ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ವ್ಯಾಪ್ತಿಯಲ್ಲಿ ಇ-ಖಾತೆ ಪಡೆಯಲು ಬಾಕಿ ಇರುವ ಆಸ್ತಿಗಳಿಗೆ ಇ-ಖಾತಾ ಆಂದೋಲನ ಆರಂಭಿಸಲಾಗಿದೆ. ಇ-ಖಾತೆ ಬಾಕಿ ಇರುವ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿ ಇ-ಖಾತೆಗೆ ಒಳಪಡುವುದು. ಅನಧಿಕೃತ ಆಸ್ತಿಗಳ ಮಾಲೀಕರು ಬಿ-ಖಾತಾ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇ-ಖಾತೆ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸಿ ವಿಷಯದ ಪರಿಪೂರ್ಣ ಮಾಹಿತಿ ಇರುವ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಇ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚುರಪಡಿಸುವುದಾಗಿ ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೪ ಸಾವಿರ ಆಸ್ತಿಗಳಿದ್ದು, ಇದರಲ್ಲಿ ೧೪೦೮೩ ಆಸ್ತಿಗಳು ಇ-ಖಾತೆಗೆ ಒಳಪಟ್ಟಿದ್ದರೆ, ಇನ್ನೂ ೨೦,೦೧೭ ಆಸ್ತಿಗಳು ಬಾಕಿ ಇದೆ. ೬ ಸಾವಿರ ಅನಧಿಕೃತ ಸ್ವತ್ತುಗಳಿವೆ ಎಂದು ಮಾಹಿತಿ ನೀಡಿದರು.ಎ-ಖಾತೆಯಲ್ಲಿ ದಾಖಲಿಸುವ ಆಸ್ತಿಗಳಿಗೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗಪತ್ರಗಳು, ಸರ್ಕಾರ ಅಥವಾ ಸರ್ಕಾರದ ನಿಗಮ-ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು, ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ ೯೪ ಸಿಸಿ ಅಡಿ ನೀಡಲಾದ ಹಕ್ಕುಪತ್ರ. ಸಕ್ರಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ, ನಿವೇಶನಗಳ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ರಸೀದಿ, ಮಾಲೀಕರ ಫೋಟೋ, ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಒದಗಿಸುವಂತೆ ಹೇಳಿದರು.
ಬಿ-ಖಾತೆಯಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಸ್ವತ್ತಿನಳೀಕತ್ವ ಸಾಬೀತುಪಡಿಸುವ ದಾಖಲೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣಪತ್ರ, ಈ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ, ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಒದಗಿಸಬೇಕು ಎಂದರು.ನಗರದಲ್ಲಿ ೨೦ ಸಾವಿರ ಆಸ್ತಿಗಳಿಗೆ ಇ-ಖಾತೆಗೆ ಒಳಪಡಿಸಿವುದು ಬಾಕಿ ಇದೆ. ಇ-ಖಾತೆ ಇಲ್ಲದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ಇ-ಖಾತೆಗೆ ಒಳಪಡಿಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರತಿ ವಾರ್ಡ್‌ಗೆ ೪ ಮಂದಿ ಕಂದಾಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಬಾಕಿ ಇರುವ ಇ-ಆಸ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಕಾಲ ಅಧಿನಿಯಮದಡಿ ಇ-ಖಾತಾವನ್ನು ನೀಡಲು ನಿಗದಿಪಡಿಸಲಾದ ಏಳು ದಿನಗಳೊಳಗೆ ತಂತ್ರಾಂಶದಲ್ಲಿ ನಿಗದಿಪಡಿಸಿರುವ ಕಾರ್ಯದ ಒತ್ತಡವನ್ನು ನಿರ್ವಹಿಸಿ ಇ-ಖಾತೆ ಸೃಜಿಸಲಾಗುವುದು. ಇ-ಖಾತೆ ನಮೂನೆ ೨/೩ ಹಾಗೂ ೨ಎ/೩ಎ ನೀಡಲು ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆಯಲಾಗುವುದು ಎಂದರು.ಅನಧಿಕೃತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಬಿ-ಖಾತಾದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ತಮ್ಮ ಆಸ್ತಿಯ ಇ-ಖಾತಾ ದೊರೆಯುವುದರಿಂದ ವಹಿವಾಟು ನಡೆಸಲು ಸರಾಗವಾಗುತ್ತದೆ ಎಂದು ನುಡಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಪಂಪಾಶ್ರೀ, ಸದಸ್ಯರಾದ ರಜನಿ, ಪವಿತ್ರಾ, ಪೂರ್ಣಿಮಾ, ಶ್ರೀಧರ್, ರಾಮಲಿಂಗು, ನಹೀಂ ಸೇರಿದಂತೆ ಇತರರಿದ್ದರು.೩ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಮಂಡ್ಯದ ಬನ್ನೂರು ರಸ್ತೆಯ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಶ್ರೀಚಾಮುಂಡೇಶ್ವರಿ ದೇವಸ್ಥಾನದವರೆಗೆ ೩ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪಿ.ರವಿಕುಮಾರ್ ಹೇಳಿದರು.
ಮಂಗಳವಾರ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ರಸ್ತೆಯ ವಿಭಜಕದ ನಡುವೆ ಅಲಂಕಾರಿಕ ಹೂವಿನ ಗಿಡಗಳನ್ನು ನೆಟ್ಟು ಸೌಂದರ್ಯ ಹೆಚ್ಚಿಸಲಾಗುವುದು ಎಂದರು.ಎಂಜಿನಿಯರ್‌ಗಳಿಗೆ ಒಂದು ಅವಕಾಶ:
ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಚರಂಡಿ ನಿರ್ಮಿಸದೆ ಫುಟ್‌ಪಾತ್ ನಿರ್ಮಿಸಿರುವ ಬಗ್ಗೆ ಕೇಳಿದಾಗ, ನಾನು ಶಾಸಕನಾಗುವಷ್ಟರಲ್ಲೇ ಆ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಡೆಸುತ್ತಿರುವ ಕಾಮಗಾರಿ. ಆ ಎಂಜಿನಿಯರ್‌ಗಳು ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ. ಅವರಿಗೂ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಶಾಸಕ ಪಿ.ರವಿಕುಮಾರ್ ಉತ್ತರಿಸಿದರು.ಮಾರುಕಟ್ಟೆಗೆ ಇನ್ನೂ ೧.೫೦ ಕೋಟಿ ರು. ಬೇಕು:
ತರಕಾರಿ ಮಾರುಕಟ್ಟೆಗೆ ಇನ್ನೂ ೧.೫೦ ಕೋಟಿ ರು. ಅಗತ್ಯವಿದೆ. ಕೆಲವೊಂದು ಕಾಮಗಾರಿಗಳನ್ನು ನಡೆಸಿದ ಬಳಿಕ ಉದ್ಘಾಟನೆಗೊಳಿಸಿ ಅಂಗಡಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದರು.