ಕೆರೆ ಮಣ್ಣು ಅಕ್ರಮ ಸಾಗಣೆ: ಸ್ಥಳಕ್ಕೆ ತಹಸೀಲ್ದಾರ್‌ ಭೇಟಿ

KannadaprabhaNewsNetwork | Published : Jul 9, 2024 12:52 AM

ಸಾರಾಂಶ

ಕೆರೆಯಲ್ಲಿ ಜಮೀನು ಮಟ್ಟ ಮಾಡಲು ಮಾಲೀಕರು ಜೆಸಿಬಿಯಿಂದ ಸುಮಾರು ೬ ರಿಂದ ೭ ಅಡಿ ಗುಂಡಿ ತೆಗೆದಿದ್ದಾರೆ. ಕೆರೆಯ ಅಂಚಿನಲ್ಲಿ ಅಪಾಯಕರ ಗುಂಡಿಗಳನ್ನು ತೆಗೆಯುವುದರಿಂದ ಮಳೆ ಬಂದ ಸಮಯದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ, ಇದು ಅಪಾಯಕಾರಿ.

ಕನ್ನಡಪ್ರಭ ವಾರ್ತೆ ಚೇಳೂರು

ದೊಡ್ಡಿವಾರಪಲ್ಲಿ ಗ್ರಾಮದ ಯರ‍್ರಗುಡಿ ಕೆರೆಯಂಗಳದಲ್ಲಿ ಸರ್ಕಾರದ ಅನುಮತಿ ಪಡೆಯದೆ ಬೆಂಗಳೂರು ಮೂಲದ ಮಾಲಿಕರೋಬ್ಬರು ಅಕ್ರಮವಾಗಿ ಮಣ್ಣು ತೆಗೆದಿದ್ದು ಇದರ ಕುರಿತು ‘ಕನ್ನಡಪ್ರಭ’ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತು ಚೇಳೂರು ತಾಲೂಕಿನ ತಹಸೀಲ್ದಾರ್ ಶ್ರೀನಿವಾಸಲು ನಾಯುಡು ರವರು ದೋಡ್ಡಿವಾರಪಲ್ಲಿ ಗ್ರಾಮದ ಯರ್ರಗುಡಿ ಕೆರೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಅವರು ಮಾತನಾಡಿ, ಕೆರೆಯ ಮಣ್ಣನ್ನು ತೆಗೆಯಬೇಕಾದರೆ ಸಂಬಂಧಪಟ್ಟ ಇಲಾಖೆಗೆ ರಾಜಧನವನ್ನು ಪಾವತಿಸಿ, ಪರವಾನಿಗೆ ಪಡೆಯುವುದು ಕಡ್ಡಾಯ. ಆದರೆ ಯಾವುದೇ ಪರವಾನಗಿ ಪಡೆಯದೇ ರಾಯಲ್ಟಿ ಪಾವತಿಸದೇ ಮಣ್ಣನ್ನು ತೆಗೆಯುವುದು ಕಾನೂನು ಬಾಹಿರ ಎಂದರು.

ನೀರು ತುಂಬಿದಾಗ ಅಪಾಯ

ಕೆರೆಯಲ್ಲಿ ಜಮೀನು ಮಟ್ಟ ಮಾಡಲು ಮಾಲೀಕರು ಜೆಸಿಬಿಯಿಂದ ಸುಮಾರು ೬ ರಿಂದ ೭ ಅಡಿ ಗುಂಡಿ ತೆಗೆದಿದ್ದಾರೆ. ಕೆರೆಯ ಅಂಚಿನಲ್ಲಿ ಅಪಾಯಕರ ಗುಂಡಿಗಳನ್ನು ತೆಗೆಯುವುದರಿಂದ ಮಳೆ ಬಂದ ಸಮಯದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ, ಜಾನುವಾರುಗಳು ನೀರು ಕುಡಿಯಲು ಬಂದ ಸಮಯದಲ್ಲಿ ಗುಂಡಿಯಲ್ಲಿ ಮುಳುಗುವ ಸಂಭವ ಹೆಚ್ಚಿರುತ್ತದೆ. ಅಲ್ಲದೇ ಮನುಷ್ಯರು ಸಹ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆಗಳು ಬಹಳಷ್ಟು ಕಡೆ ನಡೆದಿವೆ.

ಪರಿಶೀಲಿಸಿ ಅಗತ್ಯ ಕ್ರಮ

ಆದ್ದರಿಂದ ಈ ಕೂಡಲೇ ದೊಡ್ಡಿವಾರಪಲ್ಲಿ ಗ್ರಾಮದ ಯರ್ರಗುಡಿ ಕೆರೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದು ಮಣ್ಣು ತೆಗೆಯಾಲಾಗಿದಿಯೆ ಇಲ್ಲವಾ ಎಂದು ವಿಚಾರಿಸಿ, ಕೆರೆಯಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆಯಲಾಗಿದ್ದ ಜಮೀನು ಮಾಲೀಕನಿಗೆ ನೋಟಿಸ್ ಕೊಡಲಾಗುವುದು. ಮೇಲ್ನೋಟಕ್ಕೆ ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿರುವಂತೆ ಕಂಡುಬರುತ್ತಿದೆ ಎಂದರು. ಈ ಕುರಿತು ಸರ್ವೆ ಅಧಿಕಾರಿಗಳಿಂದ ಸರ್ವೆ ಮಾಡಿಸಲಾಗುವುದು. ಒಂದು ವೇಳೆ ಕೆರೆ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಜಮೀನು ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಇದೆ ವೇಳೆ ಸ್ಥಳಿಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆಯ ಆಧಿಕಾರಿಗಳಿಗೆ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ನಿಗಾವಹಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಚೇಳೂರು ತಹಸೀಲ್ದಾರ್ ಶ್ರೀನಿವಾಸಲು ನಾಯುಡು ಅವರ ಜತೆ ಆರ್‌ಐ ಶ್ರೀನಾಥ್‌ ಗ್ರಾಮ ಲೆಕ್ಕಾಧಿಕಾರಿ ಅಭಿಶೇಕ್, ಕರ ವಸೂಲಿಗಾರ ಬೈರೆಡ್ಡಿ, ಡಿಇಒ ಶಂಕರ್ ಪ್ರಸಾದ್ ಮತ್ತಿತರರು ಹಾಜರಿದ್ದರು.

Share this article