ರಾಮಮಂದಿರದ ಉದ್ಘಾಟನೆ ವೇಳೆ ಅನಾಹುತವಾದರೆ ಕಾಂಗ್ರೆಸ್‌ ಹೊಣೆ

KannadaprabhaNewsNetwork |  
Published : Jan 05, 2024, 01:45 AM IST
ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ಹೇಳಿಕೆ ನೋಡಿದರೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ಸಿಗರು ಸಹಿಸುತ್ತಿಲ್ಲ. ಅದಕ್ಕಾಗಿ ಒಂದಷ್ಟು ಸಮಸ್ಯೆ, ಧಾರ್ಮಿಕ ಆತಂಕ ಸೃಷ್ಟಿಸಲು ಯತ್ನಿಸುತ್ತಿರುವಂತಿದೆ.

ಕಾರವಾರ:

ರಾಮಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಏನೇ ಅನಾಹುತವಾದರೂ ಕಾಂಗ್ರೆಸ್‌ನವರು ಕಾರಣರಾಗುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನೇರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಹೊಣೆಯಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ಹೇಳಿಕೆ ನೋಡಿದರೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ಸಿಗರು ಸಹಿಸುತ್ತಿಲ್ಲ. ಅದಕ್ಕಾಗಿ ಒಂದಷ್ಟು ಸಮಸ್ಯೆ, ಧಾರ್ಮಿಕ ಆತಂಕ ಸೃಷ್ಟಿಸಲು ಯತ್ನಿಸುತ್ತಿರುವಂತಿದೆ. ಭಾರತ ಸಂಭ್ರಮಪಡುವ ಕಾಲವಾಗಿದೆ. ಹರಿಪ್ರಕಾಶ ಮತ್ತೊಮ್ಮೆ ಗೋದ್ರಾ ಆಗುತ್ತದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದಾರೆ. ೨೦೦೨ರಲ್ಲಿ ಕರ ಸೇವಕರು ವಾಪಸ್ ಬರುವಾಗ ಪೆಟ್ರೋಲ್ ಬಾಂಬ್ ಹಾಕಿ ೫೯ ಜನ ಮೃತಪಟ್ಟಿದ್ದರು. ಅವರ ಹೇಳಿಕೆ ನೋಡಿದರೆ ಮತ್ತೆ ಆ ರೀತಿ ಆಗುತ್ತದೆ ಎಂದು ಅನಿಸುತ್ತದೆ. ರಾಮಮಂದಿರ ಉದ್ಘಾಟನೆ ವೇಳೆ ಅಪಘಡವಾದರೆ ಕಾಂಗ್ರೆಸ್ ನೇರ ಹೊಣೆ ಎಂದು ಹೇಳಿದರು.

ಸಂಸದ ಅನಂತಕುಮಾರ ಹೆಗಡೆ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಜನ ಸೇರುವುದಿಲ್ಲ ಎಂದ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಮೌಖಿಕವಾಗಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಅಧಿಕಾರಿಗಳೇ ಹೋಗದ ಕಾರಣ ಜನರು ಬರುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಪ್ರಚಾರ ಹೆಚ್ಚು ನೀಡಲು ಬದಲೀ ವ್ಯವಸ್ಥೆ ಮಾಡಿ ಎಂದು ಹೇಳಿರಬಹುದು. ಕೇಂದ್ರ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸಬಾರದು, ಅನುಷ್ಠಾನ ಮಾಡಬಾರದು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಆಡಳಿತಾತ್ಮಕ ಗೊಂದಲ ಸೃಷ್ಟಿಸಿದೆ ಎಂದು ಅಭಿಪ್ರಾಯಿಸಿದರು.ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ೯ ಲಕ್ಷ ಜನರಿಗೆ ಇದುವರೆಗೂ ಪ್ರಥಮ ಕಂತು ಬಂದಿಲ್ಲ. ಅಧಿಕಾರಕ್ಕೆ ಬರುವ ಮೊದಲು ಯುವ ನಿಧಿ ಬಗ್ಗೆ ಹೇಳಿದ್ದು ಒಂದು ಈಗ ಹೇಳುತ್ತಿರುವುದು ಮತ್ತೊಂದು. ಗ್ಯಾರಂಟಿ ಯೋಜನೆ ಮತ ಪಡೆಯಲು ಅಷ್ಟೆ ಆಗಿದೆ. ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಅನ್ಯಾಯವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಸಹ ಪ್ರಭಾರಿ ಎನ್.ಎಸ್. ಹೆಗಡೆ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ನಗರಾಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣಾಧ್ಯಕ್ಷ ಸುಭಾಸ ಗುನಗಿ ಇದ್ದರು.

ಭಾರತ್‌ ನಂ. 1

ವಿಕಸಿತ ಭಾರತ ಕಾರ್ಯಕ್ರಮ ಪ್ರತಿ ಗ್ರಾಪಂನಲ್ಲಿ ನಡೆಯುತ್ತಿದೆ. ಕಿಸಾನ್ ಸಮ್ಮಾನ್, ಉಜ್ವಲ್‌ ಯೋಜನೆ, ಆಯುಷ್ಮಾನ್ ಭಾರತ ಹೀಗೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದ ಜತೆಗೆ ಯೋಜನೆಯಡಿ ಆಯ್ಕೆಯಾಗದೇ ಇದ್ದವರಿಗೆ, ತಪ್ಪಿದವರಿಗೆ ಅರ್ಜಿ ನೀಡಲು ಅವಕಾಶ ನೀಡಲಾಗುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು. ೨೦೪೭ಕ್ಕೆ ಭಾರತ ಸ್ವಾತಂತ್ರ್ಯ ಸಿಕ್ಕು ೧೦೦ ವರ್ಷ ತುಂಬಲಿದೆ. ಆರ್ಥಿಕ, ಸಾಮಾಜಿಕ, ರಕ್ಷಣಾ ವ್ಯವಸ್ಥೆಯಲ್ಲಿ ಒಳಗೊಂಡು ಎಲ್ಲ ವಿಷಯದಲ್ಲಿ ಜಗತ್ತಿನಲ್ಲಿ ಭಾರತ ಪ್ರಥಮ ಸ್ಥಾನದಲ್ಲಿ ಇರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದೆ. ವ್ಯವಸ್ಥಿತವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ಆಯೋಜಿಸುತ್ತಿದ್ದಾರೆ ಎಂದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ