ನಿರಂತರ ಅಧ್ಯಯನದೊಂದಿಗೆ ಬರವಣಿಗೆ ಉತ್ತಮಪಡಿಸಿಕೊಳ್ಳಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಕೆಜಿಎಫ್ ನ ಸೆಂಟ್ ತೆರೇಸಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ । ಜಿಲ್ಲಾ ಶಿಕ್ಷಣಾಧಿಕಾರಿ ಭಾಗ್ಯವತಮ್ಮ ಸಲಹೆ

ಕೆಜಿಎಫ್ ನ ಸೆಂಟ್ ತೆರೇಸಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ । ಜಿಲ್ಲಾ ಶಿಕ್ಷಣಾಧಿಕಾರಿ ಭಾಗ್ಯವತಮ್ಮ ಸಲಹೆ

ಕನ್ನಡಪ್ರಭ ವಾರ್ತೆ ಕೋಲಾರ

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆಯಲು ನಿರಂತರ ಅಧ್ಯಯನದೊಂದಿಗೆ ಬರವಣಿಗೆ ಉತ್ತಮ ಪಡಿಸಿಕೊಳ್ಳಿ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಭಾಗ್ಯವತಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲೆಯ ಕೆಜಿಎಫ್ ನಗರದ ಸೆಂಟ್ ತೆರೇಸಾ ಶಾಲೆಯಲ್ಲಿ ೪೦೦ ಜನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಜಿಎಫ್ ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈ ಬಾರಿ ಕೆಜಿಎಫ್ ತಾಲೂಕು ಫಲಿತಾಂಶ ಪಟ್ಟಿಯಲ್ಲಿ ಪ್ರಥಮ ಸ್ಥಾನ ಬರುವಂತಾಗಲು ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ ಎಂದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾವಹಿಸಲು ತಾಕೀತು ಮಾಡಿದರು.

ಪರೀಕ್ಷಾ ಕೇಂದ್ರಗಳ ಪುನರಚನೆ ಮಾಡಲಾಗಿದೆ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಮಕ್ಕಳ ಅನುತ್ತೀರ್ಣತೆ ತಪ್ಪಿಸಲು ಮೂರು ಪರೀಕ್ಷೆ ನಡೆಸುತ್ತಿದೆ, ಮೊದಲ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಶಾಲಾ ಹೊಸ ಅಭ್ಯರ್ಥಿಗಳು ಮತ್ತು ಖಾಸಗಿ ಅಭ್ಯರ್ಥಿಗಳು ಆ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಅಥವಾ ಯಾವುದೇ ವಿಷಯದ ಅಂಕ ಗಳಿಕೆ ಹೆಚ್ಚಿಸಿಕೊಳ್ಳಲು ೨ ಅಥವಾ ೩ನೇ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪಡೆದಿರುತ್ತಾರೆ, ಒಂದನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿ ಯಾವುದೇ ಕಾರಣಕ್ಕೂ ೨ ಮತ್ತು ೩ನೇ ಪರೀಕ್ಷೆ ತೆಗೆದುಕೊಳ್ಳುವ ಅರ್ಹತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಇಲಾಖೆ ನೀಡಿರುವ ಸಂಪನ್ಮೂಲ ಪುಸ್ತಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಅಭ್ಯಾಸ ಹಾಳೆ ಹಾಗೂ ೬ ಸೆಟ್ ಮಾದರಿ ಪ್ರಶ್ನೆಪತ್ರಿಕೆಗಳನ್ನು ಶೀಘ್ರವೇ ಇಲಾಖೆ ಒದಗಿಸಲಿದ್ದು, ಇದರ ಸದುಪಯೋಗ ಪಡೆದು ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಿಮ್ಮ ಭವಿಷ್ಯದ ದೃಷ್ಟಿಯಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಮೂರು ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಕುರಿತು ಗೊಂದಲದ ಅಗತ್ಯವಿಲ್ಲ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುಣಾತ್ಮಕಗೊಳಿಸುವ ದೃಷ್ಟಿಯಿಂದ ವಿಶೇಷ ತರಗತಿಗೆ ಒತ್ತು ನೀಡಲಾಗಿದೆ, ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದ ಅವರು, ಇಲಾಖೆ ನೀಡಿರುವ ‘ನನ್ನನ್ನೊಮ್ಮೆ ಗಮನಿಸಿ’ ಅಧ್ಯಾಯವಾರು ಪ್ರಶ್ನೋತ್ತರ, ಅಭ್ಯಾಸ ಹಾಳೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮಕ್ಕಳಿಗೆ ಸಲಹೆ ನೀಡಿದರು.

ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಗುಣಾತ್ಮಕ ಫಲಿತಾಂಶದೊಂದಿಗೆ ಜಿಲ್ಲೆ ಮೊದಲ ಸ್ಥಾನ ಗಳಿಸುವಂತಾಗಲು ಇಲಾಖೆ ಒದಗಿಸಿರುವ ಸಂಪನ್ಮೂಲ ಪುಸ್ತಕಗಳನ್ನು ಬಳಸಿಕೊಳ್ಳಲು ಸೂಚಿಸಿ, ಮಕ್ಕಳು ಅಧ್ಯಯನಕ್ಕೆ ವೇಳಾಪಟ್ಟಿ ಹಾಕಿಕೊಂಡು ಓದಿ, ಪ್ರತಿಯೊಂದು ದಿನವೂ ಮುಖ್ಯವಾಗಿದ್ದು, ಸಮಯ ವ್ಯರ್ಥ ಮಾಡದಿರಿ ಎಂದರು.

ವಿಷಯ ಪರಿವೀಕ್ಷಕ ಶಂಕರೇಗೌಡ, ವೃತ್ತಿ ಶಿಕ್ಷಣ ಪರಿವೀಕ್ಷಕ ವೆಂಕಟೇಶಬಾಬು, ಹನುಮನಹಳ್ಳಿ ಶಾಲೆ ಪ್ರಭಾರ ಮುಖ್ಯಶಿಕ್ಷಕ ಬಿ.ಕೆ.ನಾಗರಾಜ, ಸಂಪನ್ಮೂಲ ವ್ಯಕ್ತಿ ಪಿ.ಎನ್.ಬಾಲಕೃಷ್ಣರಾವ್, ಗೋಪಾಲ್‌ ರಾವ್, ವಿಜ್ಞಾನ ವಿಷಯ ಶಿಕ್ಷಕರು ಹಾಗೂ ಕೆಜಿಎಫ್ ತಾಲೂಕಿನ ಲಕ್ಷ್ಮೀಕಾಂತ್ ಇದ್ದರು.

Share this article