ಕನ್ನಡಪ್ರಭ ವಾರ್ತೆ ಕೊಪ್ಪಳ
ಗವಿಶ್ರೀಗಳಲ್ಲಿ ನನಗೆ ತಾಯ್ತನ ಕಂಡಿದೆ. ಅವರದು ಮಾತೃ ಹೃದಯ. ಹಿರೇಹಳ್ಳದ ಪುನಶ್ಚೇತನ ಮಾಡಿದರು. ಗಾಂಧಿ, ಬುದ್ದ, ಬಸವ, ಅಂಬೇಡ್ಕರ್ ಅವರನ್ನು ಗವಿಶ್ರೀಗಳಲ್ಲಿ ಕಂಡಿದ್ದೇನೆ. ಮನುಷ್ಯನಿಗೆ ಕೃತಜ್ಞತೆ ಕೊರತೆ ಇದೆ ಎಂದು ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ರಥೋತ್ಸವ ಉದ್ಘಾಟನಾ ಸಮಾರಂಭವನ್ನೂದ್ದೇಶಿಸಿ ಮಾತನಾಡಿದ ಅವರು, ಮಠಗಳು ಪ್ರಸಾದ, ಪ್ರವಚನ ವಿನಿಯೋಗ ಮಾಡಿದರೆ ಸಾಲದು, ಜನತೆಗೆ ದಾನದ ಪರಿಕಲ್ಪನೆ ಬೇಕು. ಆ ಕಲ್ಪನೆ ಈ ಜಾತ್ರೆಯಲ್ಲಿದೆ. ಗವಿಮಠ ಜಾತ್ರೆಯಲ್ಲಿ ಸಾಮಾಜಿಕ ಕ್ರಾಂತಿ ಇದೆ. ಮೌಢ್ಯ, ಕಂದಾಚಾರ, ಒಳ ಜಗಳ ಮನುಷ್ಯನಲ್ಲಿ ಆವರಿಸಿವೆ. ಅಂತಹ ಮತ್ಸರಗಳು ಹಳ್ಳಿಗಳನ್ನು ಸುಡುತ್ತಿದೆ ಎಂದರು.
ಇದು ನನ್ನ ಪೂರ್ವ ಜನ್ಮದ ಪುಣ್ಯ, ನಾನು ತರಗತಿಯಲ್ಲಿ ಪಾಠ ಮಾಡಿದ ಹಾಗೆ ಲಕ್ಷಾಂತರ ಜನರ ಎದುರು ಮಾತನಾಡುವ ಭಾಗ್ಯ ಸಿಕ್ಕಿದೆ. ಗವಿಶ್ರೀಗಳು ೨೫ ಹಳ್ಳಿಗೆ ನೀರುಣಿಸುವ ಕೆಲಸ ಮಾಡಿದ್ದಾರೆ. ಇದು ಭಕ್ತರೆ ಆಚರಿಸುವ ಜಾತ್ರೆ ಆಗಿದೆ. ದಾನದ ಕಲ್ಪನೆಯನ್ನು ಶ್ರೀಗಳು ಬೆಳೆಸುತ್ತಿದ್ದಾರೆ. ನಾನು ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇನೆ. ನಾನು ಬಿಂದು, ನೀವು ಸಿಂಧು ಎಂದು ಗವಿಶ್ರೀಗಳಿಗಳ ಕಾರ್ಯ ಬಣ್ಣಿಸಿದರು.ಕೊಪ್ಪಳ ಜನತೆಗೆ ಹೇಗಿದ್ದೀರಿ ಎಂದು ಕೇಳಿದರೆ, ಇಲ್ಲಿ ಎಲ್ಲರೂ ಅಜ್ಜಾರ ಅದಾರ ನೋಡಿಕೊಳ್ಳುತ್ತಾರೆ ಎನ್ನುತ್ತಾರೆ. ಇದು ಹೃದಯಕ್ಕೆ ತಟ್ಟಿತು. ಅಜ್ಜಾರ ಬಗ್ಗೆ ಭಕ್ತರಿಗೆ ಇರುವ ಗೌರವ ತೋರಿಸುತ್ತದೆ ಎಂದರು.
ಭೂಮಿ ನಮ್ಮ ಅಮ್ಮ, ಸೂರ್ಯ ನಮ್ಮಪ್ಪ. ಬಾಕಿ ಎಲ್ಲ ಅಣ್ಣ ತಮ್ಮ. ನಾವೆಲ್ಲ ಬಂಧುಗಳು ಎನ್ನುವುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ರಾಡಿ ನೀರು ಪಡೆಯುವ ತೆಂಗಿನಮರ ಎಳೆನೀರು ಕೊಡುತ್ತದೆ. ಕಲ್ಲಿನಿಂದ ಹೊಡೆಸಿಕೊಳ್ಳುವ ಮಾವಿನ ಗಿಡ ಹಣ್ಣು ನೀಡುತ್ತದೆ. ಇತ್ತೀಚೆಗೆ ಹೊಸ ಕಾಯಿಲೆ ಹುಟ್ಟಿಕೊಂಡಿದೆ. ನಾನಾಯಿತು, ನನ್ನ ಮನೆಯಾಯಿತು ಎನ್ನುವ ಕಾಯಿಲೆ ಬಂದಿದೆ. ಮೂರನೇ ಯುದ್ಧ ನಮ್ಮೊಳಗೆ ಈಗಾಗಲೇ ಬಂದು ಬಿಟ್ಟಿದೆ. ಆದರೆ ಗವಿಮಠದಲ್ಲಿ ಇಂಥ ಕಾರ್ಯಕ್ರಮದ ಮೂಲಕ ಅನ್ಯೂನ್ಯತೆ ಬಿತ್ತುತ್ತಿದ್ದಾರೆ ಎಂದರು.ಆಧ್ಯಾತ್ಮಿಕ ಎಂದರೆ ಬದುಕು. ನಾನು ಮಾಡಬೇಕಾದ ಕೆಲಸ ಏನು ಎನ್ನುವುದನ್ನು ಅರಿಯಬೇಕಾಗಿದೆ. ಅರ್ಥ ಮಾಡಿಕೊಂಡು ಬದುಕಬೇಕಾಗಿದೆ. ಋಣ ಪ್ರಜ್ಞೆ ಬೆಳೆಯಬೇಕಾಗಿದೆ. ನೀವು ಬೆಳೆದ ಊರಿಗೆ ಏನಾದರೂ ಮಾಡಬೇಕು. ನಿಮ್ಮ ಊರು ಮರೆತರೆ ಅದು ಸಾರ್ಥಕ ಬದುಕು ಆಗಲಾರದು. ಅದು ಅರಿವಿಲ್ಲದ ಬದುಕು ಎಂದರು.
ಗಾಂಧೀಜಿ ಅವರು ಹೇಳುವಂತೆ ಯಾವುದಾದರೂ ದೇಶದ ಘನತೆ ಅಳೆಯಬೇಕಾದರೆ ಆ ದೇಶದಲ್ಲಿನ ಹೆಣ್ಣುಮಕ್ಕಳು ಗೌರವದಿಂದ ಬದುಕುವಂತಾಗಬೇಕು. ಅಬಲೆಯರು, ನಿರ್ಗತಿಕರು, ಅಲೆಮಾರುಗಳು ಬಡವರು ನೆಮ್ಮದಿಯ ಬದುಕು ಸಾಗಿಸುವಂತಾಗಬೇಕು ಎಂದರು.