ಯಲ್ಲಾಪುರ:
ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಲಗುಳಿ ಮತ್ತು ಕೊಡಸೆ ಗ್ರಾಮ ಅರಣ್ಯ ಸಮಿತಿಗಳ ಆಶ್ರಯದಲ್ಲಿ ಲಾಲಗುಳಿಯ ಹನುಮಂತನಕೋಟೆಯ ಆಂಜನೇಯ ಸನ್ನಿಧಿಯಲ್ಲಿ ಮಳೆ ಮತ್ತು ಬೆಂಕಿ ತಡೆಗಾಗಿ ಪ್ರಾರ್ಥಿಸಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು.ವೇ. ಸರ್ವೇಶ್ವರ ಭಟ್ಟ ಮೇಗಿನಮನೆ ಆಚಾರ್ಯತ್ವದಲ್ಲಿ ರುದ್ರಾನುಷ್ಠಾನ ಹಾಗೂ ರಾಮಜಪ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಮಳೆ ಕರುಣಿಸುವಂತೆ ಮತ್ತು ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವಂತೆ ಆಂಜನೇಯನಲ್ಲಿ ಸೇರಿದ್ದ ಗ್ರಾಮ ಅರಣ್ಯ ಸಮಿತಿ ಮತ್ತು ಅರಣ್ಯಾಧಿಕಾರಿಗಳು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.ಆನಂತರ ನಡೆದ ಸರಳ ಸಮಾರಂಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಮಾತನಾಡಿ, ಕಾಡನ್ನು ಬೆಂಕಿಯಿಂದ ರಕ್ಷಿಸುವ ಸವಾಲಿನ ಕೆಲಸ ನಮ್ಮ ಮುಂದಿದೆ. ಎಲ್ಲರೂ ಜಾಗೃತರಾಗಿ ಕಾರ್ಯನಿರ್ವಹಿಸಬೇಕಲ್ಲದೇ, ವಿಎಫ್‌ಸಿ ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಅಗತ್ಯ. ಈ ವರ್ಷ ನೀರಿನ ಕೊರತೆ ನಮ್ಮನ್ನು ಕಾಡಲಿದ್ದು, ಕಾಡ್ಗಿಚ್ಚು ಹಬ್ಬಿದರೆ ನೆಲ-ಜಲ ಬತ್ತಿಹೋಗುತ್ತದೆ ಎಂದರು.ಪರಿಸರ ಸಂರಕ್ಷಣೆ ಹೋರಾಟದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಲಾಲಗುಳಿ ವಿಎಫ್‌ಸಿ ವತಿಯಿಂದ ನರಸಿಂಹ ಸಾತೊಡ್ಡಿ ಅವರಿಗೆ ಶ್ರೀಗಂಧ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ನರಸಿಂಹ ಸಾತೊಡ್ಡಿ, ಕಾಡು ನೋಡುವ ಭಾಗ್ಯ ನಮ್ಮ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿದೆ. ಇರುವ ಕಾಡು ಸಂರಕ್ಷಿಸಬೇಕು. ನಮ್ಮ ವೃತ್ತಿ ಪ್ರವೃತ್ತಿಯೊಂದಿಗೆ ಭವಿಷ್ಯವನ್ನು ಕಣ್ಮುಂದಿರಿಸಿಕೊಂಡು ನಮ್ಮದಾದ ವಿವಿಧ ಚಟುವಟಿಕೆ ಮುಂದುವರಿಸಿಕೊಳ್ಳಬೇಕು ಎಂದು ಹೇಳಿದರು.ಲಾಲಗುಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮುದ್ದೆಪಾಲ್ ಮಾತನಾಡಿ, ಹನುಮಂತನಕೋಟೆಯ ಆಂಜನೇಯನ ಬಳಿ ಪ್ರತಿವರ್ಷ ನಮ್ಮ ಪ್ರಾರ್ಥನೆ ಸಲ್ಲಿಸುತ್ತಿರುವುದು ನಮಗೆ ವರವಾಗಿದೆ ಎಂದರು.ವಲಯಾರಣ್ಯಾಧಿಕಾರಿ ಎಲ್.ಎ. ಮಠ, ಕೊಡಸೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುರೇಶ ಮುಂಡಗೇಕರ, ಶ್ರೀಧರ ಲಾಲಗುಳಿ, ದತ್ತಾತ್ರಯ ಲಾಲಗುಳಿ, ಮಹಾಬಲೇಶ್ವರ ಅರೇಗುಳಿ, ಹಳಬೈಲ್ ಗಸ್ತು ವನಪಾಲಕ ಶಾನವಾಜ್ ಮುಲ್ತಾನಿ, ಅರಣ್ಯ ರಕ್ಷಕರು, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಡಿಆರ್‌ಎಫ್‌ಒ ಮಂಜುನಾಥ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು. ಹಳಬೈಲ್ ಡಿಆರ್‌ಎಫ್‌ಒ ಸುನೀಲ್ ಜಂಗಮ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು.