ಸ್ಥಳ ಭೇಟಿ ನೆಪವೊಡ್ಡಿ ಗೈರಾದರೆ ಸಸ್ಪೆಂಡ್‌ ಗ್ಯಾರಂಟಿ: ಸದಾಶಿವ ಪ್ರಭು

KannadaprabhaNewsNetwork |  
Published : Jan 29, 2024, 01:36 AM IST
ಹರಪನಹಳ್ಳಿ ತಾಲೂಕು ಪಂಚಾಯಿತಿಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿವಿಜಯನಗರಜಿಪಂನ ಸಿಇಒ ಬಿ.ಸದಾಶಿವ ಪ್ರಭುಅವರುಮಾತನಾಡಿದರು.  | Kannada Prabha

ಸಾರಾಂಶ

ಸಬೂಬು ನೀಡಿ ಪಂಚಾಯಿತಿಗಳಿಗೆ ಹೋಗದೆ ಗೈರಾದರೆ ಶಿಸ್ತುಕ್ರಮ ಗ್ಯಾರಂಟಿ. ಉಳಿದ ಪಿಡಿಒಗಳಿಗೂ ಈ ಬಗ್ಗೆ ಪಾಠವೂ ಆಗುತ್ತದೆ ಎಂದು ಜಿಪಂ ಸಿಇಒ ಎಚ್ಚರಿಸಿದರು.

ಹರಪನಹಳ್ಳಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಭೇಟಿಗೆಂದು ನೆಪವೊಡ್ಡಿ ಪಂಚಾಯಿತಿಗಳಿಗೆ ಹೋಗದೆ ಗೈರಾದರೆ ಸಸ್ಪೆಂಡ್ ಗ್ಯಾರಂಟಿ ಎಂದು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸದಾಶಿವ ಪ್ರಭು ಅವರು ಪಿಡಿಒಗಳಿಗೆ ಎಚ್ಚರಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಅವರಿಂದ ಹಿಡಿದು ಡಿ ಗ್ರೂಪ್‌ನ ಜವಾನರ ತನಕ ಎಲ್ಲರೂ ಇ- ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಬೆಳಗ್ಗೆ ಶೀಘ್ರವಾಗಿಯೂ ನೀವು ಕೆಲಸದ ಸ್ಥಳಗಳಿಗೆ ಹೋದರೂ ಕಚೇರಿಗೆ ಬಂದು ಇ-ಹಾಜರಾತಿ ಹಾಕಬೇಕು. ಇದರ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. ಪಿಡಿಒಗಳು ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಗೆ ಸ್ಥಳ ಭೇಟಿ ಎಂದು ನಾನಾ ಸಬೂಬು ನೀಡಿ ಪಂಚಾಯಿತಿಗಳಿಗೆ ಹೋಗದೆ ಗೈರಾದರೆ ಶಿಸ್ತುಕ್ರಮ ಗ್ಯಾರಂಟಿ. ಉಳಿದ ಪಿಡಿಒಗಳಿಗೂ ಈ ಬಗ್ಗೆ ಪಾಠವೂ ಆಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಸಿದರು.

ಅಣಜಿಗೆರೆ, ಹಿರೇಮೇಗಳಗೆರೆ, ಮಾಡ್ಲಗೆರೆ, ಚಿಗಟೇರಿ, ಹಾರಕನಾಳು, ಕಡತಿ, ಪುಣಭಗಟ್ಟ, ಗುಂಡುಗತ್ತಿ, ದುಗ್ಗಾವತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದೆ. ಕಾಮಗಾರಿಗಳು ಸಹ ಮಂದಗತಿಯಲ್ಲಿ ಸಾಗುತ್ತಿವೆ ಎಂದು ಪಿಡಿಒಗಳು ತಿಳಿಸಿದಾಗ, ಎಇಇ ಕಿರಣ್ ಮಾತನಾಡಿ, ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿದರು. ಹೀಗಾಗಿ ಜೆಜೆಎಂ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಶೀಘ್ರ ಮುಗಿಸಲು ಸಮಸ್ಯೆಯಾಗುತ್ತಿದೆ. ನಾವೂ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಆದಷ್ಟು ಬೇಗ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಣಜಿಗೆರೆ ಗ್ರಾಪಂ ವ್ಯಾಪ್ತಿಯ ಮಾದಿಹಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ನೆಲ ಅಗೆಯುವಾಗ ಸದ್ಯ ನೀರು ಪೂರೈಸುವ ಪೈಪ್ ಒಡೆದಿದೆ. ಈ ಬಗ್ಗೆ ಸೆಕ್ಷನ್ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ತಿಳಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಿಡಿಒ ಉಮೇಶ ಸಭೆಯಲ್ಲಿ ತಿಳಿಸಿದಾಗ ಗರಂ ಆದ ಸಿಇಒ ಅವರು, ಸೆಕ್ಷನ್ ಅಧಿಕಾರಿಗಳು ನಿಮ್ಮ ಮಾತು ಕೇಳಿದಿದ್ದರೆ ಎಇಇ, ಇಒ ಅವರಿಗೂ ತಿಳಿಸಬೇಕು. ಇಷ್ಟು ದಿನ ಕಾಯುವುದರಲ್ಲಿ ಅರ್ಥವಿಲ್ಲ. ಇನ್ನೂ ಪೈಪ್‌ಗಳು ಒಡೆದಾಗ 24 ತಾಸಿನೊಳಗೆ ಅದನ್ನು ಸರಿಪಡಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ ಎಂದರು.

ಆದಷ್ಟು ಶೀಘ್ರ ಪ್ರಗತಿ ಸಾಧಿಸಬೇಕು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪಂಚಾಯತ್‌ ರಾಜ್‌ ಇಲಾಖೆಯ ನಾನಾ ವಿಷಯಗಳು, ಜಲಜೀವನ ಮಿಷನ್, ಸ್ವಚ್ಛ ಭಾರತ ಮಿಷನ್, ಯೋಜನಾ ಶಾಖೆ, ಲೆಕ್ಕ ಶಾಖೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲೂಕು ನರೇಗಾ ಸಹಾಯಕ ನಿರ್ದೇಶಕರಾದ ಯು.ಎಚ್. ಸೋಮಶೇಖರ್, ಪಂಚಾಯತ್‌ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ಯೋಜನಾಧಿಕಾರಿ ನವೀನ್‌ಕುಮಾರ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಕಿರಣ್, ತಾಪಂ ವ್ಯವಸ್ಥಾಪಕ ಖಲೀಲ್ ಸಾಬ್, ಪಿಡಿಒಗಳು, ನರೇಗಾ ಹಾಗೂ ತಾಪಂ ಸಿಬ್ಬಂದಿ ಇದ್ದರು.ಜನರಿಗೆ ತೊಂದರೆ: ಏಳೆಂಟು ಜನ ಪಿಡಿಒಗಳು ದಾವಣಗೆರೆಯಿಂದ ಹೋಗಿ ಬಂದು ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸರಿಯಾದ ಸಮಯಕ್ಕೆ ಪಂಚಾಯಿತಿಗಳಿಗೆ ಹಾಜರಾಗದಿದ್ದರೆ ಸರ್ಕಾರಿ ಕೆಲಸಗಳು ಹಾಗೂ ಜನರ ಸೇವೆಗಳಿಗೂ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಪಂಚಾಯಿತಿ ಇರುವ ತಾಲೂಕಿನ ಕೇಂದ್ರ ಸ್ಥಾನ ಅಥವಾ ಪಂಚಾಯಿತಿಗಳ ಅಕ್ಕಪಕ್ಕದ ಪಟ್ಟಣಗಳಲ್ಲಾದರೂ ವಾಸವಾಗಿರುವುದು ಕಡ್ಡಾಯ ಎಂದು ಜಿಪಂ ಸಿಇಒ ಸದಾಶಿವಪ್ರಭು ತಿಳಿಸಿದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ