ಕಾನೂನು ವಿವಿಗೆ ಪಾಲಿಕೆ ಜಾಗ ಬೇಕಿದ್ದರೆ ಹಳೇ ಕೋರ್ಟ್‌ ಜಾಗ ಹಸ್ತಾಂತರಿಸಲಿ

KannadaprabhaNewsNetwork | Published : Aug 4, 2024 1:21 AM

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ಕಾನೂನು ವಿವಿಗೆ ನಿವೇಶನ ನೀಡಲು ವಿರೋಧ ವ್ಯಕ್ತವಾಗಿ ನಿವೇಶನ ನೀಡದಿರಲು ಠರಾವು ಪಾಸ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಎಚ್.ಕೆ. ಪಾಟೀಲ ಇಲ್ಲಿಯ ಸರ್ಕ್ಯೂಟ್ ಹೌಸ್‌ನಲ್ಲಿ ಮೇಯರ್ ರಾಮಣ್ಣ ಬಡಿಗೇರ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಜತೆ ಸಭೆ ನಡೆಸಿದರು.

ಹುಬ್ಬಳ್ಳಿ:

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಅಗತ್ಯವಾಗಿರುವ ಮಹಾನಗರ ಪಾಲಿಕೆ ಒಡೆತನದ 39 ಗುಂಟೆ ನಿವೇಶನ ಕೇಳಲಾಗಿದೆ. ಅದರಂತೆ ಪಾಲಿಕೆಯಿಂದಲೂ ಪರ್ಯಾಯ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಕಾರಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ಕಾನೂನು ವಿವಿಗೆ ನಿವೇಶನ ನೀಡಲು ವಿರೋಧ ವ್ಯಕ್ತವಾಗಿ ನಿವೇಶನ ನೀಡದಿರಲು ಠರಾವು ಪಾಸ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಎಚ್.ಕೆ. ಪಾಟೀಲ ಇಲ್ಲಿಯ ಸರ್ಕ್ಯೂಟ್ ಹೌಸ್‌ನಲ್ಲಿ ಮೇಯರ್ ರಾಮಣ್ಣ ಬಡಿಗೇರ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಜತೆ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಲ್ಲಿಯ ಕಾನೂನು ವಿಶ್ವವಿದ್ಯಾಲಯವನ್ನು ಶ್ರೇಷ್ಠ ವಿವಿಯನ್ನಾಗಿ ರೂಪಿಸಬೇಕಿದೆ. ಅದಕ್ಕೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಬೇಕಿದೆ. ಕೆಲವು ಭೌತಿಕ ಸೌಲಭ್ಯ ಸೃಷ್ಟಿಸಬೇಕಿದೆ. ಜತೆಗೆ ಶೈಕ್ಷಣಿಕವಾಗಿ ಉತ್ಕೃಷ್ಟತೆಯನ್ನು ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ಕಟ್ಟಡ, ಗ್ರಂಥಾಲಯ ಕಟ್ಟಡ, ಕೆಫಿಟೇರಿಯಾ, ವಿದ್ಯಾರ್ಥಿ ವಸತಿ ನಿಲಯ, ಇತ್ಯಾದಿ ಕಟ್ಟಡಗಳ ನಿರ್ಮಾಣಕ್ಕೆ ಜಾಗದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಜಾಗೆ ಕೇಳಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿರುವ ಹಳೇ ಕೋರ್ಟ್ ಕಟ್ಟಡವನ್ನು ಪಾಲಿಕೆಗೆ ನೀಡಬೇಕೆಂಬ ಪ್ರಸ್ತಾವನೆಯನ್ನು ಮೇಯರ್ ಈ ವೇಳೆ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆಯ ಸಭಾನಾಯಕ, ವಿಪಕ್ಷ ನಾಯಕರೊಂದಿಗೆ ಬೆಂಗಳೂರಿಗೆ ಬನ್ನಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡೋಣ. ಅಲ್ಲಿ. ಕುಳಿತು ಮಾತುಕತೆ ನಡೆಸೋಣವೆಂದು ಸಭೆಯಲ್ಲಿ ಹೇಳಿದ್ದಾರೆ.

ಇದೇ ವೇಳೆ ಕಾನೂನು ವಿವಿಯ ಅಧಿಕಾರಿಗಳಾದ ಅನುರಾಧಾ ವಸ್ತ್ರದ, ರತ್ನಾ ಭರಮಗೌಡರ್ ಹಾಗೂ ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಪಿ.ಎನ್. ಪರಾಂಡೆ, ಎಚ್.ಯು. ಬೆಳಗಲಿ ಅವರೊಂದಿಗೆ ಸಭೆ ನಡೆಸಿದರು.ಹಳೇ ಕೋರ್ಟ್ ಕಟ್ಟಡದ ಜಾಗದ ಪ್ರಸ್ತಾವನೆ

ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ವಿನ್ಯಾಸಕ್ಕೆ ಅನುಗುಣವಾಗಿ ಕಟ್ಟಡದ ಅರ್ಧಕ್ಕಿಂತ ಹೆಚ್ಚು ಭಾಗ ಪಾಲಿಕೆ ಒಡೆತನದ ನಿವೇಶನದಲ್ಲಿ ಬರುತ್ತದೆ. ಈ ಕುರಿತು ನೀಲಿನಕ್ಷೆ ತೋರಿಸಿದ್ದಾರೆ. ಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಹುಬ್ಬಳ್ಳಿಯಲ್ಲಿರುವ ಹಳೇ ಕೋರ್ಟ್ ಕಟ್ಟಡದ ಜಾಗದ ಬಗ್ಗೆ ಸಚಿವರ ಮುಂದೆ ಪ್ರಸ್ತಾವನೆ ಮಾಡಿದ್ದೇನೆ. ಇದರಿಂದ ಈಗಷ್ಟೇ ನಿರ್ಮಾಣ ಹಂತದಲ್ಲಿರುವ ಪಾಲಿಕೆಯ ಸಭಾಭವನ ಕಟ್ಟಡಕ್ಕೆ ಅನುಕೂಲವಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಮೇಯರ್ ರಾಮಪ್ಪ ಬಡಿಗೇರ ಸುದ್ದಿಗಾರರೊಂದಿಗೆ ತಿಳಿಸಿದರು.

Share this article