ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯ ಹಳ್ಳಿ ಹಳ್ಳಿಗಳ ಸಣ್ಣ ಅಂಗಡಿಗಳು ಅನಧಿಕೃತ ಬಾರ್‌ಗಳಾಗಿ ಮಾರ್ಪಟ್ಟಿದ್ದು, ಅಲ್ಲಿ ಅಕ್ರಮ ಮದ್ಯ ವ್ಯಾಪಕವಾಗಿ ಲಭ್ಯವಾಗುತ್ತಿದೆ.ಜಿಲ್ಲೆಯಾದ್ಯಂತ ಅಧಿಕೃತವಾಗಿ ಬಾರ್ ಲೈಸೆನ್ಸ್ ಪಡೆದಿರುವ 127 ಅಂಗಡಿಗಳು ಮಾತ್ರ ಇವೆ. ಆದರೆ ಅಕ್ರಮ ಮದ್ಯ ಮಾರಾಟಕ್ಕಾಗಿ ಅಬಕಾರಿ ಇಲಾಖೆಯ ಮಾರ್ಗದರ್ಶನದಲ್ಲಿಯೇ ಈ ವ್ಯವಹಾರ ನಡೆಯುತ್ತಿದೆ.
ಹಳ್ಳಿಗಳಲ್ಲಿ ಇರುವ ಕೆಲವು ಚಹಾ ಅಂಗಡಿ ಬಳಕೆ ಮಾಡಿಕೊಂಡು ಮದ್ಯ ಮಾರಾಟಗಾರರು ತಮ್ಮದೇ ನಾಲ್ಕಾರು ವಾಹನಗಳಲ್ಲಿಯೇ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಅನಧಿಕೃತವಾಗಿ ಸಾವಿರಾರು ಬಾರ್‌ಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಮದ್ಯಪ್ರಿಯರಿಗೆ ಕೇಳಿದಾಗಲೆಲ್ಲ ಅವರು ಇರುವ ಸ್ಥಳದಲ್ಲಿಯೇ ಮದ್ಯ ಸಿಗುವ ವ್ಯವಸ್ಥೆ ಮಾಡುತ್ತಾರೆ.ಅಕ್ರಮ ಹೇಗೆ?: ಗದಗ ನಗರವನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಪ್ರದೇಶಗಳಿಗೆ ನಿತ್ಯವೂ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತದೆ. ಇದಕ್ಕಾಗಿ ಕೆಲವು ರೂಟ್‌ಗಳಲ್ಲಿ ಓಮಿನಿ ವಾಹನಗಳನ್ನು, ಇನ್ನು ಕೆಲವು ರೂಟ್‌ಗಳಿಗೆ ಟಂಟಂಗಳನ್ನು ನಿಯೋಜನೆ ಮಾಡಲಾಗಿದೆ. ಗದಗ ನಗರದಿಂದ ಹೊರಡುವ ಮದ್ಯ ತುಂಬಿದ ವಾಹನಗಳು ಪ್ರತಿಯೊಂದು ಗ್ರಾಮಗಳಲ್ಲಿರುವ ನಾಲ್ಕೈದು ಅಕ್ರಮ ಮದ್ಯ ಮಾರಾಟದ ಅಂಗಡಿಗಳಿಗೆ ತೆರಳಿ ಅವರಿಗೆ ಬೇಕಾದ ಮದ್ಯ ಇಳಿಸಿ, ಹಣ ಸಂಗ್ರಹಿಸಿಕೊಂಡು ಮುಂದಿನ ಊರಿಗೆ ಹೋಗುತ್ತಾರೆ. ಸುರ್ಯೋದಯದ ಒಳಗಾಗಿ ನಿಗದಿತ ಅಂಗಡಿಗಳಿಗೆ ಮದ್ಯವೂ ತಲುಪಿರುತ್ತದೆ. ಅದರ ಹಣವೂ ಮರಳಿ ಬಾರ್ ಮಾಲೀಕರಿಗೆ ಸಂದಾಯವಾಗಿರುತ್ತದೆ.
ಹೀಗೇಕೆ ಮಾಡುತ್ತಾರೆ?: ಈ ಅಕ್ರಮದ ಬೆನ್ನತ್ತಿ ಹೊರಟಾಗ ಗೊತ್ತಾಗಿರುವ ಪ್ರಮುಖ ಸತ್ಯವೆಂದರೆ, ಇದರಲ್ಲಿ ವ್ಯಾಪಕ ಪ್ರಮಾಣದ ಲಾಭವಿರುವುದು, ಬಾರ್‌ಗಳಿಗೆ ನಿತ್ಯವೂ ಗ್ರಾಮೀಣ ಪ್ರದೇಶಗಳಿಂದ ಜನರು ಬಂದು ಮದ್ಯ ಖರೀದಿಸಲು ಆಗುವುದಿಲ್ಲ. ಅದಕ್ಕಾಗಿಯೇ ಈ ಅಕ್ರಮದ ಹಾದಿ ಹಿಡಿದಿದ್ದು, ಪ್ರತಿಯೊಂದು ಗ್ರಾಮಗಳಿಗೆ ನೇರವಾಗಿ ತಲುಪಿಸಲಾಗುತ್ತದೆ. ಇದರಿಂದಾಗಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದು ಗ್ರಾಮೀಣ ಭಾಗದ ಚಹಾ ಅಂಗಡಿ ಮಾಲೀಕರಿಗೂ ಲಾಭ, ಬಾರ್ ಮಾಲೀಕರಿಗೆ ಅನುಕೂಲ. ಅಬಕಾರಿ ಅಧಿಕಾರಿಗಳಿಗೆ ಸೇಲ್ಸ್ ಹೆಚ್ಚಿಗೆ ಆಗುತ್ತದೆ.ಪ್ರಭಾವಿಗಳೇ ಸೂತ್ರದಾರರು: ಗದಗ ನಗರದಲ್ಲಿನ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಲ್ಲ ಪಕ್ಷಗಳ ಶಾಸಕ, ಸಚಿವರಿಗೆ ಆಪ್ತರಾಗಿರುವ ವ್ಯಕ್ತಿಗಳೇ ಜಿಲ್ಲೆಯ ಮದ್ಯ ಮಾರಾಟದ ಮೇಲೆ ಬಿಗಿಹಿಡಿತ ಹೊಂದಿದ್ದಾರೆ. ಬೇರೆ ಬೇರೆಯವರ ಹೆಸರಿನಲ್ಲಿರುವ 15ಕ್ಕೂ ಹೆಚ್ಚಿನ ಬಾರ್‌ಗಳನ್ನು ಮಾಲೀಕರ ಹೆಸರಿನ ಮೇಲೆ ಇವರೇ ನಡೆಸುತ್ತಾರೆ. ಸಹಜವಾಗಿಯೇ ಹೆಚ್ಚಿನ ಲಾಭ ಗಳಿಸಲು ಗ್ರಾಮೀಣ ಜನರನ್ನು ಗುರಿಯಾಗಿಸಿಕೊಂಡು, ಅಬಕಾರಿ ಅಧಿಕಾರಿಗಳ ಪರೋಕ್ಷ ಮಾರ್ಗದರ್ಶನದಲ್ಲಿಯೇ ಗ್ರಾಮೀಣ ಭಾಗಕ್ಕೆ ಮದ್ಯ ಪೂರೈಸಲಾಗುತ್ತಿದೆ. ಅದರಿಂದ ಹಳ್ಳಿಗಳಲ್ಲಿ ದುಶ್ಚಟಕ್ಕೆ ದಾಸರಾಗುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.ಎಲ್ಲರಿಗೂ ಗೊತ್ತಿದೆ: ಗದಗ ಜಿಲ್ಲೆಯಲ್ಲಿ ಈ ರೀತಿಯ ಮದ್ಯ ಸಾಗಾಟ ಮತ್ತು ಮಾರಾಟ ನಡೆಯುತ್ತಿದೆ ಎನ್ನುವುದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗೊತ್ತಿದೆ. ಆದರೆ ಹಿರಿಯ ಅಧಿಕಾರಿಗಳೇ ಸುಮ್ಮನಿದ್ದಾಗ ಸಣ್ಣವರು ನಾವೇನು ಮಾಡಲು ಸಾಧ್ಯ ಎನ್ನುವುದು ಅಲ್ಲಿನ ಅಧಿಕಾರಿಯೋರ್ವರ ಅಭಿಪ್ರಾಯವಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಪೊಲೀಸ್ ಇಲಾಖೆಗೂ ಗೊತ್ತಿದೆ. ಅವರು ಕೂಡ ಕ್ರಮ ಕೈಗೊಳ್ಳುವುದಿಲ್ಲ. ಸ್ಥಳೀಯ ಗ್ರಾಪಂಗಳು, ಪಿಡಿಒಗಳು ಇದರ ಬಗ್ಗೆ ಖಚಿತ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಿದರೂ ಅಕ್ರಮ ಮಾಡುವವರಿಗೆ ಹೇಳಿಯೇ ರೇಡ್ ಮಾಡುವ ಪದ್ಧತಿ ರೂಢಿಯಾಗಿದೆ.ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಕ್ರಮ ಮದ್ಯ ಸಂಗ್ರಹಣೆ, ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದು ಬಹುದೊಡ್ಡ ಹಗರಣವಾಗಿದೆ. ಹಿಂದೆ ಲಂಬಾಣಿ ಸಮುದಾಯದವರು ಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡಿದರೆ ಅದರ ಮೇಲೆ ರೇಡ್ ಮಾಡಿ ಕೇಸ್ ಹಾಕುತ್ತಿದ್ದ ಅಬಕಾರಿ ಇಲಾಖೆಯೇ ಇಂದು ತಮ್ಮ ಸೇಲ್ಸ್ ಹೆಚ್ಚಿಸುವುದಕ್ಕಾಗಿ ಬಾರ್‌ಗಳೊಂದಿಗೆ ಶಾಮೀಲಾಗಿ, ಗ್ರಾಮೀಣ ಭಾಗದಲ್ಲಿನ ಜನರಿಗೆ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಮಾರಾಟ ಮಾಡುತ್ತಿದೆ. ಈ ವಿಷಯವಾಗಿ ಎಸ್ಸಿಎಸ್ಟಿ ದೌರ್ಜನ್ಯ ಸಮಿತಿ ಸಭೆಯಲ್ಲಿಯೂ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲಂಬಾಣಿ ಮಹಾಸಭಾ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.