ಕನಕಪುರ : ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದರು.
ಕನಕಪುರದ ನಿವಾಸದಲ್ಲಿ ಕನಕಪುರ, ರಾಮನಗರ, ಚನ್ನಪಟ್ಟಣ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜಿಲ್ಲೆಯ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನನ್ನ ನೋಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ಇನ್ನು ಮುಂದೆ ತಿಂಗಳಲ್ಲಿ ಪ್ರತಿ ಎರಡು ಮತ್ತು ಮೂರನೇ ಶನಿವಾರ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಉತ್ತರಿಸಿ, ಕಳೆದ 2–3 ವರ್ಷಗಳಿಂದ ಕುಮಾರಸ್ವಾಮಿಯ ಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿಮೀರಿದ್ದು ನಾನು ಎಷ್ಟು ದಿನ ಸಹಿಸಲಿ, ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ, ನನ್ನ ವಿರುದ್ಧ ಅವರ ಬಳಿ ಇರುವ ದಾಖಲೆಗಳನ್ನ ಆದಷ್ಟು ಬೇಗ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಸದನದಲ್ಲಿ ಚರ್ಚೆ ಮಾಡಲಿ: ನನ್ನ ವಿರುದ್ಧ ಇಲ್ಲ- ಸಲ್ಲದ ಆರೋಪಗಳನ್ನು ಹಾದಿ-ಬೀದಿಯಲ್ಲಿ ಮಾಡುತ್ತಾ ಕಾಲ ಕಳೆಯುವ ಬದಲು ಸದನದಲ್ಲಿ ಚರ್ಚೆ ಮಾಡಲಿ, ಎಸ್.ಎಂ ಕೃಷ್ಣ ಅವರ ಅಳಿಯನ ಸಾವಿಗೆ ಯಾರು ಕಾರಣ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನಾನು ಅವರ ತಂದೆ ದೇವೇಗೌಡರ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ, ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ, ನನ್ನ ಹಾಗೂ ಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೇನು ಗೊತ್ತು? ಅವರಿಗೆ ಹುಚ್ಚು ಹಿಡಿದಿದೆ ಎಂದು ನನಗೆ ಅನಿಸುತ್ತಿದ್ದು ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದ ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ ಎಂದು ಹೇಳಿದರು.
ಬಡವರ ಆಸ್ತಿ ಲೂಟಿ ಮಾಡಿ ಹಣ ಸಂಪಾದನೆ ಮಾಡಿದ್ದೇನೆ ಎಂದು ಆರೋಪ ಮಾಡಿರುವ ಕುಮಾರಸ್ವಾಮಿ, ಯಾವ ಬಡವನ ಆಸ್ತಿ ಲೂಟಿ ಮಾಡಿದ್ದೇನೆ, ಆತನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಲಿ, ನಾವು ಬಡವರಿಗೆ ತೊಂದರೆ ನೀಡಿ ಆಸ್ತಿ ಕಿತ್ತುಕೊಂಡಿರುವುದು ನಮ್ಮ ಜಾಯಮಾನದಲ್ಲೇ ಇಲ್ಲ. ನಾವು ಬಡವರು, ಹೊಲ ಉಳುಮೆ ಮಾಡಿಕೊಂಡಿದ್ದೆವು. ನಾನು ಬೆಂಗಳೂರಿನ ಎನ್‌ಪಿಎಸ್ ಶಾಲೆಯಲ್ಲಿ ಓದಿ ಬೆಳೆದು ಬಂದಿರುವುದು ನನ್ನ ಇತಿಹಾಸ ಎಂದರು.
ಸದನದಲ್ಲಿ ಬಂದು ಮಾತಾಡಲಿ:
ಸಿಎಂ ಸದನದಲ್ಲಿ ಉತ್ತರ ನೀಡದೇ ರಣಹೇಡಿಯಂತೆ ಕದ್ದು ಓಡುತ್ತಾರೆಂಬ ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ಹೇಡಿ ಯಾರು ಎಂಬುದನ್ನು ಸದನದಲ್ಲಿ ಬಂದು ಮಾತನಾಡಲಿ, ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗ್ತಾರೆ ಎಂಬ ಅವರ ಹೇಳಿಕೆ ನಮ್ಮ ಮೇಲೆ ಕಣ್ಣಾಕಿದರೂ ಅದೇ ಸಮಸ್ಯೆ ಆಗುತ್ತದೆಯಲ್ಲವೆ ಎಂದು ತಿಳಿಸಿದರು.
ಎಷ್ಟು ದಿನ ಸಹಿಸುವುದು:
ಕುಮಾರಸ್ವಾಮಿ ಹಾಗೂ ನಿಮ್ಮ ನಡುವೆ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇದನ್ನು ಆರಂಭಿಸಿದ್ದು ಯಾರು? ಕುಮಾರಸ್ವಾಮಿ ನನ್ನ ಬಗ್ಗೆ ಏನೆಲ್ಲಾ ಹೇಳಿದರು? ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕರಿಸಿದ್ದೆ, ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕುಳಿತುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಗನ್ ಪಾಯಿಂಟ್ ಇಟ್ಟಿದ್ದರೆ ಎಫ್ಐಆರ್ ದಾಖಲಿಸಲಿ:
ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಚ್ಚಿಡಲಿ, ನಾನು ವಿಧವೆಯರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸ ಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ಎಫ್ಐ ಆರ್ ದಾಖಲಿಸಲಿ ಎಂದು ಸವಾಲೆಸೆದರು. ನಾನು ಯಾರಿಗೆ ಗನ್ ಪಾಯಿಂಟ್ ಇಟ್ಟು ಆಸ್ತಿ ಬರೆಸಿ ಕೊಂಡಿದ್ದೇನೆ ಹೇಳಲಿ, ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ ದಲಿತರ ಭೂಮಿ ಲೂಟಿ ಮಾಡಿದ್ದಾರೆ ಎಂದು ಯೋಗೇಶ್ವರ್ ಮಾತನಾಡಿದ್ದಾರೆ. ಅಲ್ಲಂ ವೀರಭದ್ರಪ್ಪ ಖರೀದಿ ಮಾಡಿದ್ದ ಆಸ್ತಿಯನ್ನು ನನ್ನ ಮಗಳು ಖರೀದಿ ಮಾಡಿದ್ದಾಳೆ. ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಾನು ಆಸ್ತಿ ಖರೀದಿ ಮಾಡುತ್ತೇನೆ, ಇನ್ನು ಮಾರಟವಾಗಲು ಸಿದ್ಧವಿರುವ ಜಾಗಗಳಿದ್ದರೆ ಹೇಳಿ ಖರೀದಿಸುತ್ತೇನೆ.
ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ, ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ, ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು, ನಾನು ಜೈಲಲ್ಲಿದ್ದಾಗ ಬಂದು ನನ್ನ ನೋಡಿದ್ದರು, ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಎಫ್ಐಆರ್ ದಾಖಲಿಸಿದ್ದರು. ಅದೆಲ್ಲವನ್ನು ಮರೆತು ಅವರು ಮುಖ್ಯಮಂತ್ರಿಯಾಗಲು ನೆರವಾಗಿದ್ದೆ, ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು.
ನಾನು ಪ್ರಧಾನಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ, ನಾನು ಬಡವನಲ್ಲದಿದ್ದರೂ ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದವನು. ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂತಹ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಮಾಡಬಾರದ ತಪ್ಪು ಏನು ಮಾಡಿದ್ದೇನೆ ತಿಳಿಸಲಿ. ನೀನು ದೆಹಲಿಯಲ್ಲಿ ನನ್ನ ವಿರುದ್ಧ ಯಾರಿಗೆ ಯಾವ ಪತ್ರ ನೀಡಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ತಂದೆ ಏನೇನು ಬರೆದಿದ್ದೀರಿ ಎಂದು ನನಗೆ ಮಾಹಿತಿ ಇದೆ, ನನ್ನ ವಿರುದ್ಧ ದೆಹಲಿಯಲ್ಲಿ ಏನೆಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದಿದೆ. ನಾನು ಹಾಸನದಲ್ಲಿ ಪೆನ್ ಡ್ರೈವ್ ಹಂಚಿದ್ದೇನೆ ಎಂದು ಕುಮಾರಸ್ವಾಮಿ ಯಾವ ಆಧಾರದಲ್ಲಿ ಆರೋಪ ಮಾಡಿದರು? ನಾನು ಅಂತಹ ಕೆಲಸ ಮಾಡಲು ಮೂರ್ಖನಲ್ಲ, ನಾನು ಅದನ್ನು ಚುನಾವಣೆಗೆ ಬಳಸಿಕೊಳ್ಳುವುದಾದರೆ ನೇರವಾಗಿಯೇ ಬಳಸಿಕೊಳ್ಳುತ್ತಿದ್ದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್. ರವಿ, ತಹಶೀಲ್ದಾರ್ ಸ್ಮಿತಾರಾಮು, ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್, ಮುಖಂಡರಾದ ಎಚ್.ಕೆ ಶ್ರೀಕಂಠು, ದಿಲೀಪ್ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಜೈಲಿಗೆ ಹಾಕುವ ಸಂಚು: ನಿಮ್ಮನ್ನು ಜೈಲಿಗೆ ಹಾಕಲು ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಮೊದಲಿಂದಲೂ ದೊಡ್ಡ ಸಂಚು ನಡೆದುಕೊಂಡು ಬಂದಿದೆ. ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ. ಶಿವಕುಮಾರ್ ನನ್ನ ಮೇಲೆ ಕಲ್ಲು ಬಂಡೆ ಎತ್ತಿಹಾಕಿದ್ದಾರೆಂದು ಕುಮಾರಸ್ವಾಮಿ ತಿಳಿಸಿದ್ದು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದು ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ. ನಮ್ಮ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇದು ರಾಜಕೀಯ ಷಡ್ಯಂತ್ರವಾಗಿದ್ದು ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಅವರಿಗೆ ಭ್ರಮೆ, ಅವರೆಲ್ಲಾ ಹಗಲು ಗನಸು ಕಾಣುತ್ತಿದ್ದು ಇದು ಸಾಧ್ಯವೇ ಇಲ್ಲ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ