ಕೆಎಂಸಿ ಆಸ್ಪತ್ರೆಯಲ್ಲಿ ಸ್ಟಿರಿಯೊಟ್ಯಾಕ್ಟಿಕ್‌ ರೇಡಿಯೊಥೆರಪಿ ಅನುಷ್ಠಾನ

KannadaprabhaNewsNetwork | Published : Apr 16, 2024 1:09 AM

ಸಾರಾಂಶ

ಮಂಗಳೂರಿನ ಅತ್ತಾವರ ಕೆಎಂಸಿಯ ಆಸ್ಪತ್ರೆಯ ಆಂಕಾಲಜಿ ಕೇಂದ್ರ (ಕೆಎಂಸಿಎಚ್‌ಎಒಸಿ)ದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಆರೈಕೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ಅನಾರೋಗ್ಯಗಳಿಗೆ ಪರಿಣಾಮಕಾರಿ ಮತ್ತು ನಿಖರ ಚಿಕಿತ್ಸೆಯನ್ನು ಒದಗಿಸಬಲ್ಲ ಚಿಕಿತ್ಸಾ ವಿಧಾನವಾಗಿರುವ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಅಳವಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಅತ್ತಾವರ ಕೆಎಂಸಿಯ ಆಸ್ಪತ್ರೆಯ ಆಂಕಾಲಜಿ ಕೇಂದ್ರ (ಕೆಎಂಸಿಎಚ್‌ಎಒಸಿ)ದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಆರೈಕೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ಅನಾರೋಗ್ಯಗಳಿಗೆ ಪರಿಣಾಮಕಾರಿ ಮತ್ತು ನಿಖರ ಚಿಕಿತ್ಸೆಯನ್ನು ಒದಗಿಸಬಲ್ಲ ಚಿಕಿತ್ಸಾ ವಿಧಾನವಾಗಿರುವ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಅಳವಡಿಸಿಕೊಳ್ಳಲಾಗಿದೆ.ರೇಡಿಯೇಶನ್ ಬೀಮ್‌ಗಳನ್ನು ಸೂಜಿ ಮೊನೆಯಷ್ಟು ನಿಖರವಾಗಿ ಗಡ್ಡೆಯ ಮೇಲೆ ಹಾಯಿಸುವ ಮೂಲಕ ಕ್ಯಾನ್ಸರ್ ಅಂಗಾಂಶಗಳನ್ನು ನಿರ್ಮೂಲಗೊಳಿಸುವುದು ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯ ಕಾರ್ಯ ವಿಶೇಷ. ಈ ವೇಳೆ ಗಡ್ಡೆಯ ಸುತ್ತಲಿನ ಆರೋಗ್ಯವಂತ ಅಂಗಾಂಶಗಳಿಗೆ ಆಗಬಲ್ಲ ಹಾನಿ ಅತ್ಯಂತ ಕನಿಷ್ಠ ಮಟ್ಟದಲ್ಲಿರುತ್ತದೆ. ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯಲ್ಲಿ ಗಡ್ಡೆಯನ್ನು ಬಹು ಆಯಾಮಗಳಿಂದ ವಿಕಿರಣ ಚಿಕಿತ್ಸೆಗೆ ಗುರಿ ಪಡಿಸಲು ಸಾಧ್ಯವಾಗುವುದರಿಂದ ಚಿಕಿತ್ಸೆಯ ಪರಿಣಾಮ ಗರಿಷ್ಠ ಮಟ್ಟದಲ್ಲಿರುತ್ತದೆ, ಅಡ್ಡ ಪರಿಣಾಮಗಳು ಅತ್ಯಂತ ಕನಿಷ್ಟವಾಗಿರುತ್ತವೆ.

ಅತ್ತಾವರ ಕೆಎಂಸಿಯಲ್ಲಿ ನೂತನವಾಗಿ ಅಳವಡಿಸಿಕೊಳ್ಳಲಾಗಿರುವ ಈ ವಿನೂತನ ರೇಡಿಯೇಶನ್‌ ಚಿಕಿತ್ಸೆಯ ಪ್ರಯೋಜನವನ್ನು ಮೊತ್ತಮೊದಲಾಗಿ ಪಡೆದುಕೊಂಡವರು ೨೭ ವರ್ಷ ವಯಸ್ಸಿನ ಒಬ್ಬ ರೋಗಿ. ಅವರು ತಲೆ ನೋವು ಮತ್ತು ದ್ವಂದ್ವದೃಷ್ಟಿಯ ಲಕ್ಷಣಗಳನ್ನು ಹೊಂದಿದ್ದು, ಮೆದುಳು ಕಾಂಡ ಭಾಗದಲ್ಲಿ ಕ್ಯಾವೆರ್ನಸ್ ಹಿಮಾಂಜಿಯೊಮಾಕ್ಕೆ ತುತ್ತಾಗಿದ್ದರು. ನರಶಾಸ್ತ್ರಜ್ಞರು ಮತ್ತು ಆಂಕಾಲಜಿ ತಜ್ಞರನ್ನು ಒಳಗೊಂಡು ಬಹುವಿಭಾಗೀಯ ವೈದ್ಯಕೀಯ ತಂಡದ ಗಹನ ಸಮಾಲೋಚನೆಯ ಬಳಿಕ ಈ ರೋಗಿಗೆ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ ಚಿಕಿತ್ಸೆ ನೀಡುವ ತೀರ್ಮಾನಕ್ಕೆ ಬರಲಾಯಿತು.

ಆಂಕಾಲಜಿ ತಜ್ಞರಾದ ಡಾ. ಅತೀಯಮಾನ್‌, ಡಾ. ಸೌಜನ್ಯ ಬ್ಯಾನರ್ಜಿ, ಡಾ. ಜಾನ್ ಸನ್ನಿ, ಡಾ. ಅಭಿಷೇಕ್ ಕೃಷ್ಣ ಮತ್ತು ಡಾ. ಪೌಲ್ ಸೈಮನ್‌ ಅವರ ಮಾರ್ಗದರ್ಶನದಲ್ಲಿ ವೈದ್ಯರಾದ ಡಾ. ಚಳ್ಳಪಳ್ಳಿ ಶ್ರೀನಿವಾಸ್ ಮತ್ತು ಡಾ. ಡಿಲ್ಸನ್ ಲೊಬೊ ಅವರ ಸಹಕಾರದೊಂದಿಗೆ, ತಂತ್ರಜ್ಞರಾದ ರೀನು ರಾಬರ್ಟ್, ಅಭಿರಾಮ್‌ ರಾಧಾಕೃಷ್ಣನ್ ಮತ್ತು ಮೋಹನ್ ಜಿ. ಹಾಗೂ ದಾದಿಯರಾದ ಶೋಭಾ ಶೆಟ್ಟಿ, ಅರ್ಚನಾ ಅಮೀನ್ ಮತ್ತು ಸಿಂಥಿಯಾ ಅವರ ನೆರವಿನೊಂದಿಗೆ ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯನ್ನು ನಿಖರ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ನಡೆಸಲಾಯಿತು.

Share this article