ಕನ್ನಡಿಗರ ಮೇಲೆ ಮರಾಠಿ ಭಾಷೆ ಹೇರುವುದು ಖಂಡನೀಯ-ಶಾಂತಲಿಂಗ ಶ್ರೀ

KannadaprabhaNewsNetwork | Published : Feb 23, 2024 1:51 AM
Follow Us

ಸಾರಾಂಶ

ಮಹಾರಾಷ್ಟ್ರ ಸರ್ಕಾರ ಗಡಿನಾಡಿನ ಕನ್ನಡಿಗರಿಗೆ ಆರೋಗ್ಯವಿಮೆಯ ಆಮಿಷ ಒಡ್ಡುವುದರ ಜೊತೆಗೆ ರಾಜ್ಯದ ಗಡಿಭಾಗದಲ್ಲಿ ಸರ್ಕಾರಿ ಕಚೇರಿಗಳನ್ನು ತೆರೆದು ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಮರಾಠಿ ಭಾಷೆಯನ್ನು ಹೇರುತ್ತಿರುವ ಖಂಡನೀಯವಾಗಿದೆ.

ನರಗುಂದ: ಮಹಾರಾಷ್ಟ್ರ ಸರ್ಕಾರ ಗಡಿನಾಡಿನ ಕನ್ನಡಿಗರಿಗೆ ಆರೋಗ್ಯವಿಮೆಯ ಆಮಿಷ ಒಡ್ಡುವುದರ ಜೊತೆಗೆ ರಾಜ್ಯದ ಗಡಿಭಾಗದಲ್ಲಿ ಸರ್ಕಾರಿ ಕಚೇರಿಗಳನ್ನು ತೆರೆದು ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಮರಾಠಿ ಭಾಷೆಯನ್ನು ಹೇರುತ್ತಿರುವ ಖಂಡನೀಯವಾಗಿದೆ. ಸಿಎಂ ಸಿದ್ದರಾಮಯ್ಯ ಇದಕ್ಕೆ ಬಹುಬೇಗನೆ ಪ್ರತಿ ಉತ್ತರ ನೀಡಿ ಕನ್ನಡಿಗರ ಶಕ್ತಿಯನ್ನು ತೋರಿಸಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಆಗ್ರಹಿಸಿದರು. ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋಮುಸೌಹಾರ್ದತಾ ಪ್ರಶಸ್ತಿ ಪುರಸ್ಕೃತ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ೭೫ ನೇ ಜಯಂತಿ ಹಾಗೂ ವಿಶ್ವಮಾತೃ ಭಾಷಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚಿಗೆ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಪ್ರತಿಶತ 60ರಷ್ಟು ಕನ್ನಡ ಕಡ್ಡಾಯಗೊಳಿಸಿದ ಕರ್ನಾಟಕ ಘನ ಸರ್ಕಾರಕ್ಕೆ ಅಭಿನಂದನೆಗಳು ಪ್ರತಿಯೊಬ್ಬ ಕನ್ನಡಿಗರೂ ಭಾಷೆಯನ್ನು ಮೆರೆಯಬೇಕೆ ವಿನಃ ಅದನ್ನು ಎಂದಿಗೂ ಮರೆಯಬಾರದು ಎಂದು ಕರೆಕೊಟ್ಟರು. ಕನ್ನಡಿಗರಲ್ಲಿ ಭಾಷಾಭಿಮಾನ ಹಾಗೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣತ್ತಿದೆ. ಭಾಷೆ ಮದ್ದು ಗುಂಡುಗಳಿಗಿಂತ ಶಕ್ತಿ ಶಾಲಿ ಎನ್ನುವ ಹಾಗೆ ಒಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಭಾಷೆಯ ಮಹತ್ವ ಹಿರಿದಾದುದಾಗಿದೆ.

ಶ್ರೀಮಠ ಬಾಗಿಲನ್ನು ಸರ್ವರಿಗೂ ಮುಕ್ತವಾಗಿರಿಸಿ ಬಸವಣ್ಣನ ತತ್ವಾದರ್ಶಗಳನ್ನು ಅಕ್ಷರಶಃ ಪಾಲಿಸಿದ ಡಾ. ಸಿದ್ಧಲಿಂಗ ಶ್ರೀಗಳು ಅಭಿನವ ಬಸವಣ್ಣನಂತಿದ್ದರು. ಸದಾ ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿದ ಅವರು ಸರ್ವರನ್ನೂ ಸಮಭಾವದಿಂದ ಕಂಡ ಶ್ರೀ ಸಾಮಾನ್ಯರ ಸ್ವಾಮಿಗಳು, ಅವರು ಸವೆಸಿದ ಹಾದಿ ಕಲ್ಲು-ಮುಳ್ಳಿನ ಹಾಸಿಗೆಯಾಗಿತ್ತು. ನೇರ ನಡೆ-ನುಡಿ ಹೊಂದಿದ್ದ ಪೂಜ್ಯರು ಸಿಂದಗಿಯಲ್ಲಿ ಮಾಡಿದ ಭಾಷಣ ಗೋಕಾಕ್ ಚಳುವಳಿಗೆ ನಾಂದಿ ಹಾಡಿತು ಎಂದು ಹೇಳಿದರು. ಭಾಷೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಾತೃ ಭಾಷೆಯನ್ನು ಉತ್ತೇಜಿಸಲು ಇಡೀ ವಿಶ್ವವೇ ಮಾತೃಭಾಷೆ ದಿನ ಆಚರಿಸುತ್ತಿದೆ. ಆ ನಿಟ್ಟಿನಲ್ಲಿ ಕನ್ನಡಿಗರು ಭಾಷಾಭಿಮಾನ ಮೆರೆಯುವುದರ ಮೂಲಕ ಕನ್ನಡವನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು. ಪ್ರೊ. ರಮೇಶ ಐನಾಪುರ ಮಾತನಾಡಿ, ಸ್ವಾಮಿಗಳಾದವರು ಗಾಳಿ-ನೀರಿನಂತೆ ಇರಬೇಕು ಎನ್ನುವ ಮಾತಿಗೆ ನಿದರ್ಶನವೆಂಬಂತೆ ಬದುಕಿದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ಅವರ ಬದುಕೆ ನಮಗೆಲ್ಲ ಆದರ್ಶ. ಸದಾ ವೈಚಾರಿಕ ಮನೋಭಾವನೆಯನ್ನು ಹೊಂದಿದ್ದ ಶ್ರೀಗಳು ಈ ಸಮಾಜಕ್ಕೆ ನೀಡಿದ ಪ್ರಗತಿಪರ ವಿಚಾರಗಳು ಸಾರ್ವಕಾಲಿಕವಾಗಿವೆ. ಸರ್ವಧರ್ಮವನ್ನೂ ಅಪ್ಪಿ ಒಪ್ಪಿಕೊಂಡಿದ್ದ ಜಗದ್ಗುರುಗಳು ಪೀಠ ಪಲ್ಲಕ್ಕಿಯನ್ನು ತಿರಸ್ಕರಿಸಿ ವೈಭವೀಕರಣದ ವ್ಯವಸ್ಥೆಗೆ ತೀಲಾಂಜಲಿ ಹಾಡಿದ ಶ್ರೇಷ್ಠ ವಿರಕ್ತರಾಗಿದ್ದರು ಎಂದರು. ಲಿಂಗಾಯತ ಅಧ್ಯಯನ ಸಂಸ್ಥೆಯ ಮುಖೇನ ಜಾತಿ ಭೇದವನರಿಯದೆ ಎಲ್ಲ ಧರ್ಮದ ಸಾಧಕರ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಸುಮಾರು ೫೦೦ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ ಪೂಜ್ಯರು ನಡೆದಾಡುವ ವಿಶ್ವವಿದ್ಯಾಲಯದಂತಿದ್ದರು, ಅವರ ಒಂದು ಆಶೀರ್ವಚನ ೧೦ ಪುಸ್ತಕಗಳಿಗೆ ಸಮಾನವಾಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ವಿ. ಎಸ್ .ಸಾಲಿಮಠ, ಶಿಕ್ಷಕ ಮಹಾಂತೇಶ ಹಿರೇಮಠ, ಕೊಟ್ರೇಶ, ಅಭಿಷೇಕ, ನಿಂಗಪ್ಪ ನರಗುಂದ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.