ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ತಂಬಾಕು ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳುಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಸಿಗರೇಟ್, ತಂಬಾಕು ಉತ್ಪನ್ನಗಳ ಬಳಕೆಯನ್ನು ತ್ಯಜಿಸುವಂತೆ ಜನರ ಮನವೊಲಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋಟ್ಪಾ ದಾಳಿ ನಡೆಸಲಾಗುತ್ತಿದೆ. ತಂಬಾಕು ಸೇವನೆಯ ಅರಿವಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತಿವೆ. ಈ ಸಂಬಂಧ ಜನರಿಗೆ ತಲುಪುವಂತಹ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಂಬಾಕು ಸೇವನೆಯಿಂದ ಸಾಮಾಜಿಕ, ಅರ್ಥಿಕ, ಕೌಟುಂಬಿಕ ಸಮಸ್ಯೆಗಳು ಎದುರಾಗಲಿವೆ. ತಂಬಾಕಿಗೆ ತುತ್ತಾಗಿ ಯುವಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಕ್ಕಳಿಗೆ ಸಿಂಗಲ್ ಪೇರೆಂಟ್‌ಗಳಿದ್ದಾರೆ. ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜನರು ತಂಬಾಕು ಬಿಟ್ಟು ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಲು ದೃಢಸಂಕಲ್ಪ ಮಾಡಬೇಕು. ತಂಬಾಕು ನಿಯಂತ್ರಣಕ್ಕೆ ಕಠಿಣ ಕಾನೂನುಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿ ನಶಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶಾಲಾ ಕಾಲೇಜು, ವಿದ್ಯಾರ್ಥಿನಿಲಯಗಳು ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳ ಹೊರ ಆವರಣದ 100 ಮೀ. ಅಂತರದೊಳಗೆ ತಂಬಾಕು ಮಾರಾಟ ನಿಷೇಧಿಸಿದೆ. ಆದರೂ ಅಧಿಕಾರಿಗಳ ತಂಡ ಆಗಾಗ್ಗೆ ದಿಢೀರ್ ಭೇಟಿ ನೀಡಿ ತಂಬಾಕು ಮಾರಾಟಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಗೆ 200 ರು. ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಪ್ರತಿ ಗ್ರಾಪಂ ಮಟ್ಟದಲ್ಲಿ ಆಟೋ ಪ್ರಚಾರ ಹಮ್ಮಿಕೊಳ್ಳಬೇಕು. ಜಾಗೃತಿ ಜಾಥಾಗಳನ್ನು ಆಯೋಜಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿವೆ ಎಂದು ತಿಳಿಸಿದರು.ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಗೆ 200 ರು. ಬದಲಾಗಿ 2 ರಿಂದ 3 ಸಾವಿರ ರು. ದಂಡ, ತಂಬಾಕು ಸೇವಿಸುವವರ ವಿರುದ್ಧ ಪ್ರಕರಣ ದಾಖಲಿಸುವುದು, ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟುವ ವಿಧಾನಗಳ ಬಗ್ಗೆ ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಸುತ್ತೋಲೆ ಹೊರಡಿಸುವ ಕುರಿತು ಮುಂದಿನ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು. ಈ ಬಾರಿ ತಂಬಾಕುಮುಕ್ತ ಗ್ರಾಮ ಘೋಷಣೆ ಮಾಡಲು ಕುದೇರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಜು. 29ರಿಂದ ಆ. 14ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಅಂಗವಾಗಿ ಪ್ರತಿದಿನ 16880 ಮನೆಗಳಂತೆ ಒಟ್ಟು 2 ಲಕ್ಷದ 36 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಪ್ರತಿ ಮನೆಮನೆಗೂ ಭೇಟಿ ನೀಡುವ ಮೂಲಕ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಕುಷ್ಠರೋಗ ಚಿಹ್ನೆ (ಮಚ್ಚೆ) ಇರುವ ವ್ಯಕ್ತಿಗಳನ್ನು ತಪಾಸಣೆ ಮಾಡಿ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದರು.ಅಭಿಯಾನ ಕಾರ್ಯಕ್ರಮದ ಸಮೀಕ್ಷೆ ತಂಡದಲ್ಲಿ ಸಾಮಾನ್ಯವಾಗಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಆಯಾ ಗ್ರಾಮಗಳಲ್ಲಿ ಜನರ ಬಗ್ಗೆ ಸಂಪೂರ್ಣ ಅರಿವು ಸ್ಥಳೀಯರಿಗೆ ಲಭ್ಯವಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕೃಷಿ ಸಖಿ, ಪಶು ಸಖಿ ಹಾಗೂ ಸ್ವಸಹಾಯ ಗುಂಪುಗಳ (ಎನ್.ಆರ್.ಎಲ್.ಎಂ) ಮಹಿಳಾ ಸದಸ್ಯರನ್ನು ತಂಡಕ್ಕೆ ಸೇರ್ಪಡೆ ಮಾಡಬೇಕು. ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮದ ಅರಿವು ಮೂಡಿಸುವ ಭಿತ್ತಿಪತ್ರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಿಡುಗಡೆಗೊಳಿಸಿದರು. ಡಿಎಚ್‌ಒ ಡಾ. ಎಸ್. ಚಿದಂಬರ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್‌ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಪ್ರಸಾದ್, ಬಿ.ಆರ್.ಟಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಉಪಸ್ಥಿತರಿದ್ದರು.