ಅಹಿತಕರ ಘಟನೆ ಸಂಭವಿಸಿದರೆ ಉಸ್ತುವಾರಿ ಸಚಿವರೇ ಹೊಣೆ
ಕನ್ನಡಪ್ರಭ ವಾರ್ತೆ ಹಾಸನನೀಡಿದ ಗಡುವಿನಂತೆ ಹೇಮಾವತಿ ಜಲಾಶಯದಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸದಿದ್ದರೆ ಗೊರೂರಿನಲ್ಲಿರುವ ಜಲಾಶಯದ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ವೇಳೆ ಅಹಿತಕರ ಘಟನೆಗಳೇನಾದರೂ ಸಂಭವಿಸಿದರೇ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
ನಗರದ ಸಂಸದರ ನಿವಾಸದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಹರಿಸುತ್ತಿರುವುದರ ಬಗ್ಗೆ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಗಮನಕ್ಕೂ ತರಲಾಗಿದೆ. ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಸೇರಿದಂತೆ ಎಲ್ಲರ ಗಮನಕ್ಕೆ ತರಲಾಗಿದೆ. ತುಮಕೂರಿಗೆ ನೀರು ಕೊಡಿ. ಆದರೆ ನಮ್ಮ ಜಿಲ್ಲೆಯ ರೈತರ ದನ, ಕರು, ಜನಕ್ಕೂ ಕುಡಿಯುವ ನೀರು ಕೊಡಿ. ಸರ್ಕಾರ ಇದರಲ್ಲೂ ರಾಜಕೀಯ ಮಾಡಿದರೆ ಹೇಗೆ? ಜಲಾಶಯದ ಬಳಿ ೧೪೪ ಸೆಕ್ಷೆನ್ ಹಾಕಲಾಗಿದೆ. ಹಾಗಾಗಿ ಅಲ್ಲಿ ಯಾರೂ ಓಡಾಡುವಂತಿಲ್ಲ. ನೀರಿಗಾಗಿ ನಿಷೇದಾಜ್ಞೆ ಜಾರಿ ಮಾಡಿದರೆ ಹೇಗೆ? ಶುಕ್ರವಾರ ಸಂಜೆ ೫ ಗಂಟೆಯವರೆಗೂ ಗಡುವು ಕೊಟ್ಟಿದ್ದೇವೆ. ನೀರು ಬಿಡದಿದ್ದರೆ ನಾಳೆ ಜಲಾಶಯಕ್ಕೆ ರೈತರು ಮುತ್ತಿಗೆ ಹಾಕಬೇಕಾಗುತ್ತದೆ. ಈಗಾಗಲೇ ರೈತರಿಗೆ ಹೇಳಲಾಗಿದ್ದು, ಈ ವೇಳೆ ಏನಾದರು ಅನಾಹುತವಾದರೆ ನಾವು ಜವಾಬ್ದಾರಿ ಅಲ್ಲ. ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಹೇಗೆ ನೀರು ಬಿಡಲಾಗಿದೆ. ಮಂಡ್ಯ ಕೆ.ಆರ್.ಪೇಟೆ ಭಾಗಕ್ಕೂ ನೀರಿಲ್ಲ. ಕೇವಲ ತುಮಕೂರು ಚುನಾವಣೆ ದೃಷ್ಟಿ ಇಟ್ಟುಕೊಂಡು ಹೋದರೆ ಹೇಗೆ’ ಎಂದು ಪ್ರಶ್ನೆ ಮಾಡಿದರು.ಹೇಮಾವತಿ ಜಲಾಶಯದ ಎರಡು ನಾಲೆಗೆ ನೀರು ಕೊಡಬೇಕು. ಇಲ್ಲವಾದರೆ ಕಾನೂನು ಹೋರಾಟ ಜತೆಗೆ ಹೊರಗೂ ಹೋರಾಟ ಮಾಡಲಾಗುವುದು. ಕಾಂಗ್ರೆಸ್ ಸರ್ಕಾರದ ೯ ತಿಂಗಳ ಆಡಳಿತದಲ್ಲಿ ಕುಡಿಯುವ ನೀರಿಗೂ ರಾಜಕೀಯ ಮಾಡಿದರೇ ಹೇಗೆ? ಶನಿವಾರ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಜಿಲ್ಲಾಧಿಕಾರಿ ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರದೆ ಹೋದರೆ ಅವರೇ ಹೊಣೆ ಆಗುತ್ತಾರೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ರೈತರ ಪಂಪ್‌ಸೆಟ್‌ಗೆ ದಿನದ ಒಂದು ಗಂಟೆಯೂ ವಿದ್ಯುತ್ ಸಿಗುತ್ತಿಲ್ಲ. ಹೀಗೆ ಆದರೆ ವಿದ್ಯುತ್ ಇಲಾಖೆ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ವಿದ್ಯುತ್ ಪರಿವರ್ತಕ ಸಿಗುತ್ತಿಲ್ಲ. ಸಚಿವರು ಏಳು ಗಂಟೆ ಕೊಡುವುದಾಗಿ ಹೇಳುತ್ತಾರೆ. ಆದರೆ ಜಿಲ್ಲೆಗೆ ಮಾತ್ರ ಕೇವಲ ಒಂದು ಗಂಟೆ ವಿದ್ಯುತ್ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾಸನ ಡೈರಿ ನಿರ್ದೇಶಕರ ಚುನಾವಣೆಯನ್ನು ಗೌಪ್ಯವಾಗಿ ನಡೆಸಲಾಗಿದೆ ಎನ್ನುವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣ, ೧೯೫ ದಿನಗಳ ಮೊದಲೇ ಜಿಲ್ಲಾಧಿಕಾರಿಯೇ ಚುನಾವಣಾ ಪ್ರಕಟಣೆ ಹೊರಡಿಸುತ್ತಾರೆ. ಡೈರಿ ಚುನಾವಣೆ ಡಿಸಿಯವರಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಸರಿಯಿಲ್ಲ ಎಂದವರು ಅಂದು ಏಕೆ ಬಂದಿದ್ದರು?‘ಇಂದು ಜೆಡಿಎಸ್ ಸರಿಯಿಲ್ಲ ಎನ್ನುವವರು ಈ ಹಿಂದೆ ಜಂಟಿಯಾಗಿ ಸರ್ಕಾರ ಮಾಡೋಣ. ಕುಮಾರಣ್ಣ ಅವರೇ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿರಲಿ ಎಂದು ನಮ್ಮ ಬಳಿ ಏಕೆ ಬಂದಿದ್ದರು ? ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ’ ಎನ್ನುವ ಮೂಲಕ ಜೆಡಿಎಸ್ ಸರಿಯಿಲ್ಲ ಎಂದು ಅಳಿಯ ಡಾ.ಮಂಜುನಾಥ್ ಬಿಜೆಪಿ ಸೇರಿದ್ದಾರೆ ಎಂದು ಟೀಕಿಸಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.ಎಚ್.ಡಿ.ರೇವಣ್ಣ.