ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಮಳೆಯಾದರೆ ಇಲ್ಲಿನ ಜನರಿಗೆ ಭಯ. ಯಾವಾಗ ಮಳೆ ನೀರು ಮನೆ ಹೊಗುತ್ತದೆ ಎಂಬ ಅಳುಕಿನಲ್ಲಿಯೇ ಜೀವನ ಕಳೆಯಬೇಕಾದ ಸ್ಥಿತಿ. ಇದು ಯಾವುದೇ ಕುಗ್ರಾಮದ ಸ್ಥಿತಿಯಲ್ಲ. ಹಳೇ ಹುಬ್ಬಳ್ಳಿಯ ಗಣೇಶನಗರ ನಿವಾಸಿಗಳ ದುಸ್ಥಿತಿ.
ಗಣೇಶ ನಗರವು ಹು-ಧಾ ಮಹಾನಗರ ಪಾಲಿಕೆಯ 54ನೇ ವಾರ್ಡ್‌ಗೆ ಒಳಪಟ್ಟಿದೆ. ಅಲ್ಪ ಮಳೆಯಾದರೂ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ನಾಲ್ಕೈದು ದಿನ ಜನರು ಜಾಗರಣೆ ಮಾಡುವುದು ಸಾಮಾನ್ಯ ಸ್ಥಿತಿ ಎಂಬಂತಾಗಿದೆ.ಏಕೆ ಈ ಸಮಸ್ಯೆ:
ಎಂಟು, ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಈ ಸಮಸ್ಯೆ ಇರಲಿಲ್ಲ. ಆದರೆ, ಗಣೇಶನಗರದ ಸುತ್ತಲಿನ ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಇದರಿಂದ ಈ ನಗರವು ಇದೀಗ ತಗ್ಗು ಪ್ರದೇಶವಾಗಿದೆ. ಮೇಲಾಗಿ ಮಳೆನೀರು ಸರಾಗವಾಗಿ ಹರಿದು ಹೋಗಲು ಬೇಕಾದ ವ್ಯವಸ್ಥೆ ಇಲ್ಲರುವುದೇ ಈ ಸಮಸ್ಯೆಗೆ ಕಾರಣ.ಈ ಭಾಗಕ್ಕೆ ಅಕ್ಷಯ ಪಾರ್ಕ್, ಮುರ್ಡೇಶ್ವರ ನಗರ, ಆನಂದನಗರ ಸೇರಿದಂತೆ ಹಲವು ಭಾಗಗಳಿಂದ ಮಳೆ ನೀರು ಹರಿದು ಬರುತ್ತದೆ. ಈ ನೀರು ಮುಖ್ಯರಸ್ತೆ ಮೇಲೆ ಹರಿದು ತಗ್ಗು ಪ್ರದೇಶವಾದ ಗಣೇಶನಗರಕ್ಕೆ ನುಗ್ಗುವುದರಿಂದ ಜನರಿಗೆ ಸಮಸ್ಯೆಯಾಗಿದೆ.
ಚರಂಡಿಗಳೇ ಇಲ್ಲ:ಇಲ್ಲಿ ಕೆಲ ವರ್ಷಗಳ ಹಿಂದೇ ಚರಂಡಿ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಆದರೆ, ಹುಡುಕಿದರೂ ಒಂದೇ ಒಂದು ಚರಂಡಿ ಕಾಣುವುದಿಲ್ಲ. ಈ ಕುರಿತು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 18ರಂದು ರಾತ್ರಿ ಸುರಿದ ಮಳೆಯಿಂದ ಈ ನಗರದಲ್ಲಿ ಅಕ್ಷರಶಃ ಕೆರೆಯಂತಹ ವಾತಾವರಣ ನಿರ್ಮಾಣವಾಗಿತ್ತು. ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಗೆ ಮನೆಯೊಳಗೆ 2 ಅಡಿಗೂ ಹೆಚ್ಚು ನೀರು ನಿಂತು ಇಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.
ಶೌಚಾಲಯಕ್ಕೂ ತೊಂದರೆ:ಮಳೆ ನೀರಿನೊಂದಿಗೆ ಮನೆಯೊಳಗೆ ನುಗ್ಗುವ ಕೆಸರು ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಜತೆಗೆ ಮನೆ ಹೊರಗೆ-ಒಳಗೆ ಇರುವ ಶೌಚಾಲಯ, ನೀರು ಸಂಗ್ರಹಿಸುವ ಟ್ಯಾಂಕಿನಲ್ಲಿ ಕೆಸರು ಸೇರುತ್ತಿದೆ. ಪ್ರತಿ ಮಳೆಗೂ ಸಾವಿರಾರು ರುಪಾಯಿ ಖರ್ಚು ಮಾಡಿ ಶೌಚಾಲಯ, ನೀರಿನ ಟ್ಯಾಂಕ್ ಶುಚ್ಚಿಗೊಳಿಸುವುದೇ ಒಂದು ಕೆಲಸವಾಗಿದೆ. ಮನೆಯಲ್ಲಿ ಶೌಚಾಲಯವಿದ್ದರೂ ಬೇರೆಡೆ ಹಣಕೊಟ್ಟು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ವಯಸ್ಸಾದವರ ಸ್ಥಿತಿಯಂತೂ ಹೇಳತೀರದು ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಬಾಗಿಲಿಗೆ ತಡೆಗೋಡೆ:ಮಳೆ ನೀರು ಮನೆಯೊಳಗೆ ಬರದಂತೆ ಇಲ್ಲಿನ ಹಲವು ಮನೆಗಳ ಬಾಗಿಲಿಗೆ 2-3 ಅಡಿ ಎತ್ತರದ ತಡೆಗೋಡೆ ಕಟ್ಟಿಕೊಂಡಿದ್ದಾರೆ. ಆದರೂ ಮಳೆ ನೀರು ಇದನ್ನು ಮೀರಿ ಮನೆಯೊಳಗೆ ನುಗ್ಗುತ್ತಿರುವುದು ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರಿಗೆ ತಿಳಿಸಿದರೆ ಬಂದು ತಾತ್ಕಾಲಿಕ ಪರಿಹಾರ ಕಲ್ಪಿಸುತ್ತಾರೆ. ಮತ್ತೆ ಮಳೆ ಬಂದರೆ ಅದೇ ಸಮಸ್ಯೆ ಉದ್ಭವವಾಗುತ್ತದೆ. ಆದರೆ, ಪಾಲಿಕೆಗೆ ಶಾಶ್ವತವಾಗಿ ಇಲ್ಲಿನ ಸಮಸ್ಯೆ ಪರಿಹರಿಸುವ ಕಾರ್ಯ ಮಾತ್ರ ಆಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.ಮಳೆ ಬಂದರೆ ಯಾವಾಗ ಮಳೆ ನೀರು ಮನೆಗೆ ನುಗ್ಗುತ್ತದೆ ಎಂದು ನಡುಕ ಶುರುವಾಗುತ್ತದೆ. ಮನೆಯೊಳಗೆ ಎರಡ್ಮೂರು ಅಡಿ ನೀರು ಬಂದರೆ ಹೇಗೆ ಜೀವನ ನಡೆಸುವುದು ಎಂದು ತಿಳಿಯುತ್ತಿಲ್ಲ. ಇನ್ನು ಮುಂದಾದರೂ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆಗೆ ಮುಕ್ತಿ ಹಾಡಿ ಎಂದು ಶಾಂತಾ ಹಲ್ಯಾಳ, ಪುಷ್ಪಾ ಬದ್ದಿ ಮನವಿ ಮಾಡಿದ್ದಾರೆ.
ಗಣೇಶ ನಗರದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಸಂಕಷ್ಟ ಅನುಭವಿಸಿರುವ ಮಾಹಿತಿ ಸಿಕ್ಕಿದೆ. ಗುರುವಾರ ಬೆಳಗ್ಗೆ ಖುದ್ದಾಗಿ ನಾನೇ ಸ್ಥಳಕ್ಕೆ ತೆರಳಿ ಚರ್ಚಿಸಿ ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆದ್ಯತೆ ನೀಡುವೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.