ಹುಬ್ಬಳ್ಳಿ: ಪುಣೆಯಲ್ಲೇ ತಡೆದಿದ್ದರು.. ಇಲ್ಲೇ ನಮ್ಮನ್ನು ಅರೆಸ್ಟ್ ಮಾಡ್ತಾರೆ ಅಂತ ಅನ್ಕೊಂಡಿದ್ದೀವಿ.. ಆದರೆ ಅದ್ಹೇಗೋ ಮತ್ತೆ ಅಲ್ಲಿಂದ ಅಯೋಧ್ಯೆಗೆ ತೆರಳಲು ಅವಕಾಶ ಸಿಕ್ತು.. ಹೋದೆವು. ಕರಸೇವೆಯಲ್ಲೂ ಭಾಗವಹಿಸಿದೆವು. 1992ರ ಡಿ. 7ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. ಅದರಲ್ಲಿ ನಾವೂ ಪಾಲ್ಗೊಂಡಿದ್ದೆ. ಅದೊಂದು ಅದ್ಭುತ ಹಾಗೂ ಮರೆಯಲಾರದ ಅನುಭವ..!
ಇದು 1992ರಲ್ಲಿ ಬಾಬರಿ ಮಸೀದಿ ನೆಲಸಮವಾದಾಗ ಕರಸೇವೆಯಲ್ಲಿ ಪಾಲ್ಗೊಂಡಿದ್ದ ರಂಗಾಬದ್ದಿಯ ಮಾತು.ಮಾಜಿ ಶಾಸಕ ಅಶೋಕ ಕಾಟವೆ ಹಾಗೂ ರಂಗಾಬದ್ದಿ ನೇತೃತ್ವದಲ್ಲಿ ಒಂದು ತಂಡ ಕರಸೇವೆಗೆಂದು ತೆರಳಿತ್ತು. ಬರೋಬ್ಬರಿ 176 ಜನರ ತಂಡ ತೆರಳಿತ್ತು. ಇವರ ತಂಡ ರೈಲಿನಲ್ಲಿ ತೆರಳುತ್ತಿತ್ತು. ಕಾಯ್ದಿರಿಸಿದ ಬೋಗಿಯಲ್ಲಿ ಹತ್ತಿದ್ದರು. ಪುಣೆಯಲ್ಲಿ ಅಲ್ಲಿ ರೈಲ್ವೆ ಅಧಿಕಾರಿಗಳು ಇವರನ್ನು ಕೆಳಕ್ಕಿಳಿಸಿ ಇಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇಲ್ಲೇ ಇಳಿದುಕೊಳ್ಳಿ ಎಂದು ನುಡಿದಿದ್ದರು. ನಾವು ಯಾವ ಪ್ರಯಾಣಿಕರಿಗೂ ತೊಂದರೆ ಕೊಡಲ್ಲ. ನೀವು ಕರೆದುಕೊಂಡು ಹೋಗದಿದ್ದರೆ ನಾವು ಇಲ್ಲೇ ಹಳಿ ಮೇಲೆ ಕುಳಿತು ಪ್ರಾಣ ಬಿಡುತ್ತೇವೆ ನೋಡಿ ಎಂದೆವು. ಉಳಿದ ಪ್ರಯಾಣಿಕರು ನಮಗೆ ಸಹಕಾರ ನೀಡಿದರು. ಆ ಮೇಲಷ್ಟೇ ನಮ್ಮನ್ನು ರೈಲ್ವೆ ಅಧಿಕಾರಿಗಳು ಕರೆದುಕೊಂಡು ಹೋದರು.
ಅಲ್ಲಿಂದ ಅದ್ಹೇಗೋ ಅಯೋಧ್ಯೆಗೆ ತೆರಳಿದೇವು. ಅಲ್ಲಿ ಪ್ರತಿಭಾಗದಿಂದಲೂ ಬಂದಿದ್ದವರಿಗೆ ಪ್ರತ್ಯೇಕವಾಗಿ ಟೆಂಟ್ ಅಳವಡಿಸಿದ್ದರು. ನಮಗೂ ಪ್ರತ್ಯೇಕವಾದ ಟೆಂಟ್ ಇತ್ತು. ಅಲ್ಲೇ ಉಳಿದು ಕರಸೇವೆಯಲ್ಲಿ ಭಾಗವಹಿಸಿದ್ದೇವು. ಡಿ. 6ಕ್ಕೆ ಮಸೀದಿಯೇನೋ ನೆಲಸಮವಾಯಿತು. ಎಲ್ಲೆಡೆ ನೂಕು ನುಗ್ಗಾಟ, ತಳ್ಳಾಟ ಮಾಮೂಲಿಯಾಗಿತ್ತು. ನಮ್ಮ ಕೈಯಲಾದಷ್ಟು ಕರಸೇವೆಯಲ್ಲಿ ನಾವು ಭಾಗವಹಿಸಿದೆವು. ಮಸೀದಿ ನೆಲಸಮವಾದ ಮರುದಿನವೂ ಅಲ್ಲೇ ಉಳಿದಿದ್ದೇ ನಾನು. ಅವತ್ತು ಬೆಳಗ್ಗೆ ಮಸೀದಿಯೊಳಗಿದ್ದ ರಾಮಲಲ್ಲಾನ ಮೂರ್ತಿನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿತ್ತು. ಆ ಪೂಜೆಗೆ ನಾನು ಕೂಡ ಸಾಕ್ಷಿಯಾಗಿದ್ದೆ. ಆದರೆ ಇಂದು ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆಗೆ ನನಗೆ ಹೋಗಲು ಆಗಿಲ್ಲ. ಅಂದು ನಡೆದಿದ್ದ ಪೂಜೆಯಲ್ಲಿ ಭಾಗವಹಿಸಿದ್ದೆ ಎಂಬುದು ನನಗೆ ಹೆಮ್ಮೆಯ ವಿಷಯ.₹1ಗೆ ಚಹಾ: ಅಯೋಧ್ಯೆಯಲ್ಲಿ ಅಲ್ಲಿನ ಜನತೆ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಇದ್ದರು. ಲಕ್ಷಾಂತರ ಸೇರಿದ್ದಾರೆ ಎಂದರೆ ಎಷ್ಟು ಬೇಕಾದರೂ ದರ ಮಾಡಿ ನಮಗೆ ಚಹಾ ಉಪಾಹಾರ ಕೊಡಬಹುದಿತ್ತು. ಆದರೆ ಲಕ್ಷಾಂತರ ಮಂದಿ ಬಂದಿದ್ದರೂ ಬರೀ ₹1ಗೆ ಚಹಾ ಕೊಡುತ್ತಿದ್ದರು. ಕೆಲವರು ಆ ದುಡ್ಡನ್ನು ಕೊಡದಿದ್ದರೂ ಒತ್ತಾಯ ಮಾಡುತ್ತಿರಲಿಲ್ಲ. "ಕರಸೇವಕ ಹೈ ನಾ ಚಲೇಗಾ ಜಾವೋ " ಎಂದು ಹೇಳುತ್ತಿದ್ದರು.
ಅಲ್ಲಿಂದ ಮರಳಿ ಬರುವಾಗ ರೈಲಿನಲ್ಲಿ ಅಕ್ಷರಶಃ ಜಾಗವೇ ಇರಲಿಲ್ಲ. ನಿಂತುಕೊಂಡೇ ಅಲ್ಲಿಂದ ಮರಳಿ ಬಂದೆವು. ಎಲ್ಲೇ ಸ್ಟೇಷನ್ ಬಂದರೂ ರೈಲಿನತ್ತ ಕಲ್ಲುಗಳು ತೂರಿಕೊಂಡು ಬರುತ್ತಿದ್ದವು. ನಾವು ನೋಡಿ ನೋಡಿ ಸಾಕಾಗಿ ಮುಂದೆ ಒಂದು ನಿಲ್ದಾಣದಲ್ಲಿ ಇಳಿದು ನಾವು ಕಲ್ಲುಗಳನ್ನು ಆರಿಸಿಕೊಂಡು ಸಂಗ್ರಹಿಸಿಟ್ಟುಕೊಂಡಿದ್ದೆವು. ಅವರು ದಾಳಿ ನಡೆಸಿದ ಬಳಿಕ ನಾವು ಪ್ರತಿದಾಳಿ ಮಾಡಲು ಶುರು ಮಾಡಿದೆವು. ಇನ್ನೇನು ಜೀವ ಕೈಯಲ್ಲಿ ಹಿಡಿದುಕೊಂಡು ಮರಳಿ ಊರಿಗೆ ಬಂದರೆ ಇಲ್ಲೂ ಕರ್ಪ್ಯೂ, ಗಲಾಟೆ ನಡೆದಿತ್ತು. ಮನೆಗೆ ಹೋಗುವುದು ಕಷ್ಟಕರವೆನಿಸಿತು. ನಮ್ಮನ್ನು ನಡುದಾರಿಯಲ್ಲೇ ಹೊಡೆದು ಕೊಂದೇ ಹಾಕುತ್ತಾರೇನೋ ಅಂತನೂ ಅನಿಸಿತ್ತು. ಆದರೆ, ಏನೂ ಸಮಸ್ಯೆಯಾಗಲಿಲ್ಲ. ಸುರಕ್ಷಿತವಾಗಿ ಮನೆ ತಲುಪಿದೆವು ಎಂದು ಅಂದಿನ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುತ್ತಾರೆ.ಇದೀಗ ರಾಮಮಂದಿರ ನಿರ್ಮಾಣ ಆಗುತ್ತಿದೆ. ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಇದು ಭಾರತದ ಹೆಮ್ಮೆಯ ವಿಷಯ. ಆದರೆ ಅಂದು ನಮ್ಮ ಹೋರಾಟ ಮರೆಯಲು ಸಾಧ್ಯವೇ ಇಲ್ಲ. ಈಗಲೂ ಅಂದಿನ ಘಟನೆಗಳೆಲ್ಲ ಕಣ್ಣಿಗೆ ಕಟ್ಟಿದಂತಾಗುತ್ತದೆ. ನೆನಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ ಎಂದು ಮೆಲುಕು ಹಾಕುತ್ತಾರೆ.