ಜಮೀನಿಗೆ ಅಕ್ರಮ ಪ್ರವೇಶ, ತಂತಿ ಬೇಲಿ ನಿರ್ಮಾಣ: ಮೌನ ಪ್ರತಿಭಟನೆ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ತನ್ನ ಜಮೀನಿಗೆ ಅ್ರಮವಾಗಿ ಪ್ರವೇಶಿಸಿ ರಾತ್ರೋರಾತ್ರಿ ತಂತಿ ಬೇಲಿ ನಿರ್ಮಿಸಿದ್ದಾರೆಂದು ರೈತ ಮಹಿಳೆ ತುರುವೇಕೆರೆ ತಾಲೂಕು ಕಚೇರಿ ಮಂದೆ ತನ್ನ ಕುಟುಂಬದೊಂದಿಗೆ ಮೌನ ಪ್ರತಿಭಟನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಹಲವಾರು ವರ್ಷಗಳಿಂದ ಅನುಭವದಲ್ಲಿದ್ದ ಜಮೀನಿನಲ್ಲಿ ಮರಗಿಡಗಳನ್ನು ಬೆಳೆಸಿ ಜೀವನ ಮಾಡುತ್ತಿರುವ ತಮ್ಮ ಜಮೀನನ್ನು ನಾರಾಯಣಪ್ಪ ಎಂಬುವವರು ಜಮೀನು ತಮ್ಮದು ಎಂದು ದಬ್ಬಾಳಿಕೆ ಮಾಡಿ ಅಕ್ರಮವಾಗಿ ನಮ್ಮ ಜಮೀನಿಗೆ ಪ್ರವೇಶ ಮಾಡಿದ್ದೇ ಅಲ್ಲದೇ ಬೇಲಿಯನ್ನೂ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ಪುಟ್ಟಮಾದಿಹಳ್ಳಿಯ ರೈತ ಮಹಿಳೆ ಪ್ರಮೀಳಮ್ಮ ಎಂಬುವವರು ತಮ್ಮ ಕುಟುಂಬ ಸದಸ್ಯರೊಡಗೂಡಿ ತಾಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ನಾವು ಸುಮಾರು ಮೂವತ್ತು ವರ್ಷಗಳಿಂದ ತಾಳಕೆರೆ ಸರ್ವೆ ನಂಬರ್ ೨೫/೮ರಲ್ಲಿ ಅನುಭವದಲ್ಲಿದ್ದೇವೆ. ನಮ್ಮ ಮಾವನವರಿಗೆ ೧೯೭೮ ರಲ್ಲಿಯೇ ಮುಂಜೂರಾಗಿದ್ದ ೧ ಎಕರೆ ಜಮೀನಿಗೆ ಖಾತೆ ಪಹಣಿ ಮಾಡಿಸಿಕೊಳ್ಳಲಾಗಿದೆ. ಆದರೆ ಇದೇ ಸರ್ವೆ ನಂಬರಿನಲ್ಲಿ ನಾರಾಯಣಪ್ಪ ಎಂಬುವವರ ಹೆಸರಿಗೆ ನಮ್ಮ ಜಮೀನಿನ ಒಳಗೇ ೦.೨೦ ಗುಂಟೆ ಜಮೀನನ್ನು ಮೂಲ ನಕ್ಷೆ ಬದಲಿಸಿ ಅಧಿಕಾರಿಗಳು ದಾಖಲೆ ಸೃಷ್ಠಿಸಿ ಅಕ್ರಮ ಎಸಗಿದ್ದಾರೆ. ಈ ಕುರಿತು ೨೦೧೭ ರಲ್ಲಿ ಸಿವಿಲ್ ಕೋರ್ಟಿನಲ್ಲಿ ಶಾಶ್ವತವಾಗಿ ತಡೆಯಾಜ್ಞೆಯನ್ನೂ ಸಹ ತರಲಾಗಿದೆ.

ಆದರೆ ಇದನ್ನು ಲೆಕ್ಕಿಸದೆ ನಾರಾಯಣಪ್ಪ ಎಂಬುವವರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ತಹಸೀಲ್ದಾರ್ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ನಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ರಾತ್ರೋ ರಾತ್ರಿ ತಂತಿ ಬೇಲಿ ನಿರ್ಮಿಸಿದ್ದಾರೆ. ಅಲ್ಲದೇ ಗೇಟ್ ಸಹ ಮಾಡಿಸಿ ಬೀಗ ಹಾಕಿದ್ದಾರೆ. ನಮ್ಮ ಜಮೀನಿಗೇ ನುಗ್ಗಿ ದೌರ್ಜನ್ಯವೆಸಗಿದ್ದಾರೆ. ಹಾಗಾಗಿ ನಮಗೆ ನ್ಯಾಯ ಕೊಡಿಸಬೇಕೆಂದು ಪ್ರಮೀಳಮ್ಮ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ಪ್ರಮಿಳಮ್ಮ ಹೆಸರಿನಲ್ಲಿ ಮೂಲ ದಾಖಲಾತಿಗಳಿವೆ. ಆದರೆ ಸರ್ವೆ ಇಲಾಖೆ ಸ್ಕೆಚ್ ಮಾಡುವ ಸಂಧರ್ಭದಲ್ಲಿ ಅಧಿಕಾರಿಗಳು ಒಂದೇ ಜಮೀನಿಗೆ ಮೂರು ಬಾರಿ ಸ್ಕೆಚ್ ಮಾಡಿ ಇವರಿಗೆ ಅನ್ಯಾಯವೆಸಗಿದ್ದಾರೆ. ಇದನ್ನು ತಹಸೀಲ್ದಾರ್ ಬಳಿ ಪ್ರಶ್ನಿಸಿದರೆ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವ ಸಂಧರ್ಭದಲ್ಲಿ ಜಮೀನಿಗೆ ಬಂದದ್ದೇ ತಪ್ಪು. ಪೊಲೀಸ್ ಇಲಾಖೆ ಪ್ರಶ್ನಿಸಿದರೆ ತಹಸೀಲ್ದಾರ್ ಅವರ ಸೂಚನೆಯ ಮೇರೆಗೆ ಜಮೀನಿಗೆ ತೆರಳಿರುವುದಾಗಿ ತಿಳಿಸುತ್ತಾರೆ. ಒಟ್ಟಾರೆ ತಾಲೂಕು ಆಡಳಿತ ವ್ಯವಸ್ಥೆ ಕುಸಿತಗೊಂಡಿದ್ದು ಬಡವರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕೆಂದು ತಾವರೇಕೆರೆ ಸುರೇಶ್ ಒತ್ತಾಯಿಸಿದರು.

ಮೌನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ತದ ನಂತರ ಜಮೀನಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಇಬ್ಬರೂ ಹಾಜರುಪಡಿಸಿದರೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಪ್ರಮೀಳಮ್ಮ ಅವರ ಮಗ ಭೈರೇಶ್, ವಿಜಯಸೇನೆ ಪದಾದಿಕಾರಿಗಳಾದ ಮೋಹನ್, ಬಿಗನೇನಹಳ್ಳಿ ಪುಟ್ಟರಾಜು, ಲೋಕೇಶ್ ಸೇರಿದಂತೆ ಇತರರು ಇದ್ದರು.

Share this article