ಕೂಡಲೇ ಎಕರೆಗೆ 50 ಸಾವಿರ ರು. ಪರಿಹಾರ ನೀಡಿ

KannadaprabhaNewsNetwork |  
Published : Oct 15, 2025, 02:08 AM IST
ಇಂಡಿ | Kannada Prabha

ಸಾರಾಂಶ

ಪ್ರತಿ ರೈತರಿಗೂ ಒಣ ಬೇಸಾಯಕ್ಕೆ 50 ಸಾವಿರ ಹಾಗೂ ನೀರಾವರಿಗೆ 1 ಲಕ್ಷ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2 ಲಕ್ಷ ರು. ಪರಿಹಾರ ನೀಡಬೇಕು

ಕನ್ನಡಪ್ರಭ ವಾರ್ತೆ ಇಂಡಿ

ಕಳೆದ ಐದು ತಿಂಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಕೂಡಲೇ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿ, ಜಂಟಿ ಸಮೀಕ್ಷೆ ನೆಪದಲ್ಲಿ ಸಮಯ ವ್ಯರ್ಥಮಾಡದೇ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿ ರೈತರಿಗೂ ಒಣ ಬೇಸಾಯಕ್ಕೆ ₹50 ಸಾವಿರ ಹಾಗೂ ನೀರಾವರಿಗೆ ₹1 ಲಕ್ಷ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹2 ಲಕ್ಷ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಭಾರೀ ಮಳೆಯಿಂದಾಗಿ ತಾಲೂಕಿನ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ತೋಟಗಾರಿಕ ಬೆಳೆಗಳಾದ ದ್ರಾಕ್ಷಿ ದಾಳಿಂಬೆ, ಲಿಂಬೆ, ಬಾಳೆ ನೀರು ನಿಂತು ಹಾಳಾಗಿವೆ. ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ 15 ದಿನದೊಳಗಾಗಿ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದರು. ಯಾವ ರೈತರಿಗೂ ತಾರತಮ್ಯ ಮಾಡದೆ ಪರಿಹಾರ ಹಾಗೂ ಫಸಲು ಬಿಮಾ ಯೋಜನೆಯ ವಿಮೆಯನ್ನು ತಕ್ಷಣ ನೀಡಬೇಕೆಂದರು.

ತಾಲೂಕು ಅಧ್ಯಕ್ಷ ಮಾಳು ಪೂಜಾರಿ ಮಾತನಾಡಿ, ಭೀಮೆ, ಕೃಷ್ಣಾ ಹಾಗೂ ದೋಣಿಯ ಪ್ರವಾಹದಿಂದಾಗಿ ಬೆಳೆ ಹಾನಿಯ ಜೊತೆಗೆ ಮನೆ, ಜನಜಾನುವಾರುಗಳು ಕಳೆದುಕೊಂಡು ನಷ್ಟವಾಗಿದ್ದು, ಇದಕೆಲ್ಲ ಪರಿಹಾರ ನೀಡಬೇಕೆಂದ ಅವರು, ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಜಿಲ್ಲಾ ಕಾರ್ಯದರ್ಶಿ ಮಹದೇವ್ ಬನಸೋಡೆ ಮಾತನಾಡಿ, ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ನಷ್ಟ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ. ಆದರೆ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಅದೆಲ್ಲವನ್ನೂ ಮತ್ತೊಮೆ ಸಮೀಕ್ಷೆಕೈಗೊಂಡು ಎಲ್ಲರಿಗೂ ಪರಿಹಾರ ದೊರಕಿಸಬೇಕೆಂದು ಕೋರಿದರು.

ಮನವಿ ಸ್ವೀಕರಿಸಿ ಮತನಾಡಿದ ತಹಸೀಲ್ದಾರ್, ಈಗಾಗಲೇ ಮೊದಲೇ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು. ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ಹಾನಿಯಾದ ವರದಿಯನ್ನು ಆಯಾ ಗ್ರಾಪಂ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ. ಇನ್ನು ಯಾವ ರೈತರು ನಷ್ಟಗೊಂಡು ಉಳಿದಿದ್ದರೆ ಅಂತವರು ದಾಖಲೆ ಸಲ್ಲಿಸುವಂತೆ ತಿಳಿಸಿದರು.

ಈ ವೇಳೆ ಚಡಚಣ ತಾಲೂಕು ಗೌರವಾಧ್ಯಕ್ಷ ಮುರಗೇಂದ್ರ ಸಿಂಪಿ, ಗೇನಪ್ಪ ಬಿರಾದಾರ, ಗಂಗಾಧರ ಮಾನೆ, ಶ್ರೀಶೈಲ ಪೈಕರ್, ಶಂಕ್ರಪ್ಪ ಸಾಲೋಟಗಿ, ಸೋಮನಿಂಗ್ ನಿಂಗಾರಿ, ಧರ್ಮರಾಜ್ ಪಾಟೀಲ್, ಮಾಳಪ್ಪ ಹಿರೇಕುರಬರ, ಮಾಂತೇಶ ಬಡಿಗೇರ್, ನಾಗಪ್ಪ ಗುಡ್ಲ, ದತ್ತು ಹೇಳವಾರ, ಸಂಜು ಹಿರೇಕುರಬರ, ಹನಮಂತ ಹೂಗಾರ, ಚಂದು ಬೆನೂರ, ಮಮ್ಮದ ಮುಲ್ಲಾ, ಸಂತೋಷ್ ಟೆಂಗಳೇ, ಅಮ್ಮಸಿದ್ಧ ಆಸಂಗಿ ಸೇರಿದಂತೆ ರೈತರು ಇದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ