ಮೈಸೂರು : ನನ್ನ ಹೆಸರಿನಲ್ಲಿ ಅಥವಾ ನನ್ನ ಬೇನಾಮಿ ಹೆಸರಿನಲ್ಲಿ ಎಂಡಿಎಯಲ್ಲಿ ಒಂದೇ ಒಂದು ನಿವೇಶನ ಇದ್ದರೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್ ಸವಾಲು ಹಾಕಿದರು.
ಮೈಸೂರಿನಲ್ಲಿ ಎಂಡಿಎ ಭ್ರಷ್ಟಾಚಾರ ವಿಚಾರ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಸ್ಪಷ್ಟಪಡಿಸಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆ ಸೈಟ್ ಗಳನ್ನ ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಗೆ ಚರ್ಚೆಗೆ ತಂದು ಕೊಡಬೇಕು. ಇದ್ಯಾವಾ ರೂಲ್ಸ್ ಗಳನ್ನ ಅಂದಿನ ಆಯುಕ್ತರು ಫಾಲೋ ಮಾಡಲಿಲ್ಲ. ಹೀಗಾಗಿ, ಅಂದಿನ ಆಯುಕ್ತರನ್ನಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ, ಜಾತಿಯ ಪ್ರಭಾವದಿಂದ ಅವರ ಉಳಿಯುವ ರೀತಿ ಆಯಿತು. ಅವತ್ತೇ ಸರಿಯಾದ ಕ್ರಮ ಆಗಿದ್ದರೇ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿವೇನೋ. ಈಗಲಾದರೂ ಈ ಬಗ್ಗೆ ತನಿಖೆಯಾಗಿ ವ್ಯವಸ್ಥೆ ಬದಲಾಗಲಿ ಎಂದು ಅವರು ಆಗ್ರಹಿಸಿದರು.
ಪ್ರತಿ ಮೀಟಿಂಗ್ ನಲ್ಲೂ ಸ್ಥಳೀಯ ಶಾಸಕರ ಫೈಲ್ ಇರುತ್ತಿತ್ತು:
ಎಂಡಿಎ ಪ್ರತಿ ಮೀಟಿಂಗ್ ನಲ್ಲಿ ಸ್ಥಳೀಯ ಶಾಸಕರ ಫೈಲ್ ಗಳೇ ಇರುತ್ತಿತ್ತು ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಶಾಸಕರ ಹೆಸರಿನ ಫೈಲ್ ಗಳು ಚರ್ಚೆಯಾಗದೆ ಪಾಸ್ ಆಗುತ್ತಿತ್ತು. ಎಂಡಿಎ ಸಭೆಯ ಬಹುತೇಕ ಸಬ್ಜೆಕ್ಟ್ ಗಳು ಶಾಸಕರಿಗಳಿಗೆ ಸೇರಿದ್ದವು. ಇಲ್ಲಿ ಎಂಡಿಎ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನು ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರೂ ಲಾಭಿ ಮಾಡುತ್ತಾರೆ. ಎಂಡಿಎ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ, ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಅವರು ಒತ್ತಾಯಿಸಿದರು.