ಯುವಕರು ಎಚ್ಚರ ತಪ್ಪಿದರೆ ಮಾದಕ ವ್ಯಸನಕ್ಕೆ ಬಲಿಯಾಗಬೇಕಾದೀತು-ಶೆಟ್ಟರ್‌

KannadaprabhaNewsNetwork | Published : Aug 4, 2024 1:18 AM

ಸಾರಾಂಶ

ಯುವಕರು ಎಚ್ಚರಿಕೆಯ ಹೆಜ್ಜೆ ಹಾಕದಿದ್ದರೆ ಮಾದಕ ವ್ಯಸನಕ್ಕೆ ಬಲಿಯಾಗಿ ಇಡೀ ಕುಟಂಬ ಹಾಗೂ ವೈಯಕ್ತಿಕ ದುಃಖಕ್ಕೆ ಕಾರಣವಾಗಬೇಕಾದೀತು, ಸಂಕಷ್ಟಕ್ಕೆ ಇಡೀ ಸಮಾಜ ಪರಿತಪಿಸುವಂತಾದೀತು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್‌ ಎಚ್ಚರಿಸಿದರು.

ಹಾನಗಲ್ಲ: ಯುವಕರು ಎಚ್ಚರಿಕೆಯ ಹೆಜ್ಜೆ ಹಾಕದಿದ್ದರೆ ಮಾದಕ ವ್ಯಸನಕ್ಕೆ ಬಲಿಯಾಗಿ ಇಡೀ ಕುಟಂಬ ಹಾಗೂ ವೈಯಕ್ತಿಕ ದುಃಖಕ್ಕೆ ಕಾರಣವಾಗಬೇಕಾದೀತು, ಸಂಕಷ್ಟಕ್ಕೆ ಇಡೀ ಸಮಾಜ ಪರಿತಪಿಸುವಂತಾದೀತು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್‌ ಎಚ್ಚರಿಸಿದರು.ಹಾನಗಲ್ಲಿನ ನ್ಯೂ ಕಾಂಪಾಜಿಟ್ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜಿಲ್ಲಾ ಜನ ಜಾಗೃತಿ ವೇದಿಕೆ ಆಯೋಜಿಸಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸರಕಾರಗಳೇ ಈ ಮಾದಕ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಕೇವಲ ಕಾನೂನಿನಿಂದ ಎಲ್ಲವೂ ಸಾಧ್ಯವಿಲ್ಲ. ಆದರೆ ಸರಕಾರಗಳು ಸಮಾಜ ಸಂಯುಕ್ತ ಜವಾಬ್ದಾರಿ ನಿರ್ವಹಿಸಿದರೆ ನಮ್ಮ ದೇಶ ಮಾದಕ ಜಗತ್ತಿನಿಂದ ಹೊರಬರಲು ಸಾಧ್ಯ. ಮಾದಕ ವಸ್ತುಗಳ ಮಾರಾಟಕ್ಕೆ ಶಾಲಾ ಕಾಲೇಜುಗಳನ್ನೇ ಗುರಿ ಮಾಡಿಕೊಂಡು ಉದ್ಯಮಗಳು ಹಣ ಗಳಿಸುವ ದಂಧೆಗೆ ಮುಂದಾಗಿವೆ. ಇದಕ್ಕಾಗಿ ಸಮಾಜ ಎಚ್ಚೆತ್ತರೆ ಖಂಡಿತ ಮಾದಕ ಪಿಡುಗು ದೂರವಾಗುತ್ತದೆ. ನಮ್ಮ ಮಕ್ಕಳು ಈ ಮಾದಕದಿಂದಾಗಿ ಅಪರಾಧಿ ಕೃತ್ಯಕ್ಕೆ ಒಡ್ಡಿಕೊಳ್ಳುವುದು ತಪ್ಪುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೊಂದಿಗೆ ಈ ದೇಶದ ಮಠ ಮಾನ್ಯಗಳು ಕೈ ಜೋಡಿಸಿದರೆ ಅತ್ಯಲ್ಪ ಸಮಯದಲ್ಲೆ ಇದಕ್ಕೆ ಪರಿಹಾರ ಸಾಧ್ಯ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಹಾವೇರಿ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವೆನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಡಾ.ವೀರೇಂದ್ರ ಹೆಗ್ಗಡೆಯವರು ಈ ನಾಡಿನ ಹಿತಕ್ಕೆ ದೂರದೃಷ್ಟಿಯ ಚಿಂತನೆಗೆ ಮುಂದಾಗಿದ್ದಾರೆ. ಬಡವರು, ದೀನ ದಲಿತು, ದುರ್ಬಲರು, ಅಂಗ ದೌರ್ಬಲ್ಯ ಉಳ್ಳವರು, ಶಾಲಾ ಕಾಲೇಜು ಮಕ್ಕಳಿಗೆ ಆರ್ಥಿಕ ಸಮಾಜಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳದ ಕೋಟಿ ಕೋಟಿ ಹಣವನ್ನು ಸತ್ಕಾರ್ಯಕ್ಕೆ ವಿನಿಯೋಗಿಸುತ್ತಿರುವ ಅವರ ತಂಡ ಸಾಮಾಜಿಕ ಕ್ರಾಂತಿಯನ್ನೇ ಮಾಡಿದೆ ಎಂದರು.ಪ್ರಾಚಾರ್ಯ ರವೀಂದ್ರ ಜಡೆಗೊಂಡರ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಇದರ ಜಾಗೃತಿ ಅತ್ಯಂತ ಅವಶ್ಯವಾಗಿದೆ. ಕಾಲೇಜುಗಳಲ್ಲಿ ಇಂತಹ ಜಾಗೃತಿಗೆ ಎಲ್ಲರೂ ಸಂಕಲ್ಪ ಮಾಡಿ ಕ್ರಿಯಾಶೀಲರಾಗಬೇಕಾಗಿದೆ. ದಾರಿ ತಪ್ಪು ಮಕ್ಕಳಿಗೆ ತಿಳುವಳಿಕೆ ಹೇಳುವ ಅತ್ಯಂತ ಅಭಿನಂದನೀಯ ಕೆಲಸ ಇದಾಗಿದೆ. ಈಗಲೇ ಎಚ್ಚರಗೊಳ್ಳದಿದ್ದರೆ ಮುಂದೆ ಬಹು ದೊಡ್ಡ ಸಂಕಷ್ಟ ಎದುರಿಸುವುದು ಹಲವು ಕುಟುಂಬಗಳಿಗೆ ಅನಿವಾರ್ಯವಾಗುತ್ತದೆ ಎಂದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ನಾರಾಯಣ ಚಿಕ್ಕೊರ್ಡೆ, ವಾಸುದೇವ ಮೂರ್ತಿ, ಉಪನ್ಯಾಸಕರಾದ ಎಫ್.ಸಿ.ಕಾಳಿ, ಕೇಶವ ಶೇಷಗಿರಿ, ಆಂನೇಯ ಹಳ್ಳಳ್ಳಿ, ಅಕ್ಷತಾ ಕೂಡಲಮಠ, ಲಿಂಗರಾಜ ಗುಂಡೇಗೌಳಿ, ಪ್ರದೀಪ ಕಾಟೇಕರ ಅತಿಥಿಗಳಾಗಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.

Share this article