ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಹಲವು ವರ್ಷಗಳಿಂದ ಕುಟುಂಬದ ಸದಸ್ಯರ ರೀತಿಯಲ್ಲಿಯೇ ಸಾಕಿ, ಸಲುಹಿ ಇದೀಗ ಫಸಲು ಬರುತ್ತಿರುವ ಸಂದರ್ಭ ಅಡಕೆ ತೋಟಗಳನ್ನು ಕತ್ತರಿಸಿ, ರಾಷ್ಟ್ರಿಯ ಹೆದ್ದಾರಿಗಾಗಿ ಬೈಪಾಸ್ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕವಾಗಿದೆ ಎಂದು ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನೆಪದಲ್ಲಿ ರೈತರ ಫಲವತ್ತಾದ ತೋಟ ಭೂಮಿಯನ್ನು ವಶ ಕ್ರಮ ಖಂಡಿಸಿ ನಡೆದ ಸಂತ್ರಸ್ತ ರೈತರ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳುವ ಮೂಲಕ ಅವರನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಜಮೀನು, ಭೂಮಿಯನ್ನು ರೈತರು ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಇದರಿಂದಾಗಿ ಹಲವು ರೈತಕುಟುಂಬ ಸರ್ಕಾರ ನೀಡಿದ ಪರಿಹಾರ ಅರಿವಿಲ್ಲದಂತೆ ಕರಗಿ ಅತ್ತ ಭೂಮಿ ಇಲ್ಲದೇ, ಇತ್ತ ಹಣವೂ ಇಲ್ಲದೇ, ಪರಸ್ಥಳಗಳಿಗೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯು ಬೈಪಾಸ್ ರಸ್ತೆ ಮೂಲಕ ಸಾಲೂರು ರಸ್ತೆಯಿಂದ ಶಿರಾಳಕೊಪ್ಪ ರಸ್ತೆ ಮೂಲಕ ಮಾಸೂರು ರಸ್ತೆ ಸಂಪರ್ಕ ಕಲ್ಪಿಸುತ್ತಿದೆ. ಈ ಯೋಜನೆಗೆ ಅನಗತ್ಯವಾದ ಗಬ್ಬೂರು, ಚನ್ನಳ್ಳಿ, ಸದಾಶಿವಪುರ, ನೆಲವಾಗಿಲು, ಕಾನೂರು, ಹಳಿಯೂರು ಗ್ರಾಮಗಳ ಜಮೀನುಗಳು ಭೂಸ್ವಾಧಿನಕ್ಕೆ ಒಳಪಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್ ಸಂಸದರು ಮತ್ತು ಶಾಸಕರು ಒಟ್ಟಿಗೆ ಸೇರಿ ಸಭೆ ಕರೆಯಲು 4 ಬಾರಿ ಮನವಿ ಮಾಡಿದರೂ ಫಲ ನೀಡಿಲ್ಲ. ವಾಹನಗಳ ಒತ್ತಡ ಕಡಿಮೆ ಇದ್ದರೂ ಹೆದ್ದಾರಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಸಂಸದರು ಅವರ ಜಮೀನುಗಳಲ್ಲಿ ಕೈಗಾರಿಕೆ, ವಿದ್ಯಾ ಸಂಸ್ಥೆಗಳನ್ನು ಕಟ್ಟುತಿದ್ದಾರೆ. ಬಡರೈತರ ಜಮೀನು ಭೂಸ್ವಾಧೀನ ಮಾಡಬೇಡಿ ಎಂದು ಮನವಿ ಮಾಡಿದರೆ ಉತ್ತರ ಕೊಡುತ್ತಿಲ್ಲ. ಬದಲಿಗೆ ಪೊಲೀಸ್ ಬಲ ಉಪಯೋಗಿಸಿ ರೈತನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಬೈಪಾಸ್ ಯೋಜನೆಯನ್ನು ಕೈ ಬಿಡಿ. ಜೀವ ಕೊಟ್ಟೆವು ಭೂಮಿ ಕೊಡೆವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ಮಾಸೂರು ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಗುಡ್ಡಳ್ಳಿ ಪರಮೇಶಪ್ಪ, ಪಾರಿವಾಳದ ಗಣೇಶ್, ಗುಡ್ಡಳ್ಳಿ ಕೃಷ್ಣ, ಶಿವಣ್ಣ, ಗೋಪಿ ಮುರ್ಲೆರ್, ನೂರ್ ಅಹಮದ್, ಸಂದೀಪ್ ಮಟ್ಟಿಮನೆ, ರೇವಣಪ್ಪ ಚಿಟ್ಟೂರು, ಜಂಬೂರ್ ರಾಜಣ್ಣ, ಅಶೋಕ್ ಜಿ., ನಗರದ ರವಿಕಿರಣ್, ಸಿರಿಯಾಣ್ಣರ ರೇವಣಪ್ಪ, ದುರ್ಗವ್ವಾರ ಗಿರೀಶ್, ಮಲ್ಲನಗೌಡ, ನವೀನ್, ಸಂತೋಷ್, ಮಾರುತಿ ರಾವ್ ಮತ್ತಿತರರು ಹಾಜರಿದ್ದರು.- - - ಬಾಕ್ಸ್ ಸರ್ಕಾರಿ ಜಮೀನು, ಗೋಮಾಳ ಬಳಸಲು ಸಲಹೆರೈತವರ್ಗ ಸಾಂಪ್ರಾದಾಯಿಕ ಕೃಷಿಯಿಂದ ಆರ್ಥಿಕವಾಗಿ ಪ್ರಯೋಜನವಾಗದೇ ಇತ್ತೀಚಿನ ವರ್ಷದಲ್ಲಿ ಅಡಕೆ ಬೆಳೆಯಿಂದ ಹಣ ಕಂಡು ತೃಪ್ತಿಪಟ್ಟುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಅಡಕೆ ತೋಟಗಳನ್ನು ಕತ್ತರಿಸುವ ಕ್ರಮ ಅವೈಜ್ಞಾನಿಕವಾಗಿದೆ. ತೋಟಗಳ ಬದಲಿಗೆ ಸರ್ಕಾರಿ ಜಮೀನು ಗೋಮಾಳ ಮತ್ತಿತರ ಜಾಗವನ್ನು ಗುರುತಿಸಿ, ಬೈಪಾಸ್ ನಿರ್ಮಿಸಿ ರೈತ ಸಮುದಾಯವನ್ನು ಕೆಣಕಬೇಡಿ ಎಂದು ಮಹಾದೇವಪ್ಪ ಎಚ್ಚರಿಸಿದರು.
- - --29 ಕೆ.ಎಸ್.ಕೆ.ಪಿ 1:
ಅವೈಜ್ಞಾನಿಕವಾದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರ ಜಮೀನು ತೋಟ ವಶಪಡಿಸಿಕೊಳ್ಳದಂತೆ ಆಗ್ರಹಿಸಿ ಶಿಕಾರಿಪುರದ ತಾಲೂಕು ಕಚೇರಿ ಬಳಿ ರೈತರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.