ಬಿಬಿಎಂಪಿ ಮಾದರಿಯಲ್ಲಿಯೇ ಜಲಮಂಡಳಿ ಕೂಡ ನೀರು ಬಳಕೆ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್ ಜಾರಿ?

KannadaprabhaNewsNetwork | Updated : Aug 09 2024, 06:56 AM IST

ಸಾರಾಂಶ

ಬಿಬಿಎಂಪಿ ಮಾದರಿಯಲ್ಲಿಯೇ ಜಲಮಂಡಳಿ ಕೂಡ ನೀರು ಬಳಕೆ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿ ಪರಿಹಾರ (ಒಟಿಎಸ್) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದು, ಈ ಕುರಿತು ಸರ್ಕಾರಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲು ಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

 ಬೆಂಗಳೂರು :  ಬಿಬಿಎಂಪಿ ಮಾದರಿಯಲ್ಲಿಯೇ ಜಲಮಂಡಳಿ ಕೂಡ ನೀರು ಬಳಕೆ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿ ಪರಿಹಾರ (ಒಟಿಎಸ್) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದು, ಈ ಕುರಿತು ಸರ್ಕಾರಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲು ಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆರ್ಥಿಕ ವೃದ್ಧಿಗಾಗಿ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಮಾಡಲು ಜಲಮಂಡಳಿ ಮುಂದಾಗಿದೆ. ಅದಕ್ಕೆ ಬಿಬಿಎಂಪಿ ಮಾದರಿ ಅನುಸರಿಸುವ ಕುರಿತು ಚರ್ಚೆಗಳನ್ನು ನಡೆಸಲಾಗಿದ್ದು, ಒಟಿಎಸ್‌ ಮಾದರಿಯಲ್ಲಿ ಬಾಕಿ ನೀರಿನ ಶುಲ್ಕ ವಸೂಲಿ ಮಾಡಲು ಚಿಂತನೆ ನಡೆಸಿದೆ. ಈ ಕುರಿತು ಮಂಡಳಿ ಅಧಿಕಾರಿಗಳು ಚರ್ಚೆ ನಡೆಸಿದ್ದು, ಸರ್ಕಾರದಿಂದ ಅನುಮತಿ ಪಡೆಯಲು ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಪ್ರಸ್ತಾವನೆಯಲ್ಲಿ ಹಲವು ವರ್ಷಗಳಿಂದ ನೀರು ಬಳಕೆ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರು ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ ಬಾಕಿ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಗಳಿವೆ.

ಕೇಂದ್ರ-ರಾಜ್ಯ ಸರ್ಕಾರಗಳಿಂದಲೇ ಬಾಕಿ:

ಜಲಮಂಡಳಿಯಿಂದ ನೀರು ಬಳಕೆಗಾಗಿ ಸಂಪರ್ಕ ಪಡೆದು, ಅದರ ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡವರ ಪೈಕಿ ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಗಳ ಕಚೇರಿಗಳು, ಬಿಬಿಎಂಪಿ ಕಟ್ಟಡಗಳೂ ಸೇರಿವೆ. ಅಲ್ಲದೆ, ಬಾಕಿ ನೀರಿನ ಶುಲ್ಕದ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ಪಾವತಿಸಬೇಕಿದೆ. ಒಟ್ಟು 4.97 ಲಕ್ಷ ನೀರಿನ ಸಂಪರ್ಕಗಳಿಂದ ನೀರಿನ ಬಳಕೆಯ ಶುಲ್ಕ ಬಾಕಿ ಮತ್ತು ಅದರ ಮೇಲಿನ ಬಡ್ಡಿ ಸೇರಿದಂತೆ ₹663.32 ಕೋಟಿ ವಸೂಲಿಯಾಗಬೇಕಿದೆ. ಅದರಲ್ಲಿ ₹422.02 ಕೋಟಿ ಬಾಕಿ ನೀರಿನ ಬಳಕೆ ಶುಲ್ಕವಾಗಿದ್ದರೆ, ₹241.29 ಕೋಟಿ ಅದರ ಮೇಲಿನ ಬಡ್ಡಿಯಾಗಿದೆ.

ಬಿಬಿಎಂಪಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ರಕ್ಷಣಾ ಇಲಾಖೆ, ಶಾಸನಬದ್ಧ ಸಂಸ್ಥೆಗಳಿಂದ ₹183.25 ಕೋಟಿ ನೀರಿನ ಶುಲ್ಕ ಮತ್ತು ಅದರ ಮೇಲಿನ ಬಡ್ಡಿ ಬಾಕಿ ಉಳಿಸಿಕೊಳ್ಳಲಾಗಿದೆ. ಉಳಿದಂತೆ ಗೃಹಬಳಕೆ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ಇನ್ನಿತರ ಸಂಪರ್ಕಗಳಿಂದ ₹480.07 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಾಕಿ ಮೊತ್ತವನ್ನು ವಸೂಲಿ ಮಾಡುವ ಸಲುವಾಗಿಯೇ ಜಲಮಂಡಳಿ ಒಟಿಎಸ್ ವ್ಯವಸ್ಥೆ ಜಾರಿಗೆ ತರುವ ಚಿಂತನೆ ನಡೆಸಿದೆ.

ನೀರಿನ ಬಳಕೆ ಶುಲ್ಕ ಬಾಕಿ ವಿವರ

ವಿಭಾಗನೀರಿನ ಸಂಪರ್ಕಒಟ್ಟು ಬಾಕಿ

ಬಿಬಿಎಂಪಿ 493 ₹23.14 ಕೋಟಿ

ಕೇಂದ್ರ ಸರ್ಕಾರ 194 ₹25.70 ಕೋಟಿ

ರಕ್ಷಣಾ ಇಲಾಖೆ46 ₹35.99 ಕೋಟಿ

ರಾಜ್ಯ ಸರ್ಕಾರ 658 ₹87.91 ಕೋಟಿ

ಶಾಸನಬದ್ಧ ಸಂಸ್ಥೆಗಳು 154 ₹10.48 ಕೋಟಿ

ಇತರೆ4.96 ಲಕ್ಷ₹480.07 ಕೋಟಿ

ಒಟ್ಟು4.97 ಲಕ್ಷ₹663.32 ಕೋಟಿ

Share this article