ಕಲುಷಿತ ನೀರು ಪೂರೈಸಿದರೆ ಪಿಡಿಒ, ನೀರಘಂಟಿಗಳೇ ಹೊಣೆ; ರವಿ ಬಂಗಾರೆಪ್ಪಣ್ಣವರ

KannadaprabhaNewsNetwork | Published : Aug 22, 2024 12:56 AM

ಸಾರಾಂಶ

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರನ್ನು ಜನಸಾಮಾನ್ಯರ ಮನೆಯ ಬಾಗಿಲಿಗೆ (ಮನೆ ಮನೆಗೆ ಗಂಗೆ) ತಲುಪಿಸುವುದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪಣ್ಣವರ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರನ್ನು ಜನಸಾಮಾನ್ಯರ ಮನೆಯ ಬಾಗಿಲಿಗೆ (ಮನೆ ಮನೆಗೆ ಗಂಗೆ) ತಲುಪಿಸುವುದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ. ಇದರಲ್ಲೇನಾದರೂ ಅಲ್ಪ-ಸ್ವಲ್ಪ ವ್ಯತ್ಯಾಸ ನಡೆದರೆ, ಕಲುಷಿತ ನೀರು ಸರಬರಾಜಿನಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರಮನ್‌ಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪಣ್ಣವರ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಾಟರಮನ್‌ಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ 2024-25 ನೇ ಸಾಲಿಗೆ ನಿಗದಿಪಡಿಸಿರುವ ಕ್ರಿಯಾಯೋಜನೆಯ ಕಾಮಗಾರಿಗಳಿಗೆ ಜಿಪಂನಿಂದ ಅನುಮೋದನೆ ನೀಡಲಾಗಿದೆ.

ಗ್ರಾಮೀಣ ಶಾಲೆಗಳಿಗೆ ಆದ್ಯತೆಯ ಮೇರೆಗೆ ಕಾಮಗಾರಿ ಕೈಗೊಳ್ಳಬೇಕು. ಶಾಲಾ ಆಟದ ಮೈದಾನ, ಶೌಚಾಲಯ, ಕಾಂಪೌಂಡ್‌ ಹಾಗೂ ಗ್ರಾಮೀಣ ಬಡ ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗದಂತೆ ಕ್ರಮವಹಿಸಿ ಇದ್ದೂರಲ್ಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು. ಕೆರೆ, ಕಟ್ಟೆಗಳು, ಕಾಲುವೆಗಳು ರೈತರ ಹೊಲಗಳಿಗೆ ಗ್ರಾಮೀಣ ರಸ್ತೆ ಹಾಗೂ ಬದು ನಿರ್ಮಾಣ, ಕೃಷಿ ಹೊಂಡ ಮತ್ತು ಭೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿರುವ ಅರ್ಹ ಫಲಾನುಭವಿಗಳಿಗೆ ಯೋಜನೆಯಡಿ 90 ದಿನ ಮಾನವ ದಿನ ಕೊಡುವ ಮೂಲಕ ಆ ಕುಟುಂಬಕ್ಕೆ ಆರ್ಥಿಕ ಬಲ ಒದಗಿಸಬೇಕು ಎಂದರು.

ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಸುವ ಮೂಲಕ ಬಯಲು ಬಹಿರ್ದೇಸೆ ಮುಕ್ತವನ್ನಾಗಿ ಗ್ರಾಮಗಳನ್ನಾಗಿಸಲು ಕೈಜೋಡಿಸಿ ಎಂದರು.

ಈ ವೇಳೆ ಇತರೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಎಲ್ಲ ಇಲಾಖೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲು ಸೂಚಿಸಿದರು. ತಾಪಂ ಇಒ ಸುಭಾಸ ಸಂಪಗಾಂವಿ, ಸಹಾಯಕ ನಿರ್ದೇಶಕ ವಿಜಯ ಪಾಟೀಲ, ತಾಪಂ ಯೋಜನಾಧಿಕಾರಿ ರಾಜಶೇಖರ ಕಡೇಮನಿ, ತಾಲೂಕಿನ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜಿಪಂ ಜೆಜೆಎಂ ಸಂಯೋಜಕಿ ನೀಲಮ್ಮ ಕಮತೆ ಹಾಗೂ ತಾಪಂ ಹಾಗೂ ನರೇಗಾ ಸಿಬ್ಬಂದಿ ಇದ್ದರು.

Share this article