ಭಟ್ಕಳ: ಇಲ್ಲಿನ ರಬಿತಾ ಸೊಸೈಟಿ ಸಭಾಂಗಣದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಸಾಮಾಜಿಕ ಜಾಲತಾಣಗಳ ಅಡ್ಮಿನ್ ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಸೈಬರ್ ಸುರಕ್ಷತೆಯ ಕುರಿತು ಜಾಗೃತಿ ಕಾರ್ಯಾಗಾರ ಏರ್ಪಡಿಸಿತ್ತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಕರ್ನಾಟಕ ಪೊಲೀಸ್ ಅಕಾಡೆಮಿಯ ಸೈಬರ್ ಸೆಕ್ಯುರಿಟಿ ತರಬೇತುದಾರ ಹಾಗೂ ಮಂಗಳೂರು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಡಾ. ಅನಂತ್ ಪ್ರಭು ಮಾತನಾಡಿ, ಇಂದು ಯಾರೂ ಕೂಡ ಸುರಕ್ಷಿತವಾಗಿಲ್ಲ. ನಮ್ಮ ಎಲ್ಲ ದತ್ತಾಂಶಗಳು ಸೋರಿಕೆಯಾಗುತ್ತಿವೆ. ನಮ್ಮ ಬ್ಯಾಂಕ್ ಖಾತೆಗಳಿಗೆ ಯಾರು ಬೇಕಾದರೂ ಕನ್ನ ಹಾಕಬಹುದು. ಕ್ಷಣಾರ್ಧದಲ್ಲೇ ನಮ್ಮ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ದೋಚಬಹುದು. ಇವುಗಳಿಂದ ಸುರಕ್ಷಿವಾಗಿರಲು ಹಲವು ಉಪಕ್ರಮಗಳಿದ್ದು, ಅದನ್ನು ಅನುಸರಿಸಿದರೆ ಸೈಬರ್ ವಂಚನೆಯಯಿಂದ ಪಾರಾಗಬಹುದು ಎಂದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಟಿ. ವೆಂಕಟೇಶ್ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಲಾಭ ಮತ್ತು ನಷ್ಟಗಳು ಸಮವಾಗಿದ್ದು, ಅದರ ಬಳಕೆಯ ಮೇಲೆ ಲಾಭನಷ್ಟದ ಲೆಕ್ಕ ಹಾಕಬಹುದು. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಲು ಯಾರಿಂದಲೂ ಸಾಧ್ಯವಿಲ್ಲ. ಇದು ನಮ್ಮ ಬುದುಕಿನ ಅತಿ ಮುಖ್ಯ ವೇದಿಕೆಯಾಗಿ ಮಾರ್ಪಟ್ಟಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಭಟ್ಕಳದಲ್ಲೂ ಸೈಬರ್ ವಂಚನೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡವರಿದ್ದಾರೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಯುನೂಸ್ ಖಾಝಿಯಾ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತಿಕುರ‍್ರಹ್ಮಾನ್ ಮುನಿರಿ, ಕಾರ್ಯಾಗಾರದ ಸಂಚಾಲಕ ಮುಬಶ್ಶಿರ್ ಹುಸೇನ್ ಹಲ್ಲಾರೆ, ತಂಝೀಮ್ ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ ಮತ್ತಿತರರಿದ್ದರು.ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ತಂಝೀಮ್ ಮೀಡಿಯಾ ವಾಚ್ ಕಮಿಟಿ ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಅತಿಥಿಗಳನ್ನು ಪರಿಚಯಿಸಿದರು. ಮಿಸ್ಬಾ-ಉಲ್ -ಹಖ್ ವಂದಿಸಿದರು. ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದ ಅಡ್ಮಿನ್ ಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.