ಕನ್ನಡಪ್ರಭ ವಾರ್ತೆ ದಾವಣಗೆರೆ
ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಖರೀದಿಸಿದರೆ ಅಂತಹ ಖರೀದಿದಾರರಿಗೆ 6 ತಿಂಗಳ ಜೈಲು ಶಿಕ್ಷೆ, ಆತನ ಪರವಾನಗಿ ರದ್ದು ಪಡಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕೈಗೊಂಡಿದ್ದ ಪಾದಯಾತ್ರೆಯಲ್ಲಿ ರೈತರು ನಗರದಲ್ಲಿ ಗುರುವಾರ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಿದರು.ಚನ್ನಗಿರಿ ನಲ್ಲೂರು ಗ್ರಾಮದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಫೆ.19ರಂದು ಆರಂಭಿಸಿದ್ದ ಪಾದಯಾತ್ರೆಯಲ್ಲಿ ಸಂಘದ ಪದಾಧಿಕಾರಿ, ಮುಖಂಡರು, ರೈತರು, ರೈತ ಮಹಿಳೆಯರು ಗುರುವಾರ ಜಿಲ್ಲಾ ಕೇಂದ್ರ ಪ್ರವೇಶಿಸಿ, ಶ್ರೀ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರಲ್ಲದೇ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಜಿಲ್ಲೆಯ ಸಾಸ್ವೇಹಳ್ಳಿ, ಕಮ್ಮಾರಘಟ್ಟ ಏತ ನೀರಾವರಿ ಕಾಮಗಾರಿ ವೇಗದಲ್ಲಿ ಪೂರ್ಣಗೊಳಿಸಬೇಕು. ಚನ್ನಗಿರಿ ತಾ. ಗಾಣದಕಟ್ಟೆ ರಿ.ಸ.ನಂ.1 ಮತ್ತು ಎನ್.ಗಾಣದಕಟ್ಟೆ ರಿ.ನಂ.8, ಶಿವಗಂಗೆ ಹಾಳ್ ರಿ.ಸ.ನಂ.4ರಲ್ಲಿ ಎಂಪಿಎಂ ಮಿಲ್ ಗೆ ನೀಡಿದ ಲೀಜ್ ಅವಧಿ ಪೂರ್ಣವಾಗಿದ್ದು, ಜಮೀನಿನ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು. ಜಿಲ್ಲೆಯಲ್ಲಿ ಸಾವಿರಾರು ನಿವೇಶನ ರಹಿತ ಕುಟುಂಬ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸಿದ್ದು, ಆ ಕುಟುಂಬಗಳಿಗೆ ಸರ್ಕಾರದ ಜಮೀನಲ್ಲಿ ನಿವೇಶನಗಳಾಗಿ ಪರಿವರ್ತಿಸಿ, ನಿವೇಶನ ಮತ್ತು ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.ಜಗಳೂರು ತಾಲೂಕಿನ 57 ಕೆರೆ ನೀರನ್ನು ನೀರು ತುಂಬಿಸುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ಕೆರೆ ತುಂಬಿಸುವ ಕೆಲಸ ಮೊದಲು ಮಾಡಬೇಕು. ಅಲ್ಲಿ ತುರ್ತಾಗಿ ಗೋ ಶಾಲೆಗಳ ಆರಂಭಿಸಿ, ಪ್ರತಿ ಗ್ರಾಮಕ್ಕೂ ಜನರಿಗೆ ಶುದ್ಧ ಕುಡಿಯುವ ನೀರೊದಗಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ಬಗರ್ ಹುಕುಂ ಅರ್ಜಿ ಫಾರಂ 50, 53 ಮತ್ತು ಈಗಾಗಲೇ 57 ಅರ್ಜಿ ಫಾರಂ ಸಲ್ಲಿಸಿದ್ದು, ತಾಲೂಕಿನಾದ್ಯಂತ ವಜಾಗೊಳಿಸಿದ್ದನ್ನು ತಕ್ಷಣ ಮರು ಪರಿಶೀಲಿಸಿ, ಹಕ್ಕುಪತ್ರ ನೀಡಬೇಕು. ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ ನೀಡಲಿ ಎಂದು ತಾಕೀತು ಮಾಡಿದರು.
ಸಂಘದ ಮುಖಂಡರಾದ ಕೈದಾಳೆ ರವಿಕುಮಾರ, ಯಲೋದಹಳ್ಳಿ ಎಸ್.ಆರ್.ರವಿಕುಮಾರ, ನಿಟುವಳ್ಳಿ ಪೂಜಾರ ಅಂಜಿನಪ್ಪ, ಬಾಲಾಜಿ, ಅಸ್ತಾಫನಹಳ್ಳಿ ಗಂಡುಗಲಿ, ಬಸಣ್ಣ, ಕುಮಾರ, ನಾಗರಾಜ, ಕೃಷ್ಣಮೂರ್ತಿ, ಹನುಮಂತ, ಶರಣಮ್ಮ, ರಂಗನಾಥ, ಯೇಸುದಾರ, ಅಣ್ಣಪ್ಪ, ಚಿಕ್ಕನಂಜಾ, ದಾರಸೂರು, ಚಣು, ನಂದಕುಮಾರ, ಉಮೇಶ ಉಪಾಯಕನಹಳ್ಳಿ, ಲೋಕೇಶ, ರಂಗಪ್ಪ, ಬಸಣ್ಣ, ಪುನೀತಕುಮಾರ ಮಧುರ ನಾಯ್ಕನಹಳ್ಳಿ, ಕರಿಯಪ್ಪ, ಭೀಮಪ್ಪ, ಚಂದ್ರಪ್ಪ, ನಲ್ಲೂರು ಪೀರಾ ನಾಯ್ಕ ಮಧುರನಾಯ್ಕನಹಳ್ಳಿ, ಮಂಜಪ್ಪ, ಕುಮಾರ, ಪ್ರವೀಣ, ಮಂಜಪ್ಪ, ಹಿರೇಕೋಗಲೂರು ಪ್ರಕಾಶ, ಆಂಜನೇಯ, ತ್ಯಾವಣಿಗೆ ವೆಂಕಟೇಶ, ಮಹಾಬಲೇಶ, ಆರ್.ನಾಗರಾಜ ಇತರರಿದ್ದರು.ರೈತರ ಒಕ್ಕಲೆಬ್ಬಿಸುವುದು ತಕ್ಷಣ ನಿಲ್ಲಿಸಿ
ರಾಜ್ಯ ಸರ್ಕಾರ ಅಕ್ರಮ ಸಕ್ರಮ ವಿದ್ಯುತ್ ಯೋಜನೆ ಪುನಾರಂಭಿಸಬೇಕು. ಈಗಾಗಲೇ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಚನ್ನಗಿರಿ, ಹೊನ್ನಾಳಿ ತಾಲೂಕು ಯೋಜನೆಯಿಂದ ಕೈಬಿಡಲಾಗಿದೆ. ತಕ್ಷಣವೇ ಎರಡೂ ತಾಲೂಕನ್ನೂ ಯೋಜನೆ ವ್ಯಾಪ್ತಿಗೆ ತರಬೇಕು. ರಾಜ್ಯ ಸರ್ಕಾರ 15-20 ವರ್ಷ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದೆಂಬ ಆದೇಶವಿದ್ದರೂ, ಚನ್ನಗಿರಿ ತಾಲೂಕಿನಲ್ಲಿ ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಈ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಎಚ್ಚರಿಸಿದರು.