ಕನ್ನಡಪ್ರಭ ವಾರ್ತೆ ಹನೂರು
ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ 37 ಸಾವಿರ ಮತಗಳ ಮುನ್ನಡೆ ತಂದು ಕೊಟ್ಟಿರುವುದು ನನ್ನ ಕೈ ಬಲಪಡಿಸಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಕರೆಯಲಾಗಿದ್ದ ಮುಖಂಡರ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದ ಕಾರ್ಯಕರ್ತರು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ತಮ್ಮ ವೈಯಕ್ತಿಕ ಒಳ ಜಗಳಗಳನ್ನು ಬಿಟ್ಟು ಮತದಾರರನ್ನು ಸಂಪರ್ಕ ಮಾಡಿರುವುದರಿಂದ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತ ಬಂದಿದೆ. ರಾಜ್ಯದಲ್ಲಿ ಇನ್ನು ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದಾಗಿತ್ತು. ಆದರೆ ನಮ್ಮ ನಾಯಕರ ಒಳ ಜಗಳ ಹಾಗೂ ಪಕ್ಷದಿಂದ ಹೆಚ್ಚಿನ ಅಧಿಕಾರ ಪಡೆದಿರುವ ಕೆಲವು ನಾಯಕರ ವೈಯಕ್ತಿಕ ವಿಚಾರದಿಂದ ನಾಲ್ಕರಿಂದ ಐದು ಸ್ಥಾನವನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುವ ಮಾಧ್ಯಮ ರಂಗ ಮೋದಿ ಪರವಾಗಿಯೇ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ 4 ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ನೀಡಿರುವ ಹೇಳಿಕೆಯನ್ನೇ ಸಮೀಕ್ಷೆಗಳಲ್ಲಿ ತೋರಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ಮಾಡದ ಪ್ರಧಾನಮಂತ್ರಿಯ ಕಾರ್ಯವೈಖರಿ ಬಗ್ಗೆ ಯಾವುದೇ ಒಂದು ಮಾಧ್ಯಮದವರು ಧ್ವನಿ ಎತ್ತದಿರುವುದು ವಿಷಾದನೀಯ. ಕಳೆದ ಎರಡು ದಿನಗಳಿಂದ ಟಿವಿ ಮಾಧ್ಯಮಗಳಲ್ಲಿ ತೋರಿಸಿದ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿದೆ. ಮತದಾರರು ನಿಜವಾದ ಫಲಿತಾಂಶವನ್ನು ನೀಡಿದ್ದಾರೆ.ನಮ್ಮ ಯುವ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಪಾದಯಾತ್ರೆ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಿದ ಫಲವಾಗಿ ಇಂದು ನೂರು ಸ್ಥಾನ ಪಡೆದಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಮೈತ್ರಿಕೂಟ ಶ್ರೀಮಂತರ ಪರವಾಗಿದ್ದು ಬಡವರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ದೇಶದಲ್ಲಿ ಈ ಬಾರಿ ಬಿಜೆಪಿಯನ್ನು ತಿರಸ್ಕಾರ ಮಾಡಿ ಇಂಡಿಯಾ ಮೈತ್ರಿಕೂಟದ ಕೈ ಬಲಪಡಿಸಿದ್ದಾರೆ ಎಂದರು. ಕಳೆದ 50 ವರ್ಷಗಳಲ್ಲಿ ನಡೆದಿರುವ ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚಿನ ಮತ ಪಡೆದುಕೊಂಡಿದೆ. ಇದುವರೆಗೂ ವಿರೋಧ ಪಕ್ಷಗಳು ಒಂದೇ ಒಂದು ಮತ ಅಂತರ ಪಡೆದಿಲ್ಲ, ಇದು ನಮ್ಮ ಕಾರ್ಯಕರ್ತರ ಶಕ್ತಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕೆಲವೊಂದು ನಿರ್ಧಾರಗಳಿಂದ ಸೋಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ಬರಲಿದ್ದು ಕಾರ್ಯಕರ್ತರು ಇದೇ ಉತ್ಸಾಹದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ: ನಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆಯುತ್ತೇವೆ ಎಂಬ ನಿರೀಕ್ಷೆ ಇತ್ತು ಆದರೆ 96,210 ಮತ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುನಿಲ್ ಬೋಸ್ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಕುಂದ ವರ್ಮ, ಈಶ್ವರ್, ಪಪಂ ಸದಸ್ಯ ಗಿರೀಶ್, ಸಂಪತ್, ಸುದೇಶ್, ಕೆಪಿಸಿಸಿ ಸದಸ್ಯ ಬಸವರಾಜು, ಮುಖಂಡ ಮದುವನಹಳ್ಳಿ ಶಿವಕುಮಾರ್, ಅಜ್ಜೀಪುರ ನಾಗರಾಜು, ಚೇತನ್ ದೊರೆರಾಜ್, ಮಾದೇಶ್, ಅಂಕರಾಜು, ಕಂಡಯ್ಯನಪಾಳ್ಯ ಗ್ರಾಮದ ಮಾದೇಶ್ , ಗ್ರಾಪಂ ಸದಸ್ಯ ಸಿದ್ದರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.