ಸಂವಿಧಾನ ಜೀವಂತವಾಗಿದ್ದರೆ ಸರ್ವರು ಸಮಾನವಾಗಿ ಬದುಕಲು ಸಾಧ್ಯ: ಶಾಸಕ ಬಿ.ಜಿ. ಗೋವಿಂದಪ್ಪ

KannadaprabhaNewsNetwork |  
Published : Feb 19, 2024, 01:35 AM IST
ಲಕ್ಕಿಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಲಕ್ಕಿಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ಹೊಸದುರ್ಗ

ಸಂವಿಧಾನ ಜೀವಂತವಾಗಿದ್ದರೆ ಮಾತ್ರ, ಸರ್ವರು ಸಮಾನವಾಗಿ ಬದುಕಲು ಸಾಧ್ಯ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ನಿಗಮದ ಅಧ್ಯಕ್ಷ, ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ತಾಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳೇ ಇಲ್ಲ ಇಂತಹುದರ ನಡುವೆ ಮಕ್ಕಳಿಗೆ ಅಂಬೇಡ್ಕರ್, ಗಾಂಧೀಜಿ, ನೆಹರು ಹಾಗೂ ಇನ್ನಿತರ ಮಹಾತ್ಮರ ಜೀವನ ಚರಿತ್ರೆ ಮತ್ತು ಚಿಂತನೆ ಹೇಳಿಕೊಡಬೇಕಿದೆ. ಸಂವಿಧಾನದ ಪೀಠಿಕೆ ಮತ್ತು ಮಹತ್ವದ ತಿಳುವಳಿಕೆ ಅಕ್ಷರಭ್ಯಾಸದಲ್ಲಿಯೇ ಬರಬೇಕು ಎಂದರು.

ಸಂವಿಧಾನದಿಂದ ನಾವು ಬಹಳಷ್ಟು ಸೌಲಭ್ಯ ಅವಕಾಶ ಪಡೆಯುತ್ತಿದ್ದೇವೆ. ದೇಶದಲ್ಲಿ ಸರ್ವರಿಗೂ ಸಮಪಾಲು, ಸಹಬಾಳ್ವೆ ಎಂಬುದನ್ನು ಸಾರಿದ್ದು ಅಂಬೇಡ್ಕರ್. ಹಿಂದಿನ ಕಾಲದಲ್ಲಿ ಅರಿವು, ಅನ್ನ, ಅಕ್ಷರ ಯಾವುದು ಇರಲಿಲ್ಲ. ಇದನ್ನು ತೊಡೆದು ಹಾಕಲು ಕಟಿಬದ್ಧರಾಗಿ ನಿಂತು ಸಂವಿಧಾನ ಬರೆದರು. ಬಹಳಷ್ಟು ಜನರು ಇನ್ನೂ ಸಂವಿಧಾನವನ್ನೇ ಅರ್ಥೈಸಿಕೊಂಡಿಲ್ಲ. ಇದಕ್ಕೂ ಮೊದಲೇ ಸಂವಿಧಾನ ಬದಲಿಸಿ, ಮತ್ತೆ ರಾಜ ಪ್ರಭುತ್ವ ತರಬೇಕೆಂದು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಜಾರಿಗೆ ಬಂದು75 ವರ್ಷಗಳ ತುಂಬಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ, ಆಶಯ ಮತ್ತು ಮಹತ್ವ ಮುಂದಿಟ್ಟುಕೊಂಡು ಜಾಗೃತಗೊಳಿಸುವ ಕೆಲಸಮಾಡುತ್ತಿದೆ. ಎಲ್ಲಾ ರಂಗಗಳನ್ನು ಹಿಂದುಳಿದಿರುವವರು ಮುನ್ನೆಲೆಗೆ ಬರಬೇಕಾದರೆ, ಶಿಕ್ಷಣದಿಂದ ಸಾಧ್ಯ. ಮನುಷ್ಯ ಶಿಕ್ಷಣವಿಲ್ಲದೆ ಬದುಕಲು ಸಾಧ್ಯವಿಲ್ಲ. ಶಿಕ್ಷಣದಿಂದ ಸಮಾನತೆ, ಸ್ವಾಮ್ಯತೆ, ಸಹನೆ, ಶಿಸ್ತು, ಸಾಮಾಜಿಕ ಕಳಕಳಿ ಬೆಳೆಯುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ದಿನೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಕ್ಕಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀದೇವಿ ಮುದ್ದಪ್ಪ, ಉಪಾಧ್ಯಕ್ಷ ತಿಮ್ಮಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾಳಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತಾರಣಾಧಿಕಾರಿ ಶಶಿಧರ್, ಸಹಾಯಕ ಕೃಷಿ ನಿರ್ದೇಶಕ ಈಶ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಮತ್ತು ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಮುಖಂಡರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾ.ಪಂ ಸಿಬ್ಬಂದಿ ಸೇರಿ ಇತರರಿದ್ದರು.

ಹೆಬ್ಬಳ್ಳಿಯಿಂದ ಆರಂಭವಾದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ 33 ಗ್ರಾಪಂ ತಲುಪಿ ಅಂತಿಮವಾಗಿ ಲಕ್ಕಿಹಳ್ಳಿ ಗ್ರಾಮಕ್ಕೆ ಬಂದಿದೆ. ತಾಲೂಕಿನ ಎಲ್ಲಾ ಗ್ರಾಪಂ ಗಳಲ್ಲಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡು, ಗೌರವಯುತವಾಗಿ ಕಳಿಸಿಕೊಟ್ಟಿದ್ದಾರೆ. ಎಲ್ಲಾ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಬಹಳಷ್ಟು ಶ್ರಮಿಸಿದ್ದಾರೆ. ರಥಯಾತ್ರೆ ಯಶಸ್ವಿಯಾಗಲು ಕಾರಣರಾದ ಎಲ್ಲರಿಗೂ ಧನ್ಯವಾದ - ಬಿಜಿ ಗೋವಿಂದಪ್ಪ, ಶಾಸಕರು

ಲಕ್ಕಿಹಳ್ಳಿ ಗ್ರಾಮದಲ್ಲಿನ ಅಶಾಂತಿ ಶಾಂತಗೊಳಿಸಿ

ಲಕ್ಕಿಹಳ್ಳಿ ಗ್ರಾಮದ ಮುದ್ದುಲಿಂಗೇಶ್ವರಸ್ವಾಮಿಯ ದೇವಸ್ಥಾನದ ವಿಚಾರವಾಗಿ ಗ್ರಾಮದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ದೇವಸ್ಥಾನದ ವಿಚಾರ ಘನ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದು, ದೇವರ ವಿಚಾರವಾಗಿ ಊರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲದೇ, ಒಂದು ಕೋಮಿನ ಜನರು ಇನ್ನುಳಿದ ಜನಾಂಗದವರ ಮೇಲೆ ಕೇಸ್ ದಾಖಲಿಸುತ್ತಿದ್ದು, ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ತಮಗೂ ತಿಳಿದಂತೆ ಹಿಂದಿನಿಂದಲೂ ಜಾತ್ಯಾತೀತವಾಗಿ, ಸೌಹಾರ್ದಯುತವಾಗಿ ದೇವರ ಜಾತ್ರೆ, ಉತ್ಸವ ಮತ್ತು ಹಬ್ಬ ಮಾಡಿಕೊಂಡು ಬಂದಿದ್ದೇವೆ. ಒಂದು ಜನಾಂಗದವರು ದೇವರ ಹಣವಿದೆ ಎಂದು ಉಳಿದ ಜನಾಂಗದವರ ಮೇಲೆ ಕೇಸ್ ಹಾಕುತ್ತಾ, ದಬ್ಬಾಳಿಕೆ ಮಾಡುತ್ತಿದ್ದಾರೆ. ನೀವು ಒಬ್ಬ ಜನಪ್ರತಿನಿಧಿಯಾಗಿ ಗ್ರಾಮದಲ್ಲಿ ತಲೆ ದೂರಿರುವ ಅಶಾಂತಿ ಶಾಂತಗೊಳಿಸಿ ಎಂದು ಗ್ರಾಮದ ಹಲವು ಜನಾಂಗದ ಮುಖಂಡರು ಶಾಸಕ ಬಿ.ಜಿ.ಗೋವಿಂದಪ್ಪ ನವರಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ