ಅಕ್ರಮ ಮರಳು: ಲೋಕಾಯುಕ್ತರಿಂದ ಸುಮೋಟೋ ದಾಖಲು

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ಲೋಕಾಯುಕ್ತದಿಂದ ಸುಮೋಟೋ ದಾಖಲು

ಡಿ. 14ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿ ಉಲ್ಲೇಖಿಸಿ ಪ್ರಕರಣ । ಎರಡು ವಾರದಲ್ಲಿ ವರದಿ ನೀಡುವಂತೆ ಸೂಚನೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕರ್ನಾಟಕ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆಗೆ ಮುಂದಾಗಿದೆ.

‘ಹೇಮೆ’ ದಡದಲ್ಲಿ ಅಕ್ರಮ ಮರಳು ದಂಧೆ ಎನ್ನುವ ತಲೆ ಬರಹದಡಿ ಅಕ್ರಮ ಗಣಿಗಾರಿಕೆ ಬಗ್ಗೆ ಕಳೆದ 2023ರ ಡಿಸೆಂಬರ್ 14ರಂದು ಕನ್ನಡಪ್ರಭ ವರದಿ ಮಾಡಿತ್ತು. ಮೌನವಹಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ, ಮರಳನ್ನು ಅಕ್ರಮವಾಗಿ ಫಿಲ್ಟರ್ ಮಾಡಿ ಸಾಗಿಸಲಾಗುತ್ತಿದ್ದ ಬಗ್ಗೆ ತಿಳಿಸಿದ್ದು, ಈ ಕೃತ್ಯದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿತ್ತು.

ಕನ್ನಡಪ್ರಭ ವರದಿಯಿಂದ ಎಚ್ಚೆತ್ತಿರುವ ಲೋಕಾಯುಕ್ತರು, ವರದಿಯನ್ನು ಉಲ್ಲೇಖಿಸಿ 2024ರ ಜ. 1ರಂದು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಅಕ್ರಮ ಮರಳು ಗಣಿಗಾರಿಕೆಯ ಸಮಗ್ರ ತನಿಖೆಗೆ ಮುಂದಾಗಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಹೇಮಾವತಿ ನದಿ ತೀರ ಹಾಳಾಗುತ್ತಿರುವುದು, ಫಿಲ್ಟರ್ ಮರಳಿನಿಂದ ಕಟ್ಟಿದ ಮನೆಗೆ ಅಪಾಯ, ರೈತ ಸಮುದಾಯಕ್ಕೆ ಆದ ತೊಂದರೆ, ಬೆಳ್ಳಿ ಬೆಟ್ಟದ ಸಾಲಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ರಿಕೆ ಉಲ್ಲೇಖಿಸಿತ್ತು. ಕೆಲವು ಗ್ರಾಮಸ್ಥರು ಕ್ಷೇತ್ರದ ಶಾಸಕರಾದ ಎಚ್.ಟಿ. ಮಂಜು ಅವರಿಗೂ ದೂರು ನೀಡಿದ್ದರು. ಈ ಎಲ್ಲಾ ಅಂಶಗಳನ್ನು ಅಧರಿಸಿ ಕನ್ನಡಪ್ರಭ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ವರದಿ ಮಾಡಿತ್ತು.

ಪತ್ರಿಕಾ ವರದಿ ಆಧರಿಸಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ದಾಖಲಿಸಿ ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸತೀಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕು ಅಧಿಕಾರಿ ಮಹೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ, ಕಿಕ್ಕೇರಿ ಪೊಲೀಸ್ ನಿರೀಕ್ಷಕಿ ರೇವತಿ, ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಪಿ.ಜಗದೀಶ್ ಮತ್ತು ಪಟ್ಟಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕಿ ಸುಮಾರಾಣಿ ಅವರನ್ನು ಹೊಣೆಗಾರರನ್ನಾಗಿಸಲಾಗಿದೆ.

ಅಕ್ರಮ ಮರಳು ಗಣಿಗಾರಿಕ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯದರ್ಶಿಗಳಿಗೂ ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.

ಪತ್ರಿಕಾ ವರದಿಯಲ್ಲಿ ಉಲ್ಲೇಖಿತವಾಗಿರುವ ಸ್ಥಳ ಪರಿಶೀಲನೆ ನಡೆಸಿ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ವೀಡಿಯೊ ಮತ್ತು ಪೋಟೋ ಸಮೇತ ಎರಡು ವಾರಗಳಲ್ಲಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸ್ವಯಂ ದೂರು ದಾಖಲಿಸಿರುವ ಕರ್ನಾಟಕ ಲೋಕಾಯುಕ್ತರ ಕ್ರಮವನ್ನು ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಸ್ವಾಗತಿಸಿದ್ದಾರೆ. ಲೋಕಾಯುಕ್ತರು ಸಮಗ್ರ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಶಿಕ್ಷಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share this article