ಮದ್ದೂರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ

KannadaprabhaNewsNetwork | Updated : Jul 05 2024, 01:09 PM IST

ಸಾರಾಂಶ

ಇತಿಹಾಸವುಳ್ಳ ಮದ್ದೂರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿದ್ದ ಜೆಸಿಬಿ ಯಂತ್ರ ಹಾಗೂ ಟ್ರ್ಯಾಕ್ಟರ್‌ಗಳನ್ನು ಪೋಲಿಸರು ಗುರುವಾರ ಬೆಳಗ್ಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

 ಮದ್ದೂರು :  ಇತಿಹಾಸವುಳ್ಳ ಮದ್ದೂರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿದ್ದ ಜೆಸಿಬಿ ಯಂತ್ರ ಹಾಗೂ ಟ್ರ್ಯಾಕ್ಟರ್‌ಗಳನ್ನು ಪೋಲಿಸರು ಗುರುವಾರ ಬೆಳಗ್ಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೂರಿನ ಮೇರೆಗೆ ಕೆರೆ ಅಂಗಳದ ಮೇಲೆ ದಾಳಿ ನಡೆಸಿದ ಪೊಲೀಸರು ಎರಡು ಜೆಸಿಬಿ ಯಂತ್ರ, ಒಂದು ಟ್ರ್ಯಾಕ್ಟರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರ ದಾಳಿ ವೇಳೆ ಮಣ್ಣು ಸಾಗಿಸಲು ಕೆರೆಯಂಗಳದಲ್ಲಿ ಬೀಡು ಬಿಟ್ಟಿದ್ದ 15ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳು ಸ್ಥಳದಿಂದ ಪರಾರಿಯಾಗಿವೆ. ತಾಲೂಕಿನ ದೇಶ ಹಳ್ಳಿ ಮತ್ತು ವಳಗೆರೆಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಮದ್ದೂರು ಕೆರೆ, ನಗರಕೆರೆ ಉಪ್ಪಿನಕೆರೆ, ಸೋಮನಹಳ್ಳಿ, ಗೆಜ್ಜಲಗೆರೆ, ತೈಲೂರು, ಸಾದೊಳಲು ಮತ್ತು ಹುಲಿಗೆರೆಪುರ ಕೆರೆಗಳು ಸೇರಿದಂತೆ ಹಲವು ಕೆರೆಗಳಲ್ಲಿ ಹೂಳೆತ್ತುವ ಮೂಲಕ ರೈತರ ಜಮೀನಿಗೆ ಕೆರೆ ಮಣ್ಣು ಸಾಗಿ ಸುವ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧ ನಡೆಸುವ ಕೆಲವು ವ್ಯಕ್ತಿಗಳು ಗ್ರಾಮಸ್ಥರೊಂದಿಗೆ ಶಾಮಿಲಾಗಿ ಕೆರೆ ಮಣ್ಣನ್ನು ಜೆಸಿಬಿ ಯಂತ್ರಗಳಿಂದ ಅವೈಜ್ಞಾನಿಕವಾಗಿ ಬಗೆದು ಟಿಪ್ಪರ್ ಲಾರಿಗಳು ಮೂಲಕ ನಿವೇಶನಗಳ ಬರ್ತಿಗೆ ಉಪಯೋಗಿಸುತ್ತಿದ್ದರು.

ಇದರಿಂದ ಕೆರೆಯಲ್ಲಿ ಗುಂಡಿ ಬಿದ್ದು ಕೆರೆ ಭರ್ತಿಯಾದ ಸಂದರ್ಭದಲ್ಲಿ ಅನಾಹುತದೊಂದಿಗೆ ಕೆರೆ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಅಲ್ಲದೇ, ಭಾರೀ ಗಾತ್ರಗಳ ಟಿಪ್ಪರ್ ಲಾರಿಗಳ ಓಡಾಟದಿಂದ ಗ್ರಾಮೀಣ ಭಾಗದ ರಸ್ತೆಗಳು ಗುಂಡಿ ಬಿದ್ದು ಹಾಳಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟಿಪ್ಪರ್ ಲಾರಿಗಳ ನೋಂದಣಿ ಸಹಿತ ತಾಲೂಕು ಆಡಳಿತ ಹಾಗೂ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರು.

ಈ ಬಗ್ಗೆ ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ನಿಗಮದ ಅಧಿಕಾರಿಗಳ ದೂರಿನ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ರಿಯಲ್ ಎಸ್ಟೇಟ್ ದಂಧೆ ಕೋರರೊಂದಿಗೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದರು.

ಬಳಿಕ ನಿಗಮದ ಅಧಿಕಾರಿಗಳು ಕೆರೆಗಳ ಅಕ್ರಮ ಮಣ್ಣು ಸಂಗ್ರಹ ಹಾಗೂ ಸಾಗಾಣಿಕೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ಗುರುವಾರ ದಿಡೀರ್ ದಾಳಿ ನಡೆಸಿ ಕೆರೆ ಮಣ್ಣು ಸಂಗ್ರಹ ಮತ್ತು ಸಾಗಾಣಿಕೆ ಬಳಸುತ್ತಿದ್ದ ಯಂತ್ರ ಹಾಗೂ ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಜೆಸಿಪಿ ಮತ್ತು ಟ್ರ್ಯಾಕ್ಟರ್ ಗಳ ಹಾಗೂ ಪರಾರಿಯಾಗಿರುವ ಟಿಪ್ಪರ್ ಲಾರಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

Share this article