ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಠದ ಲೆಕ್ಕಪತ್ರದ ವಿವರ ನೀಡುವಂತೆ ಕೇಳಿದರೆ ಶ್ರೀಮಠದ ಟ್ರಸ್ಟ್ ಪದಾಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ಆರೋಪಿಸುತ್ತಿದ್ದಾರೆ. ಟ್ರಸ್ಟಿನವರಿಗೆ ಆತ್ಮಸಾಕ್ಷಿಯಿದ್ದಲ್ಲಿ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಪಾದಗಳನ್ನು ಬಲಗೈಲಿ ಮುಟ್ಟಿ ಪ್ರಮಾಣ ಮಾಡಲಿ ಎಂದು ಶ್ರೀಮಠದ ಭಕ್ತ ಗುರುಸಿದ್ದಪ್ಪ ಕಾರಿ ಹೇಳಿದರು.ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಶ್ರೀಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಸಿದ್ಧಾರೂಢ ಮಠದ ಬೈಲಾ ಹಳೆಯದಾಗಿದ್ದು, ಅದನ್ನು ತಿದ್ದಪಡಿ ಮಾಡುವಂತೆ, ಲೆಕ್ಕಪತ್ರ ನೀಡುವಂತೆ ಶ್ರೀ ಮಠದ ಟ್ರಸ್ಟ್ ಪದಾಧಿಕಾರಿಗಳಿಗೆ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಪತ್ರದ ಮೂಲಕ ವಿನಂತಿಸಲಾಗಿದೆ. ಅದನ್ನೇ ಶ್ರೀ ಮಠದ ಟ್ರಸ್ಟ್ ಪದಾಧಿಕಾರಿಗಳು ಆರೂಢ ತತ್ವ ಪಾಲಿಸುವ ಸದಸ್ಯರು ಗದ್ದಲ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭಕ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ಉತ್ತರಿಸದೆ, ಬೇರೆಯವರು ಉತ್ತರ ನೀಡಲು ಮುಂದಾದಾಗ ಅವರಿಂದ ಮೈಕ್ ಕಸಿದುಕೊಳ್ಳಲಾಗಿದೆ. ಇದನ್ನೇ ಗದ್ದಲ ಎಂದು ಬಿಂಬಿಸಲಾಗಿದೆ. ಪೂರ್ವ ನಿಯೋಜಿತವಾಗಿ ಸಭೆ ನಡೆಯಬಾರದು ಎಂದು ನಿರ್ಧರಿಸಿ ಈ ರೀತಿ ಮಾಡಿದ್ದಾರೆ.ಕೊಲೆ ಮಾಡುವ ಬೆದರಿಕೆ:
ಸಿದ್ಧಾರೂಢ ಮಠ ಟ್ರಸ್ಟ್‌ನಲ್ಲಿ ಪಾರದರ್ಶಕ ಆಡಳಿತ ನಡೆಯಬೇಕು ಎನ್ನುವುದು ನಮ್ಮ ಇಚ್ಚೆ. ಅದನ್ನು ಪ್ರಶ್ನಿಸಿದಾಗ ಬೆದರಿಸಿ ಬಾಯಿ ಮುಚ್ಚಿಸುವ ಕೆಲಸವನ್ನು ಮಠದ ಪದಾಧಿಕಾರಿಗಳು ಮಾಡಿದರು. ಮಠದ ಅಭಿವೃದ್ಧಿಯಲ್ಲಾದ ಕಳಪೆ ಕಾಮಗಾರಿ, ದುಂದು ವೆಚ್ಚದ ವಿಷಯದ ಕುರಿತು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದರು. ಅಲ್ಲೇ ಪ್ರತಿಭಟನೆಗೆ ಮುಂದಾದಾಗ ಪೊಲೀಸರ ಮೂಲಕ ನಮಗೆ ಸಮಾಧಾನ ಮಾಡಿದ್ದಾರೆ ಎಂದು ವಿವರಿಸಿದರು.ನನ್ನ ಮೇಲೆ ಸುಳ್ಳು ಆರೋಪ:
ಗುರುಸಿದ್ದಪ್ಪ ಅಂಗಡಿ ಮಾತನಾಡಿ, ಮಠದ ಆವರಣದಲ್ಲಿ ನಮ್ಮ ಕುಟುಂಬದ ಆಸ್ತಿ ಇತ್ತು. ಅದನ್ನು ಶ್ರೀಮಠಕ್ಕೆ ದಾನ ಮಾಡಿದ್ದೇವೆ. ಹಾಗಾಗಿ ನಮಗೆ ರಿಯಾಯತಿ ದರದಲ್ಲಿ ಅಂಗಡಿ ನೀಡಲಾಗಿದೆ. ಇದರ ಬಾಡಿಗೆ ಹಣವನ್ನು ನಾನು ಮಾ. 3ರಂದು ಭರಿಸಿ ರಶೀದಿ ಪಡೆದುಕೊಂಡಿದ್ದೇನೆ. ಆದರೆ, ಮಠದ ಪದಾಧಿಕಾರಿಗಳು ಅಂಗಡಿ ಬಾಡಿಗೆ ಬಾಕಿ ಇಟ್ಟುಕೊಂಡು ಈ ರೀತಿ ಆರೋಪಿಸುತ್ತಿದ್ದಾರೆ ಎಂದು ನನ್ನ ಮೇಲೆ ದೂರಿದ್ದಾರೆ. ಅಲ್ಲದೇ ಸಭೆಯಲ್ಲಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ.ಈ ಕುರಿತು ನಾನು ಈಗಾಗಲೇ ಪೊಲೀಸ್ ಆಯುಕ್ತರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಗೂಂಡಾ ಪ್ರವೃತ್ತಿಯುಳ್ಳ, ರಾಜಕಾರಣಿಯೂ ಆಗಿರುವ ಓರ್ವರು ಟ್ರಸ್ಟ್ ಪದಾಧಿಕಾರಿಯಾಗಿದ್ದು, ಸಭೆಯಲ್ಲಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದರು.
ಆಮೀಷ ಒಡ್ಡಿದ್ದರು:ಮಠದ ಅವ್ಯವಹಾರ ನನಗೆ ಗೊತ್ತಿರುವುದರಿಂದ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. 3 ವರ್ಷದ ಆಡಿಟ್ ಕೇಳಿದರೆ ಪದಾಧಿಕಾರಿಗಳು ವಿಚಲಿತರಾಗುತ್ತಾರೆ. ಸತ್ಯ ಹೊರಗೆ ಬರುತ್ತದೆ ಎನ್ನುವ ಭಯ ಅವರಿಗೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನನಗೆ ಅಂಗಡಿ ಬಾಡಿಗೆ ತುಂಬಬೇಡ. ನಮ್ಮ ಅಧಿಕಾರವನ್ನು ಪ್ರಶ್ನಿಸಬೇಡ ಎಂದು ಆಮೀಷ ವೊಡ್ಡಿದ್ದರು ಎಂದು ಹೇಳಿದರು.
ಈ ವೇಳೆ ಮಂಜುನಾಥ ಲೂತಿಮಠ, ಎಸ್.ಆರ್. ಧಾರವಾಡ, ಪ್ರವೀಣ ಗಾಯಕವಾಡ ಸೇರಿದಂತೆ ಹಲವರಿದ್ದರು.