಂಕೆ ಪತ್ತೆಯಾಗಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಆರೋಗ್ಯಾಧಿಕಾರಿಗಳು ಈ ಪ್ರದೇಶದಲ್ಲಿ ನಿಗಾ ವಹಿಸಿದ್ದಾರೆ ಎಂದು ಹೇಳಿದ್ದಾರೆ.