ಹಾವೇರಿ : ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಈಗ ಮತ್ತೆ ಅದೇ ರೀತಿ ಗ್ಯಾರಂಟಿ ಕಾರ್ಡ್ ಹಂಚಲು ಶುರು ಮಾಡಿದ್ದಾರೆ. ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡ್ ಕೊಡಲು ಬಂದರೆ ತಿರಸ್ಕರಿಸಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಗೆದ್ದರೆ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಯುವಕರಿಗೆ ಒಂದು ಲಕ್ಷ ಕೊಡುತ್ತೇವೆ ಅಂತ ಹೇಳಿದ್ದಾರೆ. ೫೪೩ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿರುವುದೇ 200 ಕ್ಷೇತ್ರಗಳಲ್ಲಿ. ಲೋಕಸಭೆಯಲ್ಲಿ ಬಹುಮತಕ್ಕೆ ೨೭೨ ಸ್ಥಾನ ಬೇಕು. ೨೦೦ ಸ್ಥಾನದಲ್ಲಿ ಸ್ಪರ್ಧಿಸಿರುವ ಇವರು ಅಧಿಕಾರಕ್ಕೆ ಬರಲು ಸಾದ್ಯವೇ ಇಲ್ಲ. ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯ ಈಗ ಕೊಡುತ್ತಿರುವ ಗ್ಯಾರಂಟಿನೇ ಗಳಗಂಟಿಯಾಗಿವೆ. ಬಹುತೇಕರಿಗೆ ಗ್ಯಾರಂಟಿ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮುಖಂಡರಾದ ಬಸವರಾಜ ಕೇಲಗಾರ, ಮನೋಹರ ತಹಸೀಲ್ದಾರ, ಭರತ್ ಬೊಮ್ಮಾಯಿ, ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣವರ, ಶೋಭಾ ನಿಸ್ಸೀಮಗೌಡ್ರ, ಸೃಷ್ಟಿ ಪಾಟೀಲ, ಭಾರತಿ ಅಳವಂಡಿ, ಸಿದ್ದರಾಜ ಕಲಕೋಟಿ, ಮಲ್ಲಿಕಾರ್ಜುನ ಬಾಳೇಕಾಯಿ, ಅಭಿಷೇಕ ಗುಡಗೂರ ಇತರರು ಇದ್ದರು.
ಏತ ನೀರಾವರಿ ಯೋಜನೆ
ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾವೇರಿ ಜಿಲ್ಲೆಯಲ್ಲಿ ಎಂಟು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ಅವು ಶೇ. ೯೦ರಷ್ಟು ಕಾರ್ಯ ಮುಕ್ತಾಯವಾಗಿದೆ. ಅದನ್ನು ಪೂರ್ಣಗೊಳಿಸಲು ಈಗಿನ ಸರ್ಕಾರಕ್ಕೆ ಆಗಿಲ್ಲ. ಹಾವೇರಿಗೆ ಮೆಡಿಕಲ್ ಕಾಲೇಜ್, ಮೆಗಾ ಡೈರಿ ನಾವು ಅಧಿಕಾರದಲ್ಲಿದ್ದಾಗ ತಂದಿದ್ದೇವೆ. ವಿಶ್ವ ವಿದ್ಯಾಲಯ ನಾವು ತಂದಿದ್ದೇವೆ. ಅದಕ್ಕೆ ಹಣ ಕೊಡಲು ಇವರಿಗೆ ಆಗುತ್ತಿಲ್ಲ. ಈ ಜಿಲ್ಲೆಗೆ ಒಬ್ಬ ಮಂತ್ರಿ ಮಾಡಲು ಇವರಿಗೆ ಆಗುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಭರ್ಜರಿ ರೋಡ್ ನಡೆಸಿ ಮತಯಾಚಿಸಿದ ಬೊಮ್ಮಾಯಿ
ಹಾವೇರಿ : ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ ಏರ್ಪಡಿಸಿದ್ದ ಬೃಹತ್ ರೋಡ್ ಶೋನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚಿಸಿದರು. ನಗರದ ಮೈಲಾರ ಮಹದೇವಪ್ಪ ವೃತ್ತದಿಂದ ಆರಂಭಗೊಂಡ ಬಹತ್ ರೋಡ್ ಶೋ ಮಹತ್ಮಾಗಾಂಧಿ ವೃತ್ತ, ಜೆ.ಪಿ. ಸರ್ಕಲ್, ಜೆ.ಎಚ್. ಪಟೇಲ್ ಸರ್ಕಲ್, ಮುನ್ಸಿಪಲ್ ಹೈಸ್ಕೂರ್ ರಸ್ತೆ ಮೂಲಕ ಸಾಗಿ ಕೊಳ್ಳಿ ಪಾಲಿಕೆಟ್ನಿಕ್ ಕಾಲೇಜು ಮೈದಾನಕ್ಕೆ ಆಗಮಿಸಿತು. ಬೃಹತ್ ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಜಯಘೋಷಗಳನ್ನು ಮೊಳಗಿಸಿದರು. ಮೆರವಣಿಗೆ ಉದ್ದಕ್ಕೂ ಬಿ.ವೈ. ವಿಜಯೇಂದ್ರ ಅವರು ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ, ಅರವಿಂದ ಬೆಲ್ಲದ್, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಸೇರಿದಂತೆ ಇತರರು ಇದ್ದರು.