ಕೊಪ್ಪಳ: ಕುಡಿಯುವ ನೀರಿನ ಸಮಸ್ಯೆ ನಿಗಿಸಲು ಅಗತ್ಯ ಕ್ರಮ ವಹಿಸಿ, ತೊಂದರಯಾಗದಂತೆ ನೋಡಿಕೊಳ್ಳಿ, ಹಾಗೊಂದು ವೇಳೆ ತೊಂದರೆಯಾದರೆ ಸಹಿಸುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೇಸಿಗೆ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೀರು ಸಿಗುವ ಕಡೆಗೆ ಕೊಳವೆಬಾವಿ ಕೊರೆಯಿಸುವ ಹಾಗೂ ನೀರು ಇಲ್ಲದ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ಮೂರು ತಿಂಗಳ ಕಾಲ ನಿರಂತರವಾಗಿ ಯುದ್ದೋಪಾದಿ ರೀತಿಯಲ್ಲಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ತಾಪಂ ಇಓ ಕಚೇರಿಗಳ ಮುಂದೆ ಸಹಾಯವಾಣಿ ನಂಬರಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಿ ಕುಡಿವ ನೀರಿಗೆ ಸಂಬಂಧಿಸಿದಂತೆ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಸಚಿವರು ತಹಸೀಲ್ದಾರ ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.ನಿಯಮಿತ ಕ್ಷೇತ್ರ ಭೇಟಿ ನೀಡಿ: ತಹಸೀಲ್ದಾರರು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಕಾಲಕಾಲಕ್ಕೆ ಕ್ಷೇತ್ರ ಭೇಟಿ ನಡೆಸಬೇಕು. ಪ್ರತಿ ದಿನ ಎರಡು ಪಂಚಾಯತಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ, ಸಮನ್ವಯ ನಡೆಸಿದ ಬಗ್ಗೆ ಡೈರಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲ ಪುರಸಭೆ, ಪಪಂ ಮುಖ್ಯಾಧಿಕಾರಿಗಳು ಪ್ರತಿ ದಿನ ಎರಡು ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಸ್ಪಂದನೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಪಿಡಿಓಗಳಿಗೆ ಸೂಚನೆ: ಕೆಲವು ಪಿಡಿಓಗಳ ಕಾರ್ಯವೈಖರಿ ಸರಿ ಇಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ವಾಟರಮನ್ ಗಳು ಮತ್ತು ಪಿಡಿಓಗಳು ಸರಿಯಾಗಿ ಕಾರ್ಯನಿರ್ವಹಿಸಿ ಜನತೆಗೆ ಸ್ಪಂದನೆ ನೀಡಬೇಕು ಎಂದರು.ಕಾರ್ಯ ಹಂಚಿಕೆ:ಬೇಸಿಗೆ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳ ಮೇಲೆ ಬರ ಹಾಗೂ ಕುಡಿವ ನೀರು ಪೂರೈಕೆಯ ವಿಷಯದ ಮೇಲೆ ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಚಿವರು ನಿರ್ದೇಶನ ನೀಡಿದರು.
ಇದೆ ವೇಳೆ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಮುಂದಿನ 3 ತಿಂಗಳಲ್ಲಿ 151 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಕಾಲಕಾಲಕ್ಕೆ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಕುಡಿಯುವ ನೀರು ಮೇವು ಪೂರೈಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿ ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜನಾರ್ದನ ರೆಡ್ಡಿ, ಜಿಪಂ ಸಿಇಓ ರಾಹುಲ್ ಪಾಂಡೆ, ಎಸ್ಪಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಹಾಗೂ ತಹಸೀಲ್ದಾರರು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.