ಬೈಲಾ ವಿರುದ್ಧವಾಗಿ ಪಟೇಲ್ ಶಿವಪ್ಪನಿಂದ ಅಕ್ರಮ: ಕೇಶವ್ ಮೂರ್ತಿ ಆರೋಪ

KannadaprabhaNewsNetwork | Published : Feb 18, 2024 1:35 AM

ಸಾರಾಂಶ

ಕುರುಬರ ಸಂಘದ ಬೈಲಾಗೆ ವಿರುದ್ಧವಾಗಿ ಪಟೇಲ್ ಶಿವಪ್ಪ ಅಕ್ರಮ ಎಸಗಿದ್ದು, ತನಿಖೆಯ ದಾರಿಯನ್ನೆ ತಪ್ಪಿಸುವ ಹುನ್ನಾರ ನಡೆಸಿರುವುದಾಗಿ ಕುರುಬ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಿ. ಕೇಶವ್ ಮೂರ್ತಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನಕುರುಬರ ಸಂಘದ ಬೈಲಾಗೆ ವಿರುದ್ಧವಾಗಿ ಪಟೇಲ್ ಶಿವಪ್ಪ ಅಕ್ರಮ ಎಸಗಿದ್ದು, ತನಿಖೆಯ ದಾರಿಯನ್ನೆ ತಪ್ಪಿಸುವ ಹುನ್ನಾರ ನಡೆಸಿರುವುದಾಗಿ ಕುರುಬ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಿ. ಕೇಶವ್ ಮೂರ್ತಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಹಾಸನ ಜಿಲ್ಲಾ ಕುರುಬ ಸಂಘದ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ಪಟೇಲ್ ಶಿವಪ್ಪ ಸಂಘದಲ್ಲಿ ಅನೇಕ ಅಕ್ರಮಗಳನ್ನು ಮಾಡಿದ್ದು, ಸಂಘದ ಬೈಲಾ ವಿರುದ್ಧ ಅನೇಕ ಅಕ್ರಮಗಳನ್ನು ಮಾಡಿದ್ದಾರೆ. ಸಂಘದಲ್ಲಿ ಬೈಲಾ ವಿರುದ್ಧ ಅನೇಕ ಕೆಲಸಗಳನ್ನು ಮಾಡಿ, ಸಮುದಾಯದ ಯುವಕರ ಭವಿಷ್ಯವನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ. ತಮ್ಮ ರಾಜಕೀಯ ವರ್ಚಸ್ಸನ್ನು ಬೀರಿ ಅವರ ವಿರುದ್ಧ ತನಿಖೆಯ ದಾರಿ ತಪ್ಪಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದರು. ಜಿಲ್ಲಾ ಕುರುಬ ಸಂಘದಲ್ಲಿ ಅಧ್ಯಕ್ಷರಾಗಿರುವ ಪಟೇಲ್ ಶಿವಪ್ಪ ಮಾಡಿರುವ ಅಕ್ರಮದ ವಿರುದ್ಧ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ತನಿಖೆ ನಡೆಯದಂತೆ ತಡೆಯಾಜ್ಞೆ ತಂದಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಸಮಾಜ ಸೇವಕ ಶ್ರೀನಾಥ್ ಮಾತನಾಡಿ, ಕುರುಬ ಸಂಘದಲ್ಲಿ ಸಂಗ್ರಹವಾಗಿರುವ ೩.೫ ಕೋಟಿ ಹಣದ ಬಗ್ಗೆ ಪಟೇಲ್ ಶಿವಪ್ಪ ಯಾವುದೇ ಮಾಹಿತಿ ನೀಡಿಲ್ಲ, ಜೊತೆಗೆ ಜಿಲ್ಲಾ ಸಂಘದ ಕಟ್ಟಡ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರಿಂದ ಪಡೆದಿರುವ ಹಣ ದುರುಪಯೋಗ ಆಗಿದೆ ಎಂದರು. ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಇಲಾಖೆಗೆ ದೂರು ನೀಡಿದರು ಪೊಲೀಸರು ಅವರ ವಿರುದ್ಧ ಪ್ರಕರಣ ಕೈಗೊಳ್ಳಲು ನಿರ್ಲಕ್ಷ್ಯ ತೋರಿದ್ದಾರೆ, ಈ ಹಿಂದೆ ಸಮಗ್ರ ದಾಖಲೆಗಳೊಂದಿಗೆ ದೂರು ನೀಡಿದರು ಪ್ರಕರಣ ದಾಖಲು ಮಾಡಲು ಮೀನಮೇಷ ಎಣಿಸಿದ್ದಾರೆ. ಕೂಡಲೇ ಅವರ ಮೇಲೆ ದಾಖಲಾಗಿರುವ ಪ್ರಕರಣದ ಹಿನ್ನೆಲೆ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದ ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಗಮನ ಹರಿಸಿ ಆಗಿರುವ ಅನ್ಯಾಯದ ಬಗ್ಗೆ ಸಮಗ್ರ ತನಿಖೆ ನಡೆಸಲು ಸಂಭಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂಘದ ಪದಾಧಿಕಾರಿಗಳಾದ ಚಿದಾನಂದ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Share this article