ಕಾನೂನುಬಾಹಿರ ಖಾಸಗಿ ಕ್ಲಿನಿಕ್, ಜೌಷಧಿ ಅಂಗಡಿಗಳಿಗೆ ಬೀಗ

KannadaprabhaNewsNetwork | Published : Feb 21, 2024 2:02 AM

ಸಾರಾಂಶ

ಸುಂಟಿಕೊಪ್ಪ ಪಟ್ಟಣದ ಕಾನೂನು ಬಾಹಿರವಾಗಿ ಖಾಸಗಿ ಕ್ಲಿನಿಕ್ ಹಾಗೂ ಜೌಷಧಿ ಅಂಗಡಿಗಳು ಕಾರ್ಯಾಚರಣೆ ಮಾಡುವ ಕುರಿತು ಆರೋಗ್ಯ ಇಲಾಖೆಗೆ ಖಚಿತ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರವಾನಗಿ ಹೊಂದಿಲ್ಲದ ಕಾರಣ ಮಳಿಗೆಯನ್ನು ಮುಚ್ಚಿಸಿ ಕಾನೂನು ಕ್ರಮ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪಟ್ಟಣದ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್ ಹಾಗೂ ಜೌಷಧಿ ಅಂಗಡಿಗಳಿಗೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರವಾನಗಿ ಹೊಂದಿಲ್ಲದ ಕಾರಣ ಮಳಿಗೆಯನ್ನು ಮುಚ್ಚಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆ ರಸ್ತೆಯಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಗೊಂಡಿದ್ದ ಖಾಸಗಿ ಮೆಡಿಕಲ್ ಸೆಂಟರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ಕ್ಲಿನಿಕ್‌ ಹಾಗೂ ಮೆಡಿಕಲ್‌ ಕಾರ್ಯಾಚರಿಸುತ್ತಿವೆ. ಇವು ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆಯದಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಹಾಗೂ ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಹಿಂದೂದಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು.

ಪರಿಶೀಲನೆ ನಡೆಸಿದಾಗ ಅಧಿಕೃತ ದೊರೆಯದ ಹಿನ್ನಲೆ ಆ ಮಳಿಗೆಗಳಿಗೆ ಬೀಗ ಜಡಿದು ವಶಕ್ಕೆ ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಡಾ.ಆನಂದ್ ಅವರು ಕರ್ನಾಟಕದ ಎಲ್ಲಾ ಖಾಸಗಿ ವೈಧಕೀಯ ಸಂಸ್ಥೆಗಳು ಆನ್‌ಲೈನ್ ಮೂಲಕ ಕೆಪಿಎಂಇ ಕಾಯ್ದೆ ಪ್ರಕಾರ ನೊಂದಣಿಗೊಳ್ಳಬೇಕು. ಅನಂತರ ಇಲಾಖೆಯಿಂದ ಪರಿಶೀಲನೆ ನಡೆಸಿ ಅವರಿಗೆ ಪರವಾನಗಿ ಅನುಮತಿ ಪತ್ರ ನೀಡಲಾಗುತ್ತದೆ. ಆದರೆ ಸುಂಟಿಕೊಪ್ಪದಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ಕ್ಲಿನಿಕ್ ಸರ್ಕಾರದ ಗಮನಕ್ಕೆ ತರದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಜೌಷಧಿ ವಿತರಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಈ ಖಾಸಗಿ ಮಳಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಪಿಎಂಇ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಫಿ ತೋಟದಲ್ಲಿ ಬೆಂಕಿ ಆಕಸ್ಮಿಕ:

ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ನಷ್ಟವಾದ ಘಟನೆ ಶನಿವಾರ ಸಂಜೆ ನಡೆದಿದೆ.ರಸ್ತೆ ಬದಿಯ ಕುರುಚಲು ಕಾಡಿಗೆ ಬೆಂಕಿ ಬಿದ್ದು ಕಾಫಿ ತೋಟಕ್ಕೆ ಪಸರಿಸಿದೆ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಆಗಮಿಸಿ ಬೆಂಕಿ ನಂದಿಸಿದರು.

ಈ ಭಾಗದಲ್ಲಿ ಕೋಟೆ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಧೂಮಪಾನ ಮಾಡಿ, ಸಿಗರೇಟ್‌ ಎಸೆದು, ಅದರ ಕಿಡಿ ಹೊತ್ತಿಕೊಂಡು ಬೆಂಕಿ ಹಬ್ಬಲು ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

Share this article