ಹೊಸದುರ್ಗ: ಧಾರ್ಮಿಕ ಜಾಗೃತಿ ಹಾಗೂ ನೈತಿಕ ಶಿಕ್ಷಣವಿದ್ದರೆ ಸಂಸ್ಕಾರ ಹೊಂದಲು ಸಾಧ್ಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನೈತಿಕ ನೆಲೆಗಟ್ಟು ಹಾಗೂ ಧಾರ್ಮಿಕ ಜಾಗೃತಿಯಿದ್ದರೆ ಸಮಾಜವನ್ನು ಬೆಳಕಿನ ಕಡೆಗೆ ಕರೆದೊಯ್ಯಲು ಸಾಧ್ಯ ಎಂದರು.ನಿತ್ಯ ಪ್ರಾರ್ಥನೆ, ಧ್ಯಾನ, ವಚನಗಳ ಕೇಳುವಿಕೆಯು ಯಾಂತ್ರಿಕವಲ್ಲ. ವಚನಗಳನ್ನು ಕೇಳುತ್ತ, ಮನನ ಮಾಡಿಕೊಳ್ಳುವ ಮೂಲಕ ಕ್ರಿಯಾಶೀಲರಾಗಬೇಕು. ಎಲ್ಲರ ಜವಾಬ್ದಾರಿಗಿಂತ ನಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದು ಮುಖ್ಯ. ಸಾಧನೆ ಸೋಮಾರಿಗಳ ಸೊತ್ತಲ್ಲ. ಮನುಷ್ಯ ಸದಾ ಕ್ರಿಯಾಶೀಲನಾಗಿರಬೇಕು. ಜಡತ್ವ ಕಿತ್ತುಹಾಕಬೇಕು ಎಂದು ಹೇಳಿದರು.
ಪೋಷಕರ ಪ್ರೀತಿ, ಅವರಿಗೆ ನೀಡುವ ಸೌಲಭ್ಯಗಳು ಹೆಚ್ಚಾಗಿ ಇಂದು ಮಕ್ಕಳಲ್ಲೂ ಜಾಡ್ಯತೆ ಆವರಿಸಿ, ಸೋಮಾರಿಗಳಾಗುತ್ತಿದ್ದಾರೆ. ಮಕ್ಕಳ ಬಗ್ಗೆ ನಕಾರಾತ್ಮಕ ಮಾತುಗಳನ್ನು ಹೇಳುವುದಕ್ಕಿಂತ ಸಕಾರಾತ್ಮಕ ಮಾತುಗಳನ್ನು ಹೇಳುವುದರ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನೂ ಮುಂದೆ ತರಬಹುದು. ಯಾವ ಮಕ್ಕಳೂ ದಡ್ಡರಲ್ಲ ಎಲ್ಲರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಮಕ್ಕಳು ಸಾಧಕರಾಗಲು ಇಚ್ಛಾಶಕ್ತಿ, ಮನೋಬಲ, ಪ್ರೋತ್ಸಾಹ, ಮೌಲ್ಯಯುತ ವಾತಾವರಣ ಅತ್ಯಗತ್ಯವಾಗಿ ಬೇಕು ಎಂದರು.ಕಲಿಕೆಯ ಜವಾಬ್ದಾರಿ ಕುರಿತು ಹೊಳಲ್ಕೆರೆಯ ಸೀಮಾ ಬಸವರಾಜ ಪಾಟೀಲ ಮಾತನಾಡಿ, ಮಕ್ಕಳ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವಲ್ಲಿ ತಾಯಿ-ತಂದೆ, ಶಿಕ್ಷಕರು ಮತ್ತು ಧರ್ಮಗುರುಗಳ ಪಾತ್ರ ಬಹಳ ಮುಖ್ಯವಾದುದು. ತಾಯಿ ಕೇವಲ ಮಮತೆಯ ರೂಪದಲ್ಲಷ್ಟೇ ಅಲ್ಲ ಗುರುವಾಗಿಯೂ ಪ್ರಭಾವಬೀರುತ್ತಾರೆ. ಪೋಷಕರು ತಾವು ಅನುಭವಿಸುವ ಕಷ್ಟಗಳನ್ನು ತಮ್ಮ ಮಕ್ಕಳು ಅನುಭವಿಸಬಾರದು ಎನ್ನುವ ತಪ್ಪು ಕಲ್ಪನೆಯನ್ನು ತೊಡೆದುಹಾಕಬೇಕು. ಮಕ್ಕಳಿಗೂ ಕಷ್ಟ-ನಷ್ಟದ ಪಾಠವನ್ನು ಹೇಳಿಕೊಡಬೇಕು ಎಂದು ಹೇಳಿದರು.
ಮಕ್ಕಳಿಗೆ ಅನೇಕ ದುಶ್ಚಟಗಳು ಪೋಷಕರಿಂದಲೇ ಬರುತ್ತವೆ ಎನ್ನುವ ಎಚ್ಚರಿಕೆ ಪೋಷಕರಲ್ಲಿ ಇರಬೇಕು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳ ಕಡೆ ಗಮನ ಕೊಡುತ್ತಿರುವುದು ಕಡಿಮೆಯಾಗಿದೆ. ಮನೆಯ ವಾತಾವರಣ ಅಹ್ಲಾದಕರವಾಗಿರದಿದ್ದರೆ ಮಕ್ಕಳ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯವಿಲ್ಲ. ಶಿಕ್ಷಣಕೊಡುವುದು ಪೋಷಕರ ಧರ್ಮ. ಮಕ್ಕಳ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಶಿಕ್ಷಣ ಕೊಡಿಸಬೇಕೇ ಹೊರತು ತಮ್ಮ ಅಭಿಪ್ರಾಯಗಳನ್ನು ಮಕ್ಕಳ ಮೇಲೆ ಹೇರಬಾರದು. ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಚಿಕ್ಕಂದಿನಿಂದಲೇ ಕಲಿಸಬೇಕು ಎಂದರು.