ಸುಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನ್ಯಾ.ಸಂತೋಷ್ ಹೆಗ್ಡೆ ಸಂವಾದ
ಕನ್ನಡಪ್ರಭ ವಾರ್ತೆ ಕುಂದಾಪುರಹಿಂದೆ ಸಮಾಜದಲ್ಲಿ ಸಾಕಷ್ಟು ಮೌಲ್ಯಗಳಿದ್ದವು. ಆದರೆ ಈಗ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜವಾಗಿ ಬದಲಾಗಿ ನಿಂತಿದ್ದು, ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಕ್ರಾಂತಿಯ ಮೂಲಕ ಬದಲಾವಣೆಯಾದರೆ ಈ ದೇಶ ಒಡೆದು ಚೂರಾಗುವುದಲ್ಲದೇ, ಶಾಂತಿ ಸೌಹಾರ್ದ ಮರೆಯಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.ಕುಂದಾಪುರದ ಯಡಾಡಿ-ಮತ್ಯಾಡಿಯಲ್ಲಿನ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವಗಳನ್ನು ಹೊಂದಿರಬೇಕು. ಅಕ್ರಮವಾಗಿ ಗಳಿಸಿದ ಹಣದಿಂದ ಎಂದಿಗೂ ನೆಮ್ಮದಿ ಸಾಧ್ಯವಿಲ್ಲ. ತೃಪ್ತಿ ಎಂಬ ಮೌಲ್ಯ ಅಳವಡಿಸಿಕೊಂಡರೆ ನೆಮ್ಮದಿಯ ನಿದ್ರೆ ಮಾಡಬಹುದು. ಹಿಂದೆಲ್ಲ ತಪ್ಪು ಮಾಡಿದವರಿಗೆ ಅವರನ್ನು ದೂರ ಇಡುವ ಮೂಲಕ ಶಿಕ್ಷೆ ನೀಡಲಾಗುತ್ತಿತ್ತು. ಆದರೆ ಈಗ ಜೈಲಿಗೆ ಹೋಗಿ ಖುಲಾಸೆಯಾಗದೆ ಜಾಮೀನಿನ ಮೂಲಕ ಹೊರಗೆ ಬಂದವನಿಗೆ ಹಾರ ತುರಾಯಿ ಹಾಕಿ ಸ್ವಾಗತ ಕೋರುತ್ತೇವೆ. ಪ್ರಾಮಾಣಿಕತೆ, ಮೌಲ್ಯಗಳು ಹಣದ ಮುಂದೆ ಗೌಣವಾಗಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟುವುದಕ್ಕೆ ನಮ್ಮ ಯುವಕರನ್ನು ಸೃಷ್ಟಿ ಮಾಡಬೇಕು ಎಂಬ ಪಣತೊಟ್ಟು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ, ದೇಶಪ್ರೇಮ, ಮುಂದಿನ ಜನಾಂಗದ ಬಗ್ಗೆ ಕಾಳಜಿ ಅನುಕರಣೀಯವಾದುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ, ಸಂತೋಷ್ ಹೆಗ್ಡೆಯವರು ದೇಶದಲ್ಲಿನ ಭ್ರಷ್ಟಾಚಾರ, ಅನ್ಯಾಯಗಳ ವಿರುದ್ಧ ದನಿ ಎತ್ತಿದವರು. ನಿವೃತ್ತಿ ಜೀವನದಲ್ಲಿಯೂ ಕೈ ಕಟ್ಟಿ ಕುಳಿತವರಲ್ಲ. ಈ ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ ಎಂದು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಗುಣ ಬೆಳೆಸಿಕೊಳ್ಳಬೇಕು. ಎಸಗಿದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟರೆ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.