ರೋಗನಿರೋಧಕ ಶಕ್ತಿ ಕೊಡುವ ನಿಸರ್ಗ: ವಿಜಯಕುಮಾರ ಗೋಗಿ

KannadaprabhaNewsNetwork |  
Published : Jul 10, 2024, 12:33 AM IST
9ಡಿಡಬ್ಲೂಡಿ1ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಆವರಣದಲ್ಲಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ಅಣೆಕಟ್ಟು ಪ್ರದೇಶದ ಮೇಲ್ಭಾಗದ ಪ್ರದೇಶದಲ್ಲಿ ಅರಣ್ಯದ ಮಹತ್ವ ಹೆಚ್ಚಾಗಿದೆ. ಮಳೆ ನೀರು ಹರಿದು ಬರುವ ಸಂದರ್ಭದಲ್ಲಿ ಮೇಲ್ಮಣ್ಣನ್ನೂ ಹೊತ್ತು ತರುವುದರಿಂದ ಅಣೆಕಟ್ಟೆಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಯೋಜನೆಯ ಉದ್ದೇಶ ಈಡೇರುವುದಿಲ್ಲ.

ಧಾರವಾಡ:

ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳು ಯಾವುದೇ ವೈದ್ಯಕೀಯ ಉಪಚಾರವಿಲ್ಲದೇ ಆರೋಗ್ಯದಿಂದ ಬದುಕುತ್ತವೆ. ಇದಕ್ಕೆ ಕಾರಣ ನಿಸರ್ಗ. ನಿಸರ್ಗದೊಂದಿಗೆ ನಮ್ಮ ಜೀವನವನ್ನು ಸಮ್ಮಿಳಿತ ಮಾಡಿದರೆ, ನಿಸರ್ಗ ರೋಗನಿರೋಧಕ ಶಕ್ತಿ ಕೊಡುತ್ತದೆ. ಮರಗಳು ಭೂಮಿಯ ಫಲವತ್ತತೆ ಹೆಚ್ಚಿಸುವುದಲ್ಲದೇ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುತ್ತವೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಹೇಳಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಆವರಣದಲ್ಲಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿದ ಅವರು, ಅಣೆಕಟ್ಟು ಪ್ರದೇಶದ ಮೇಲ್ಭಾಗದ ಪ್ರದೇಶದಲ್ಲಿ ಅರಣ್ಯದ ಮಹತ್ವ ಹೆಚ್ಚಾಗಿದೆ. ಮಳೆ ನೀರು ಹರಿದು ಬರುವ ಸಂದರ್ಭದಲ್ಲಿ ಮೇಲ್ಮಣ್ಣನ್ನೂ ಹೊತ್ತು ತರುವುದರಿಂದ ಅಣೆಕಟ್ಟೆಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಆದ್ದರಿಂದ ಹೆಚ್ಚು ಮರ-ಗಿಡ ನೆಡುವ ಮೂಲಕ ನೀರಿನ ಹರಿವಿನ ವೇಗವನ್ನು ತಗ್ಗಿಸಿ ಭೂಮಿಯ ಸಂರಕ್ಷಣೆ ಮಾಡಬಹುದು ಎಂದರು.

ವೃಕ್ಷಗಳು ಬರೀ ವೃಕ್ಷಗಳಲ್ಲ, ಅವು ದೇವರು ಕೊಟ್ಟ ವರಗಳು. ಸೃಷ್ಟಿಯಲ್ಲಿನ ಎಲ್ಲ ಜೀವರಾಶಿಯ ಜತೆಗೆ ಸಹಬಾಳ್ವೆ ಮಾಡಬೇಕಾದರೆ ನಾವು ಬದುಕುವ ಜತೆಗೆ ಇತರೆ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಗಿಡ-ಮರ ಬೆಳೆಸಬೇಕು ಎಂದು ಹೇಳಿದರು.

ಹೈಕೋರ್ಟ್‌ ಅಪರ ವಿಲೇಖನಾಧಿಕಾರಿ ಶಾಂತವೀರ ಶಿವಪ್ಪ ಮಾತನಾಡಿ, ವನ್ಯ ಸಂಪತ್ತಿನ ರಕ್ಷಣೆ ಕೇವಲ ಇಲಾಖೆಯ ಕಾರ್ಯವಲ್ಲ. ಪ್ರತಿಯೊಬ್ಬ ನಾಗರೀಕರು ಗಿಡ ನೆಡುವ ಜತೆಗೆ ಪರಿಸರ ಸಂಕರಕ್ಷಣೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಜಾಗತೀಕರಣ, ವಾಣಿಜ್ಯೀಕರಣ ಮತ್ತು ನವ ಉದಾರೀಕರಣ, ಅರ್ಥಶಾಸ್ತ್ರ ಸಿದ್ಧಾಂತ ಅಡಿಯಲ್ಲಿ ಲಾಭವೇ ಸರ್ವಸ್ವ ಆಗಿರುವಾಗ ವ್ಯೆಯಕ್ತಿಕ ಲಾಭಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಹನನವಾಗುತ್ತಿದೆ. ಭಾರತ ಸಾವಿರಾರು ವರ್ಷಗಳಿಂದ ತನ್ನದೇ ಆದ ಸುಸ್ಥಿರ ಅರ್ಥಶಾಸ್ತ್ರದ ಸಿದ್ಧಾಂತ ಮೈಗೂಡಿಸಿಕೊಂಡಿದೆ. ಭಕ್ತಿ ಪರಂಪರೆ, ವಚನ ಪರಂಪರೆಗಳ ಆಧಾರದ ಮೇಲೆ ನಿಸರ್ಗದ ಸಂಪನ್ಮೂಲಗಳ ಸಂರಕ್ಷಣೆಯನ್ನು ಸಾಧಿಸಲಾಗುತ್ತಿತ್ತು. ಇದೀಗ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಲಾಭಕೋರತನ ಮತ್ತು ಕೊಳ್ಳುಬಾಕತನ ಹೆಚ್ಚಾಗುತ್ತಿರುವುದು ವನ್ಯ ಸಂಪನ್ಮೂಲದ ನಾಶಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಗಟ್ಟುವ ಜಾಗೃತಿ ಹಾಗೂ ಅನುಷ್ಠಾನ ಅವಶ್ಯಕವಾಗಿದೆ ಎಂದರು.

ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರದೀಪ ಪವಾರ, ರಾಷ್ಟ್ರೀಯ ವಿಧಿ ವಿಜ್ಞಾನ ವಿವಿ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು ಮತ್ತು ವಾಲ್ಮಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ