ಕನ್ನಡಪ್ರಭ ವಾರ್ತೆ ದಾವಣಗೆರೆ
ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿ, ಮಧ್ಯಾಹ್ನದ ವೇಳೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಹನುಮ ಧ್ವಜಕ್ಕಷ್ಟೇ ಅಲ್ಲ, ರಾಷ್ಟ್ರಧ್ವಜಕ್ಕೂ ಅವಮಾನಿಸಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.ನಗರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 2 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇಲ್ಲ. ಈಗ ಐನೂರು ವರ್ಷಗಳ ಹಿಂದುಗಳ ಹೋರಾಟದ ಫಲವಾಗಿ ಶ್ರೀರಾಮ ಮಂದಿರ ಆಗಿರುವುದು ಕಂಡು ಕಾಂಗ್ರೆಸ್ಸಿಗರು ಹತಾಶರಾಗಿ ಹೀಗೆ ಮಾಡುತ್ತಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೆಸರಿನಲ್ಲಿ ಶಿವ ಇದೆ. ಆದರೆ, ಅದೇ ಡಿಕೆಶಿ ಶಿವನಿಗೆ ವಿರುದ್ಧವಾಗಿದ್ದಾರೆ. ಶಿವಕುಮಾರವರೆ ನಿಮ್ಮ ಕೊರಳಲ್ಲಿ ಮಿಡಿ ನಾಗರ ಹಾವು ಇದೆ. ಹಿಂದುಗಳನ್ನು ನೀವೂ ಸಹ ದ್ವೇಷ ಮಾಡುತ್ತಿದ್ದೀರಿ. ಸಿಎಂ ಸಿದ್ದರಾಮಯ್ಯ ಹೆಸಿರನಲ್ಲಿ ರಾಮ ಇದೆ. ಆದರೆ, ಅದೇ ಸಿದ್ದರಾಮಯ್ಯ ಬುಡಕಟ್ಟು ಮಹಿಳೆ ಎಂಬುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಗ್ಗೆ ಏಕವಚನದಲ್ಲಿ ಮಾತನಾಡಿ, ಅವಮಾನಿಸಿದ್ದಾರೆ ಎಂದು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಆಡಿದ ಮಾತಿಗೆ ಕ್ಷಮೆ ಕೇಳಿದರಷ್ಟೇ ಸಾಲದು, ಇಂತಹ ಹೇಳಿಕೆ, ಮಾತುಗಳು, ವರ್ತನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶ್ರೀರಾಮನ ಭಕ್ತರನ್ನು ಕಂಡರೆ ನಿಮಗೆ ಆಗುವುದಿಲ್ಲ. ಕರ ಸೇವಕರನ್ನು ಬಂಧಿಸುವಂತೆ ಹೇಳುತ್ತೀರಾ? ದತ್ತ ಪೀಠದಲ್ಲಿ ದತ್ತ ಮಾಲಾಧಾರಿಗಳನ್ನು ಬಂಧಿಸುತ್ತೀರಿ. ಜೈ ಶ್ರೀರಾಮ ಅಂತಾ ಹೇಳಿ, ಮಾರನೆಯ ದಿನವೇ ಭಗವಾಧ್ವಜ, ಕೇಸರಿ ಬಾವುಟವನ್ನು ಇಳಿಸಿದ್ದೀರಿ. ಅದೇ ರೀತಿ ನಿಮ್ಮನ್ನು ಕುರ್ಚಿಯಿಂದಲೇ ಇಳಿಯುವಂತೆ ಜನ ಮಾಡುತ್ತಾರೆ. ನೀವು ಬಾಬರ್ ಸಂಸ್ಕೃತಿಯವರು, ಓಟಿಗಾಗಿ ಹಿಂದುಗಳನ್ನು ದಮನ ಮಾಡಲು ಹೊರಟಿದ್ದೀರಿ. ಇನ್ನು ಮುಂದೆ ಹಿಂದುಗಳ ಮೇಲೆ ಲಾಠಿಚಾರ್ಜ್ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ಗೆ ಟಿಪ್ಪು, ಬಾಬರ್ ಮೇಲೆ ಪ್ರೀತಿಸಿದ್ದರಾಮಯ್ಯ ಸರ್ಕಾರ ಜನರಿಗೆ ಟೋಪಿ ಹಾಕಿಕೊಂಡೇ ಬಂದಿದೆ. ಹಿಂದುಗಳು, ಮಹಿಳೆಯರು, ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಪಕ್ಷದವರಿಗೆ ಟಿಪ್ಪು, ಬಾಬರ್ ಮತ್ತು ಘಜನಿ ಮಹಮ್ಮದ್ ಕಂಡರೆ ಬಹಳ ಪ್ರೀತಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದು ಕಾರ್ಯಕರ್ತರ, ಕರ ಸೇವಕರನ್ನು ಬಂಧಿಸಿದರು. ಇಂತಹ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ರಾಜ್ಯದ ಜನತೆ ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ