ಅರಿಶಿನ, ತೆಂಗು ಜೊತೆಗೆ ಟೆರೇಸ್‌ ಗಾರ್ಡನ್‌, ಜೇನುಕೃಷಿ..!

KannadaprabhaNewsNetwork |  
Published : Jul 2, 2025 12:20 AM IST
1 | Kannada Prabha

ಸಾರಾಂಶ

ಅರಿಶಿನವನ್ನು ತಮಿಳುನಾಡಿನ ಈರೋಡ್‌ನಲ್ಲಿ ಮಾರಾಟ ಮಾಡುತ್ತಾರೆ. ಒಂದು ವೇಳೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದರೆ ಸ್ವಲ್ಪ ಸಮಯ ಕಾದು, ನಂತರ ಮಾರಾಟ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

''''''''ಮನಸ್ಸೊಂದಿದ್ದರೆ ಮಾರ್ಗವು ಉಂಟು'''''''' ಎಂಬುದಕ್ಕೆ ಹುಣಸೂರು ತಾಲೂಕು ಗದ್ದಿಗೆಯಲ್ಲಿ ಕೃಷಿ ಮಾಡುತ್ತಿರುವ ಆರ್‌. ಜಗನ್ನಾಥನ್‌ ನಿದರ್ಶನ.

ಅವರು ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಆದರೆ ಓದಿದ್ದು ಮೈಸೂರಿನ ವಿ.ವಿ. ಮೊಹಲ್ಲಾದ ನಿರ್ಮಲಾ ಕಾನ್ವೆಂಟ್‌- ಪ್ರಾಥಮಿಕ , ಜಯಲಕ್ಷ್ಮೀಪುರಂ ಸಂತ ಜೋಸೆಫ್‌ ಶಾಲೆ- ಪ್ರೌಢ ಶಿಕ್ಷಣ, ಜೆಎಸ್ಎಸ್‌ ಪಾಲಿಟೆಕ್ನಿಕ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಡಿಪ್ಲೋಮಾ. ಮೈಸೂರಿನ ಶ್ರೀರಾಂಪುರದಲ್ಲಿರುವ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸಿಸ್ಟಮ್‌ ಆಡ್ಮಿನ್‌ ಆಗಿ ಕೆಲವು ವರ್ಷಗಳ ಸೇವೆ. ನಂತರ ಕೃಷಿಯ ಬಗ್ಗೆ ಆಸಕ್ತಿ. ಗದ್ದಿಗೆಯಲ್ಲಿರುವ ಸಂಬಂಧಿಕರ ಜಮೀನಿನಲ್ಲಿ ಕಳೆದ ಆರು ವರ್ಷಗಳಿಂದ ಕೃಷಿ ಕಾಯಕದಲ್ಲಿ ನಿರತರು.

ಅವರಿಗೂ ಮೂರು ಎಕರೆ ಜಮೀನಿದೆ. ಅರಿಶಿನ ಹಾಗೂ ತೆಂಗು ಪ್ರಮುಖ ಬೆಳೆ. ಅರಿಶಿನವನ್ನು ತಮಿಳುನಾಡಿನ ಈರೋಡ್‌ನಲ್ಲಿ ಮಾರಾಟ ಮಾಡುತ್ತಾರೆ. ಒಂದು ವೇಳೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದರೆ ಸ್ವಲ್ಪ ಸಮಯ ಕಾದು, ನಂತರ ಮಾರಾಟ ಮಾಡುತ್ತಾರೆ. ಗದ್ದಿಗೆಯಲ್ಲಿ ಇವರ ಜಮೀನಿನ ಪಕ್ಕದಲ್ಲಿಯೇ ಸೂಳೆಕೆರೆ ಹಾಗೂ ಸಮೀಪ ಆಸ್ವಾಳ್‌ ಕೆರೆ ಕೂಡ ಇದೆ. ಅಲ್ಲಿಂದ ನಾಲೆಯಲ್ಲಿ ಬರುವ ನೀರು ಆರೇಳು ತಿಂಗಳಿಗೆ ಆಗುತ್ತದೆ. ಉಳಿದಂತೆ ಕೊಳವೆ ಬಾವಿ ಕೂಡ ಇದೆ.

ಜಗನ್ನಾಥನ್‌ ಅವರು ರೇಷ್ಮೆ ಕೃಷಿ, ಟೆರೇಸ್‌ ಗಾರ್ಡನ್‌ ಹಾಗೂ ಜೇನು ಕೃಷಿಯಲ್ಲೂ ಪರಿಣತಿ ಪಡೆದಿದ್ದಾರೆ. ಟೆರೇಸ್‌ನಲ್ಲಿಯೇ ಹಣ್ಣು ಮತ್ತಿತರ ಗಿಡಗಳನ್ನು ಬೆಳೆಸುವ ಬಗ್ಗೆ ಮಹಿಳೆಯರು ಸೇರಿದಂತೆ ಎಲ್ಲಾ ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಾರೆ. ಮುಂದೆ ಹಸು, ಕುರಿ, ಕೋಳಿ ಸಾಕಾಣಿಕೆ ಮಾಡುವ ಉದ್ದೇಶವಿದೆ. ಬ್ರಹ್ಮಕಮಲ ಹೂವು ಐದು ವರ್ಣದಲ್ಲಿಯೂ ಬೆಳೆದಿದ್ದಾರೆ.

ನಂಜನಗೂಡಿನಲ್ಲಿ ಎಂಎಸ್ಎಸ್‌ ಏಜೆನ್ಸೀಸ್‌- ಸರಕು ಸಾಗಣೆ ವ್ಯವಹಾರ ನಡೆಸುತ್ತಾರೆ. ಸುತ್ತೂರು ಜೆಎಸ್ಎಸ್‌ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜ್ಞಾನೇಶ್‌ ಅವರು ನನಗೆ ಮಾರ್ಗದರ್ಶಕರು. ಅವರ ಸಲಹೆಯಂತೆ ಹಲವಾರು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ನಾನು ಕಲಿತಿದ್ದನ್ನು ಇತರರಿಗೂ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ಮನೆಯಲ್ಲಿಯೇ ಎರೆಹುಳು ಗೊಬ್ಬರ ಕೂಡ ತಯಾರಿಸುತ್ತೇನೆ ಎನ್ನುತ್ತಾರೆ ಜಗನ್ನಾಥನ್‌.

ಒಟ್ಟಾರೆ ವಾರ್ಷಿಕ ಅರಿಶಿನದಿಂದ 1.50 ಲಕ್ಷ, ತೆಂಗಿನಿಂದ 34 ಸಾವಿರ ರು. ಆದಾಯ ಗಳಿಸುತ್ತಾರೆ.

ಸಂಪರ್ಕ ವಿಳಾಸ

ಆರ್‌. ಜಗನ್ನಾಥನ್‌ ಬಿನ್‌ ರಂಗರಾಜನ್‌

ಗದ್ದಿಗೆ

ಹುಣಸೂರು ತಾಲೂಕು

ಮೈಸೂರು ಜಿಲ್ಲೆ

ಮೊ.99728 33089 ಕೋಟ್‌

ಕೃಷಿಯನ್ನು ಆರಾಮವಾಗಿ ಮಾಡಬಹುದು. ಆದರೆ ಯಾವು ವಸ್ತುವನ್ನು ಎಲ್ಲಿ ಮಾರಾಟ ಮಾಡಬೇಕು ಎಂಬ ಐಡಿಯಾ ಇರಬೇಕು.

ಸ್ವಲ್ಪ ಓದು ಗೊತ್ತಿದ್ದರೂ ವಿಚಾರ ತಿಳಿದುಕೊಂಡು ಕೃಷಿಯನ್ನು ಚೆನ್ನಾಗಿ ಮಾಡಬಹುದು.

- ಆರ್‌. ಜಗನ್ನಾಥನ್‌, ಗದ್ದಿಗೆ

---

ಬಾಕ್ಸ್‌...

ಟೊಮ್ಯಾಟೋಗೆ ಬೆಲೆ ಸಿಗಲಿಲ್ಲ ಅಂದ್ರೆ ಕೆಚಪ್‌ ತಯಾರಿಸಿ ಮಾರಾಟ ಮಾಡಿ!

ಟೊಮ್ಯಾಟೋ ಬೆಳೆಯುವ ರೈತರಿಗೆ ಪ್ರತಿ ಕೆಜಿಗೆ 2,5,10,20 ರು.- ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ದರ ಸಿಗುತ್ತದೆ. ಮಾರುಕಟ್ಟೆಯಲ್ಲಿ ದರ ಕುಸಿತಾಗ ರೈತರು ಆಕ್ರೋಶಗೊಂಡು ಬೀದಿಗೆ ಚೆಲ್ಲುತ್ತಾರೆ. ಇದರ ಬದಲು ಸೋಲಾರ್‌ ಡ್ರೈಯರ್‌ ಮೂಲಕ ಟೋಮ್ಯಾಟೊ ಒಣಗಿಸಿ, ಪುಡಿ ಮಾಡಿ, ಕೆಚಪ್‌ ಮಾಡಿ ಮಾರಾಟ ಮಾಡಬಹುದು. ಆತನೇ ಎಫ್ಎಎಸ್ಎಸ್ಐನಿಂದ ಬ್ರ್ಯಾಂಡ್‌ ಮಾಡಬಹುದು. ಸ್ಥಳೀಯವಾಗಿ ಗೋಬಿ ಅಂಗಡಿಗಲು, ಹೋಟೆಲ್‌ಗಳು, ರೆಸಾರ್ಟ್‌ಗಳಿಗೆ ಮಾರಾಟ ಮಾಡಿದರೆ ಲಾಭ ಗಳಿಸಬಹುದು. ಮೈಸೂರು- ಶ್ರೀರಂಗಪಟ್ಟಣ ನಡುವೆ ಇರುವ ಅಂಗಡಿ, ಹೋಟೆಲ್‌ಗಳಿಗೆ ಪೂರೈಸೆ, ವಾರಕ್ಕೊಮ್ಮೆ ಹಣ ಸಂಗ್ರಹಿಸಬುಹುದು ಎಂದು ಜಗನ್ನಾಥನ್‌ ಹೇಳುತ್ತಾರೆ. ಅವರ ತಲೆಯಲ್ಲಿ ಈ ರೀತಿಯ ಹತ್ತಾರು ಐಡಿಯಾಗಳಿವೆ. ಪಿವಿಸಿ ಪೈಪ್‌ನಲ್ಲಿ ಜೇನು ಕೃಷಿ!

ಸಾಮಾನ್ಯವಾಗಿ ಜೇನುಕೃಷಿಗೆ ಮರದ ಪೆಟ್ಟಿಗೆ ಬಳಸುತ್ತಾರೆ. ಆದರೆ ಆ ಪೆಟ್ಟಿಗೆಗಳು ಬೇಗ ಹಾಳಾಗುತ್ತವೆ. ಇದನ್ನು ತಪ್ಪಿಸಲು ಹಾಗೂ ದೀರ್ಘ ಬಾಳಿಕೆ ಬರುವಂತೆ ಮಾಡಲು ಪಿವಿಸಿ ಪೈಪ್‌ ಮೂಲಕ ಜೇನು ಸಾಕಾಣಿಕೆ ಮಾಡುವ ವಿಧಾನವನ್ನು ಜಗನ್ನಾಥನ್‌ ಸ್ವತಃ ಸಿದ್ಧಪಡಿಸಿದ್ದಾರೆ. ಪಿವಿಸಿ ಪೈಪ್‌ಗಳ ಮೂಲಕ ಜೇನು ಸಾಕಾಣಿಕೆ ಮಾಡಬಹುದು. ಟೆರೇಸ್‌ ಗಾರ್ಡನ್‌ನಲ್ಲಿ ಕೂಡ ಈ ಪೈಪ್‌ಗಳನ್ನು ನೇತು ಹಾಕಬಹುದು.

PREV