ಕನ್ನಡಪ್ರಭ ವಾರ್ತೆ ಶೃಂಗೇರಿ
ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತಿದ್ದರೂ ಅತಿ ಹೆಚ್ಚು ಮತಗಳಿಸಿ ಜನರ ವಿಶ್ವಾಸ ಗಳಿಸಿದೆ. ಕೆಲ ಪಕ್ಷಗಳು ಜೆಡಿಎಸ್ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಕೇವಲವಾಗಿ ಮಾತನಾಡುತ್ತಿವೆ. ಇನ್ನು ಮುಂದೆ ಸುಮ್ಮನಿದ್ದರೆ ಸರಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ನೂತನ ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್ ಹೇಳಿದರು.ಅವರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಜೆಡಿಎಸ್ ಹಿಂದಿನಿಂದಲೂ ಜನರ ಸಮಸ್ಯೆ, ರೈತರ ಸಮಸ್ಯೆಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಾ ಬಂದಿದೆ. ದೇವೆಗೌಡರು, ಕುಮಾರಣ್ಣನ ಉತ್ತಮ ಆಡಳಿತ ನೀಡಿದ್ದಾರೆ. ಪಕ್ಷವು ಓಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ಬದಲಾಗಿ ಅಭಿವೃದ್ಧಿ ರಾಜಕಾರಣ ಮಾಡಿದೆ ಎಂದರು.
ಜೆಡಿಎಸ್ ಮೈತ್ರಿ ವಿಚಾರ ಬಗ್ಗೆ ನಾವೇನು ಈಗ ಹೇಳುವುದಿಲ್ಲ. ರಾಜ್ಯಮಟ್ಟದಲ್ಲಿ ನಾಯಕರುಗಳು ಮಾತುಕತೆ ನಡೆಸಿದ್ದಾರೆ. ಮಾದ್ಯಮಗಳಲ್ಲಿ ನಾಯಕರುಗಳ ಹೇಳಿಕೆ ಬರುತ್ತಿದೆ, ನಮಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಲೋಕಸಭೆ, ಸ್ಥಳೀಯ ಚುನಾವಣೆಗಳು ಸದ್ಯದಲ್ಲಿ ಬರಲಿದ್ದು, ನಾವು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.ಅಧಿಕಾರ, ಹುದ್ದೆ ಮುಖ್ಯವಲ್ಲ, ಪಕ್ಷ ಸಂಘಟನೆ ಮುಖ್ಯವಾಗಿದೆ. ಪಕ್ಷ ಸಂಘಟಿಸುವುದು ಹಾಗೂ ನೀಡಿರುವ ಜವಾಬ್ದಾರಿ ನಿರ್ವಹಿಸುತ್ತೇನೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಮಹತ್ತರವಾಗಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯಬೇಕಿದೆ ಎಂದರು.
ಕ್ಷೇತ್ರಾಧ್ಯಕ್ಷ ದಿವಾಕರ ಭಟ್ ಭಂಡಿಗಡಿ ಮಾತನಾಡಿ, ಸದ್ಯದಲ್ಲಿ ಲೋಕಸಭೆ, ಸ್ಥಳೀಯ ಚುನಾವಣೆ ಬರಲಿದ್ದು ಪಕ್ಷ ಬಲವರ್ಧನೆಗೆ ಗಮನ ನೀಡುತ್ತಿದ್ದೇವೆ. ಮೈತ್ರಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿರದಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯಿಸುತ್ತೇವೆ. ಮೈತ್ರಿ ಅಭ್ಯರ್ಥಿಯಾಗಿ ನಮ್ಮ ಅಭ್ಯರ್ಥಿ ಸುಧಾಕರ ಶೆಟ್ಟರನ್ನು ಕಣಕ್ಕಿಳಿಸುತ್ತೇವೆ, ಜಿಲ್ಲೆಯಲ್ಲಿ ಜೆಡಿಎಸ್ ಪರ ಒಲವಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭರತ್ ಗಿಣಕಲ್ ಹಾಗೂ ನೂತನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ರನ್ನು ಅಭಿನಂದಿಸಲಾಯಿತು. ಜಿಲ್ಲಾ ಘಟಕದ ವಿವೇಕನಂದ ಸುಂಕುರ್ಡಿ, ಜಿ.ಜಿ ಮಂಜುನಾಥ್, ಮಲ್ಲೇಶ್, ಚಂದ್ರಪ್ಪ, ಆನಂದಸ್ವಾಮಿ ಮತ್ತಿತರರಿದ್ದರು.