ಕನ್ನಡಪ್ರಭ ವಾರ್ತೆ ಹಾನಗಲ್ಲ
ಕಾಂಗ್ರೆಸ್ ಸಂಬಂಧಕ್ಕೆ ಗುಡ್‌ಬೈ ಹೇಳಿ, ಜೆಡಿಎಸ್ ಅಭ್ಯರ್ಥಿಯಾಗಿ ಪರಾಭವಗೊಂಡು, ತಮ್ಮ ರಾಜಕೀಯ ಇತಿಹಾಸದಲ್ಲಿ ಸಾಂಪ್ರದಾಯಿಕ ಎದುರಾಳಿ ಪಕ್ಷವಾದ ಬಿಜೆಪಿ ಮನೆ ಸೇರಿರುವ ಮಾಜಿ ಉಪಸಭಾಪತಿ, ಮಾಜಿ ಸಚಿವ ಮನೋಹರ ತಹಶೀಲ್ದಾರ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮೆಚ್ಚಿ ಬಿಜೆಪಿ ಸೇರಿದ್ದಾಗಿ ತಿಳಿಸಿದರು.ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪೫ ವರ್ಷ ಕಾಂಗ್ರೆಸ್ಸಿನ ಕಟ್ಟಾಳಾಗಿ, ಪಕ್ಷ ಕಟ್ಟಿ, ಪಕ್ಷಕ್ಕೆ ನ್ಯಾಯ ದೊರಕಿಸಿಕೊಟ್ಟು, ನಿಷ್ಠೆ ತೋರಿರುವುದಕ್ಕೆ ಕಾಂಗ್ರೆಸ್ ನನ್ನನ್ನು ೨೦೧೮ ರಿಂದ ನಿರ್ಲಕ್ಷಿಸುತ್ತ ಬಂದಿದೆ. ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ನನ್ನ ಟಿಕೆಟ್ ತಪ್ಪಿಸಿ ಹೊರಗಿನವರಿಗೆ ಮಣೆ ಹಾಕಿತು. ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ನೀಡುವುದಾಗಿ ಭರವಸೆ ಕೊಟ್ಟು ಮಾತು ತಪ್ಪಿತು. ಎಂಎಲ್‌ಸಿ ಮಾಡುವುದಾಗಿ ಹೇಳಿ ಕೈಕೊಟ್ಟಿತು. ಕಾಂಗ್ರೆಸ್‌ನಲ್ಲಿ ಪಕ್ಷ ಕಟ್ಟಿದವರಿಗೆ ಗೌರವವಿಲ್ಲ. ಈಗ ಬಂದು ಆಟ ಆಡುವವರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ಇದಕ್ಕೆಲ್ಲ ಬೇಸತ್ತು ನನ್ನ ಕಾರ್ಯಕರ್ತರು ಹಾಗೂ ಮತದಾರರ ಅಭಿಪ್ರಾಯದಂತೆ ಈ ರಾಷ್ಟ್ರ ರಕ್ಷಿಸುವ ಬಿಜೆಪಿ ಸೇರಿದ್ದೇನೆ ಎಂದರು.
ಬಿಜೆಪಿ ಸೇರುವ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ ಯಾವುದೇ ಬೇಡಿಕೆ ಇಡದೇ ಬೇಷರತ್ತಾಗಿ ಪಕ್ಷ ಸೇರುವ ನಿರ್ಣಯ ಘೋಷಿಸಿದ್ದೆ. ಅದರಂತೆ ಹಾನಗಲ್ಲ ತಾಲೂಕಿನ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಕೂಡ ಬಿಜೆಪಿಗೆ ನನ್ನನ್ನು ಸಂತೋಷದಿಂದ ಬರಮಾಡಿಕೊಳ್ಳಲು ಮುಂದಾದಾಗ ಅಷ್ಟೇ ಪ್ರಾಮಾಣಿಕವಾಗಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಇಚ್ಛಾಶಕ್ತಿಯಿಂದ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.೧೯೭೮ರಿಂದಲೇ ನನ್ನ ರಾಜಕೀಯ ಜೀವನ ಆರಂಭಿಸಿ ಕಾಂಗ್ರೆಸ್ ಹುರಿಯಾಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷಕ್ಕೆ ಗೌರವ ತರುವ ಕೆಲಸ ಮಾಡಿದ್ದೇನೆ. ನಾಲ್ಕು ಬಾರಿ ಶಾಸಕನಾಗಿ, ೨೦ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ನಾನೀಗ ನನ್ನ ಪೂರ್ಣ ಬದ್ಧತೆಯನ್ನು ಬಿಜೆಪಿಯ ಚುನಾವಣಾ ಯಶಸ್ಸಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ದೇಶಾಭಿವೃದ್ಧಿ ಕಾರ್ಯದಲ್ಲಿ ಪಕ್ಷದ ಮಾರ್ಗದರ್ಶನದಂತೆ ಸೇವೆ ಸಲ್ಲಿಸುವ ನಿರ್ಣಯದಲ್ಲಿದ್ದೇನೆ. ಇಷ್ಟರಲ್ಲೇ ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಹಾನಗಲ್ಲ ತಾಲೂಕಿನಲ್ಲಿ ನನ್ನನ್ನು ಬೆಂಬಲಿಸಿದ ಕಾರ್ಯಕರ್ತರು, ಅಭಿಮಾನಿಗಳನ್ನು ಒಗ್ಗೂಡಿಸಿ ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎಂದರು.
ಹಾನಗಲ್ಲ ತಾಲೂಕಿನಲ್ಲಿ ಏಕಮುಖಿ ಆಡಳಿತ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ನಡೆಯುತ್ತಿರುವ ನಿರಾತಂಕ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಕಮಿಷನ್ ಆವಾಂತರಗಳನ್ನು ಕೇಳುವವರಿಲ್ಲದಾಗಿದೆ. ಈಗ ಬಿಜೆಪಿ ಎಲ್ಲ ಹಿರಿ ಕಿರಿಯ ಮುಖಂಡರೊಂದಿಗೆ ಸಮಾಲೋಚಿಸಿಕೊಂಡು ಹಾನಗಲ್ಲ ತಾಲೂಕಿನಲ್ಲಿ ಇಂತಹ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸನ್ನದ್ಧನಾಗುತ್ತೇನೆ ಎಂದರು.