- ಮೀಸಲು ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸಭೆಗಳ ಆಯೋಜನೆ - ಹಿಂದುಳಿದ ವರ್ಗದಲ್ಲಿ 197 ಸಮಾಜಗಳಿದ್ದು, ಹೀನಾಯ ಸ್ಥಿತಿಯಲ್ಲಿ 190 ಜಾತಿಗಳು - ಜಾತಿಗಣತಿ ಆಧಾರವಾಗಿಟ್ಟುಕೊಂಡು ಅರ್ಹರಿಗೆ ಮೀಸಲಾತಿ ನೀಡುವುದು ಜಾತಿಗಣತಿ ಉದ್ದೇಶ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಂವಿಧಾನ ಆಶಯದಂತೆ ಹಿಂದುಳಿದ, ದಲಿತ, ಆದಿವಾಸಿ ಸಮುದಾಯಗಳಿಗೆ ಸಮಬಾಳು, ಸಮಪಾಲು ಸಿಗಬೇಕಿದೆ. ಇದಕ್ಕಾಗಿ ಕಾಂತರಾಜ್ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತಿಗಣತಿ ವಿಷಯವಾಗಿ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ರಾಜ್ಯದ ಜಾತಿಗಣತಿ ಬಹಿರಂಗಪಡಿಸಬೇಕು, ಜಾತಿಗಣತಿ ಜಾರಿಗೆ ತರಬೇಕು. ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ನಡೆದಿರುವ ಜಾತಿಗಣತಿಯ ಕಾಂತರಾಜ್ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕಾಗಿದೆ ಎಂದರು. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ಅಲ್ಲಿ ಎಲ್ಲ ಜಾತಿಯ ನಾಯಕರು ಇದ್ದಾರೆ. ಬಲಾಡ್ಯ ಜಾತಿಗಳು ಕಾಂತರಾಜ್ ವರದಿಯನ್ನು ವಿರೋಧಿಸುವುದು ಸಹಜವೇ, ಸರ್ಕಾರದಲ್ಲಿ ದುರ್ಬಲ, ಪ್ರಬಲ ಜಾತಿಗಳ ಶಾಸಕರು, ಸಚಿವರು ಇರುವುದರಿಂದ ಸಾಧಕ- ಬಾಧಕಗಳನ್ನು ನೋಡಿಕೊಂಡು ವರದಿಯನ್ನು ಜಾರಿಗೊಳಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಮೇಲೆ ಸಾರ್ವಜನಿಕವಾದ ಒತ್ತಡ ಹೇರಬೇಕಾಗಿದೆ. ಈ ಹಿನ್ನೆಲೆ ಸರ್ಕಾರೇತರ ಸಂಘ, ಸಂಸ್ಥೆಗಳ ಮೂಲಕ ಜನರಲ್ಲಿ ಜಾತಿಗಣತಿ ಮತ್ತು ಅದರ ಆಧಾರಿತ ಮೀಸಲಾತಿ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರವರ್ಗ 1 ರಲ್ಲಿ 101 ಜಾತಿಗಳಿವೆ. ಇದರಲ್ಲಿ ಕೇವಲ 4-5 ಜಾತಿಗಳು ರಾಜಕೀಯವಾಗಿ ಪ್ರಬಲವಾಗಿವೆ. ಕೆಲವು ಜಾತಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಲ್ಲ. ಹಿಂದುಳಿದ ವರ್ಗದಲ್ಲಿ 197 ಸಮಾಜಗಳಿವೆ. 190 ಜಾತಿಗಳು ಇನ್ನು ಹೀನಾ ಸ್ಥಿತಿಯಲ್ಲಿವೆ. ದೇಶದಲ್ಲಿ ಕೆಲವೇ ಪ್ರಬಲ ಜಾತಿಗಳು ಸರ್ಕಾರದ ಯೋಜನೆಗಳು, ಸವಲತ್ತುಗಳನ್ನು ಕಬಳಿಸುತ್ತಾ ಬಂದಿವೆ. ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ ಆರ್ಥಿಕ ಕಾರ್ಯಕ್ರಮವೂ ಅಲ್ಲ. ಅದು ಸಂವಿಧಾನದ ಅಡಿಯಲ್ಲಿ ಬರುವ ಸಾಮಾಜಿಕ ನ್ಯಾಯ ಹಂಚಿಕೆಯಾಗಿದೆ. ಇದನ್ನು ದುರ್ಬಲ ಜಾತಿಗಳಿಗೆ ನೀಡುವುದು ಅಗತ್ಯವಿದೆ ಎಂದರು. ಹಿಂದುಳಿದವರ್ಗಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ತೀನ ಶ್ರೀನಿವಾಸ್, ಪ್ರಮುಖರಾದ ಆರ್.ಮೋಹನ್, ಶಿವಕುಮಾರ್, ಶಿವಾನಂದ, ಎಸ್.ಪಿ ಜಗನ್ನಾಥ್, ಜಿ ಪದ್ಮನಾಭ್ ಮತ್ತಿತರರು ಇದ್ದರು. - - - ಟಾಪ್ ಕೋಟ್ ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕೇಳಬೇಕು. ನನ್ನ ಧ್ವನಿ ಯಾರು ಕಡಿಮೆ ಮಾಡಲು ಸಾಧ್ಯವಿಲ್ಲ. ಜೀವನ ಪೂರ್ತಿ ಧ್ವನಿ ಏರಿಸಿಕೊಂಡು ಬಂದಿದ್ದೇನೆ. ಆ ಧ್ವನಿ ಹಾಗೆಯೇ ಇರುತ್ತದೆ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡ - - - (-ಫೋಟೋ: ಬಿ.ಕೆ.ಹರಿಪ್ರಸಾದ್)