ಜುಲೈನಲ್ಲಿ ವೇತನ ಆಯೋಗ ವರದಿ ಜಾರಿ: ಎಂಎಲ್ಸಿ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಈಗಾಗಲೇ ವೇತನ ಆಯೋಗದ ವರದಿ ಸರ್ಕಾರದ ಕೈಸೇರಿದೆ. ಮುಖ್ಯಮಂತ್ರಿಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಜುಲೈ ತಿಂಗಳಲ್ಲಿ ನೌಕರರಿಗೆ ಶುಭ ಸುದ್ದಿ ಬರಲಿದೆ. ಹಳೆ ಪಿಂಚಣಿ ನೀತಿ ಜಾರಿಗೂ ಸಹ ಸರ್ಕಾರ ಬದ್ದವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರ ಜುಲೈ ತಿಂಗಳಲ್ಲೇ ೭ನೇ ವೇತನ ಆಯೋಗದ ವರದಿ ಜಾರಿ ಮಾಡುವ ಮೂಲಕ ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಲಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದರು.ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತರಾದ ಕನ್ನಡ ಉಪನ್ಯಾಸಕ ಜಿ.ಎಂ. ಗೋಪಿಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಶೀಘ್ರದಲ್ಲೇ ಶುಭ ಸುದ್ದಿ

ಈಗಾಗಲೇ ವೇತನ ಆಯೋಗದ ವರದಿ ಸರ್ಕಾರದ ಕೈಸೇರಿದೆ ಅತಿ ಶೀಘ್ರ ಜಾರಿಗೆ ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ಸಿಎಂ ಸಹಾ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಜುಲೈ ತಿಂಗಳಲ್ಲಿ ನೌಕರರಿಗೆ ಶುಭ ಸುದ್ದಿ ಕೊಡುವುದಾಗಿ ತಿಳಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನಾ ತನ್ನ ಚುನವಣಾ ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ ಭರವಸೆಯಾಗಿರುವ ಹೊಸ ಪಿಂಚಣಿ ನೀತಿ ರದ್ದು ಹಾಗೂ ಹಳೆ ಪಿಂಚಣಿ ನೀತಿ ಜಾರಿಗೆ ಬದ್ದವಾಗಿದ್ದು, ಈ ವರ್ಷವೇ ಅದರ ಜಾರಿಗೆ ಸರ್ಕಾರದ ಮೇಲೆ ತಾವು ಒತ್ತಡ ಹಾಕುವುದಾಗಿ ಭರವಸೆ ನೀಡಿದರು.ಅನುದಾನಿತ ಶಾಲೆ ಹುದ್ದೆ ಭರ್ತಿ

ರಾಜ್ಯದ ಅನುದಾನಿತ ಶಾಲೆಗಳಲ್ಲಿ ೨೦೧೫ ರಿಂದ ೨೦೨೫ ರವರೆಗೂ ನಿವೃತ್ತಿ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಹಾಗೂ ಖಾಲಿಯಾಗಲಿರುವ ಹುದ್ದೆಗಳ ಭರ್ತಿಗೂ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಜು.೧೫ ರಿಂದ ನಡೆಯುವ ವಿಧಾನಮಂಡಳದ ಅಧಿವೇಶನದಲ್ಲಿ ಈ ಕುರಿತು ಆಗ್ರಹಿಸುವುದಾಗಿ ತಿಳಿಸಿದರು.ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾಗಿರುವುದರಿಂದ ಪಾಠಪ್ರವಚನಗಳಿಗೆ ಅಡ್ಡಿಯಾಗಿದೆ, ಇದು ಶೈಕ್ಷಣಿಕ ಅಭಿವೃದ್ದಿಯ ಮೇಲೆ ಪರಿಣಾಮವೂ ಬೀರುತ್ತಿದ್ದು, ಶೀಘ್ರ ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ಅನುಮೋದನೆ ಕೊಡಿಸುವುದಾಗಿ ತಿಳಿಸಿದರು.ಗೋಪಿಕೃಷ್ಣನ್‌ ಸೇವೆ ಶ್ಲಾಘನೀಯ

ಬಾಲಕಿಯರ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದು, ತಮ್ಮ ಅತ್ಯುತ್ತಮ ಸೇವೆಯ ಮೂಲಕ ಎಲ್ಲರ ಗಮನ ಸೆಳೆದಿರುವ ಗೋಪಿಕೃಷ್ಣನ್ ವಯೋ ನಿವೃತ್ತಿಯಾಗುತ್ತಿದ್ದು, ಅವರ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಗೋಪಿಕೃಷ್ಣನ್ ಅವರು ತಮ್ಮ ಕರ್ತವ್ಯದಲ್ಲಿ ಎಂದು ಹಿಂದೆ ಬಿದ್ದವರಲ್ಲ, ತಮಗೆ ವಹಿಸಿದ ಸೇವೆಯನ್ನು ಅತ್ಯಂತ ನಿಷ್ಟೆಯಿಂದ ಮಾಡಿದ್ದಾರೆ ಎಂದರು.

ಕಷ್ಟ, ಸುಖ ಕಂಡಿದ್ದೇನೆ

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ಗೋಪಿಕೃಷ್ಣನ್, ತಮ್ಮ ಬದುಕಿನಲ್ಲಿ ಅನೇಕ ಕಷ್ಟ,ಸುಖಗಳನ್ನು ಕಂಡಿದ್ದೇನೆ, ಅರೆಕಾಲಿಕ ಉಪನ್ಯಾಸಕನಾಗಿ, ನಂತರ ಕಾಯಂ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ, ನನ್ನ ಸೇವೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್.ಶ್ರೀನಾಥ್, ಪಿಯು ಡಿಡಿ ರಾಮಚಂದ್ರಪ್ಪ, ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಪರುಶುರಾಮ್ ಉನ್ಕಿ, ಬಂಗಾರಪೇಟೆ ಸುಬ್ರಮಣಿ, ಮುರಳಿ, ಪ್ರಾಣೇಶ್, ನಾರಾಯಣಪ್ಪ, ನಾರಾಯಣಸ್ವಾಮಿ, ನಾಗರಾಜನ್, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಕಾರ್ಯದರ್ಶಿ ಬೋಡಿರೆಡ್ಡಿ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಶುಭ ಕೋರಿದರು.

Share this article