ಪತ್ರಕರ್ತನ ಬಲಿ ಪಡೆದ ಅಕ್ರಮ ಪಡಿತರ ದಂದೆ

KannadaprabhaNewsNetwork |  
Published : Oct 11, 2025, 02:00 AM IST
ಆರೋಪಿ 1 ಅಶ್ಪಾಕ್‌ | Kannada Prabha

ಸಾರಾಂಶ

ಅಕ್ರಮ ಪಡಿತರದ ದಂದೆ ಪತ್ರಕರ್ತನನ್ನೇ ಬಲಿ ಪಡೆದುಕೊಂಡಿದೆ. ವಾಹನ ಹಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 ಜಮಖಂಡಿ :  ಅಕ್ರಮ ಪಡಿತರದ ದಂದೆ ಪತ್ರಕರ್ತನನ್ನೇ ಬಲಿ ಪಡೆದುಕೊಂಡಿದೆ. ವಾಹನ ಹಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೂಡ ಬಂಧಿಸಿ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ವಾಹನದ ಮಾಲಿಕ ಅಶ್ಫಾಕ್‌ ಮುಲ್ಲಾ ಹಾಗೂ ಈತನ ಸಹಚರರಾದ ನಂದೀಶ್ವರ ಪವಾಡಿ ಮತ್ತು ಮಹೇಶ ಪವಾಡಿ ಬಂಧಿತ ಆರೋಪಿಗಳು. ಪತ್ರಕರ್ತ ಬಸವರಾಜ ಕಾನಕೊಂಡ (40) ಮೃತಪಟ್ಟರು. ಜತೆಗೆ ಪೊಲೀಸರು ಅಪರಾಧ ಕೃತ್ಯಕ್ಕೆ ಬಳಸಲಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ಏನಾಗಿತ್ತು?:

ಪತ್ರಕರ್ತ ಬಸವರಾಜ ಕಾನಕೊಂಡ ಅವರು ಬೈಕ್‌ನಲ್ಲಿ ತಮ್ಮ ಊರಿಗೆ ಹೋಗುವಾಗ ಹಿಂದಿನಿಂದ ಬಂದ ಪಿಕ್‌ ಅಪ್‌ ವಾಹನವೊಂದು ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿತ್ತು. ಆಗ ಬೈಕ್‌ನ ಹಿಂಬದಿಯ ಗಾಲಿ ಕಿತ್ತುಕೊಂಡು ಹೋಗಿತ್ತು. ಬೈಕ್‌ನಲ್ಲಿದ್ದ ಬಸವರಾಜ ಅಸುನೀಗಿದ್ದರು. ಈ ಘಟನೆ ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯ ರಬಕವಿ-ಬನಹಟ್ಟಿ ರಸ್ತೆಯ ಬಂಡಿಗಣಿ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ನಡೆದಿತ್ತು.

ಈ ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಉಂಟಾಗಿ, ಡಿಕ್ಕಿ ಹೊಡೆದಿದ್ದ ಪಿಕ್‌ಅಪ್‌ ವಾಹನದ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಇದು ಕೊಲೆ ಪ್ರಕರಣವೆಂದು ಗೊತ್ತಾಗಿದೆ. ಅಲ್ಲದೆ, ಪ್ರಕರಣದಲ್ಲಿ ವಾಹನದ ಮಾಲೀಕ ಮಾತ್ರವಲ್ಲ, ಆತನ ಇಬ್ಬರು ಸಹಚರರು ಕೂಡ ಭಾಗಿಯಾಗಿರುವುದು ಖಚಿತವಾಯಿತು. ಮೂವರನ್ನು ವಶಕ್ಕೆ ಪಡೆದ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅಶ್ಫಾಕ್‌ ಸುಲೇಮಾನ್‌ ಮುಲ್ಲಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಮದರಕಂಡಿ ಗ್ರಾಮದ ಬಳಿ ಬಸವರಾಜ ಖಾನಗೊಂಡ ಅವರ ವಾಹನಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳು ಪಡಿತರ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಪತ್ರಕರ್ತ ಕಾನಕೊಂಡ ಬ್ಲಾಕ್‌ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ, 4 ವರ್ಷ ಗಳಿಂದ ಸತಾಯಿಸುತ್ತಿದ್ದ ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹತ್ಯೆ ಮಾಡಲು ಸ್ಕೆಚ್‌ ಹಾಕಿದ್ದ ದುರುಳರು:

ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಗಳು ಪಡಿತರ ಅಕ್ಕಿ ಅಕ್ರಮ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.   ವಿಷಯ ಗೊತ್ತಾಗಿ ಪತ್ರಕರ್ತ ಬಸವರಾಜ ಕಾರಕೊಂಡ ನನಗೂ ಹಣ ನೀಡಬೇಕು, ಇಲ್ಲದಿದ್ದರೆ ಪ್ರಕರಣ ಬಯಲು ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ. ಅದರಿಂದಾಗಿ ಪತ್ರಕರ್ತ ಬಸವರಾಜನನ್ನು ತೇರದಾಳದ ಸಣ್ಣ ಹೊಟೇಲ್‌ನಲ್ಲಿ ಚರ್ಚೆಗೆಂದು ಕರೆಸಲಾಗಿತ್ತು. ಪರಿಚಯಸ್ಥರಾಗಿದ್ದ ರಾಘವೇಂದ್ರ ತೇಲಿ ಎಂಬುವವರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸಿ ಚರ್ಚೆ ಮುಗಿಸಿ ಅಶ್ಫಾಕ್‌ ಸ್ಥಳದಿಂದ ಹೊರಟು ಹೋಗಿದ್ದ. ಉಳಿದವರು ಅಲ್ಲೇ ಊಟ ಮಾಡಿದ್ದು, ಬಳಿಕ ಬಸವರಾಜ ತನ್ನ ಸ್ಕೂಟಿಯಲ್ಲಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದ್ದ. 

 ಅಶ್ಫಾಕ್‌ನ ಸಹಚರರಾದ ಸಂದೀಶ್ವರ ಹಾಗೂ ಮಹೇಶ ಬಸವರಾಜನನ್ನು ಹಿಂಬಾಲಿಸುತ್ತ ಬಂಡಿಗಣಿ ಕ್ರಾಸ್‌ ಹತ್ತಿರ ಪಿಕ್‌ಅಪ್‌ ವಾಹನದೊಂದಿಗೆ ಕಾಯುತ್ತಿದ್ದ ಅಶ್ಫಾಕ್‌ಗೆ ಮಾಹಿತಿ ನೀಡುತ್ತಿದ್ದರು. ಪೂರ್ವ ಯೋಜನೆಯಂತೆ ಹತ್ತಿರಕ್ಕೆ ಬಂದ ಬಸವರಾಜನ ವಾಹನಕ್ಕೆ ರಾಂಗ್‌ರೂಟ್‌ನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಯುಸೂಫ್‌ ಮುಲ್ಲಾನ ಸಹಾಯದಿಂದ ಪಿಕ್‌ಅಪ್‌ ವಾಹನ ಮರೆ ಮಾಡಲಾಗಿತ್ತು.

ಪ್ರಕರಣ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಸುಳಿವುಗಳ ಸಹಾಯದಿಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Read more Articles on

Recommended Stories

ಯಾವಾಗ ಬೇಕಿದ್ದರೂ ಸಂಪುಟ ಪುನರ್‌ ರಚನೆ : ಗುಂಡೂರಾವ್‌
9 ತಿಂಗಳಲ್ಲಿ 158 ಕಾರ್ಖಾನೆಗಳ ಮುಚ್ಚಲು ಮಂಡಳಿಯ ನೋಟಿಸ್‌