2024ರಲ್ಲಿ ನನೆಗುದಿಗೆ ಬಿದ್ದ ನೀರಾವರಿ ಯೋಜನಗಳಿಗೆ ಸಿಗಲಿಲ್ಲ ಕಾಯಕಲ್ಪ

KannadaprabhaNewsNetwork |  
Published : Dec 28, 2024, 01:02 AM IST
27ಕೆಪಿಎಲ್21 ತುಂಗಭದ್ರಾ ಮುರಿದು ಕ್ರಸ್ಟ್ ಗೇಟ್ ದುರಸ್ಥಿಯ ಬಳಿಕ ಸಿ.ಎಂ. ಡಿಸಿಎಂ ಪರಿಶೀಲನೆ ಮಾಡುತ್ತಿರುವುದು. | Kannada Prabha

ಸಾರಾಂಶ

2024ರಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಪೋಲಾಗಿತ್ತು.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಜಿಲ್ಲೆಯ ನದಿಗಳಿಗೆ ಈ ಬಾರಿ ಮಳೆಯಿಂದ ದೊಡ್ಡ ಪ್ರಮಾಣದ ಒಳಹರಿವು ಬಂದಿತಾದರೂ ಅದರ ಸದ್ಬಳಕೆಯಾಗಲೇ ಇಲ್ಲ. ಅದರಲ್ಲೂ ತುಂಗಭದ್ರಾ ಕ್ರಸ್ಟ್‌ಗೇಟ್‌ ಮುರಿದು ಅಪಾರ ಪ್ರಮಾಣದ ನೀರು ಪೋಲಾಗಿದ್ದು 2024ರಲ್ಲಿಯೇ ಎನ್ನುವುದು ನೋವಿನ ಸಂಗತಿ.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ವಹಣೆ ವೈಫಲ್ಯದಿಂದಾಗಿ ಮುರಿದು ದೊಡ್ಡ ಆತಂಕವನ್ನೇ ಸೃಷ್ಟಿ ಮಾಡಿತ್ತು. ತಡರಾತ್ರಿ ಗೇಟ್ ಮುರಿದು ನೀರು ಜಲಾಶಯದಿಂದ ಹರಿದು ಹೋಗಲಾರಂಭಿಸಿದಾಗ ಸುತ್ತಮುತ್ತಲ ಗ್ರಾಮಗಳಲ್ಲಿ ದೊಡ್ಡ ಆತಂಕವೇ ಎದುರಾಗಿದೆ. ಅನೇಕರು ರಾತ್ರಿಪೂರ್ತಿ ನಿದ್ರೆ ಮಾಡದಂತಾಗಿತ್ತು.

ಸುಮಾರು 70 ಟಿಎಂಸಿಗೂ ಅಧಿಕ ನೀರು ಪೋಲಾಯಿತು. ಕ್ರಸ್ಟ್ ಗೇಟ್ ದುರಸ್ತಿ ಮಾಡದೆ ಹೋಗಿದ್ದರೆ ಈ ವರ್ಷ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು 13 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಭತ್ತದ ಬೆಳೆಗೆ ಕುತ್ತು ಬರುತ್ತಿತ್ತು.

ಕ್ರಸ್ಟ್ ಗೇಟ್ ಮುರಿಯುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಶತಾಯ-ಗತಾಯ ಪ್ರಯತ್ನ ಮಾಡಿ, ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಹಗಲಿರುಳು ಕೆಲಸ ಮಾಡಿ, ಮುರಿದ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಸುವ ಮೂಲಕ ಹರಿದು ಹೋಗುತ್ತಿದ್ದ ನೀರನ್ನು ತಡೆಯಲಾಯಿತು.

ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಮತ್ತೆ ಭರ್ತಿಯಾದ ತುಂಗಭದ್ರಾ

ಕ್ರಸ್ಟ್ ಗೇಟ್‌ ಮುರಿದು ನೀರು ಪೋಲಾಗಿ ಬಳಿಕ ದುರಸ್ತಿ ಮಾಡಿದ ಮೇಲೆ ಮಳೆರಾಯನ ಕರುಣೆಯಿಂದ ಮತ್ತೆ ಜಲಾಶಯ ಭರ್ತಿ ಆಯಿತು. ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಹೀಗಾಗಿ, ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಮುರಿದು, ನೀರು ಪೋಲಾದರೂ ಮತ್ತೆ ಉತ್ತಮ ಮಳೆಯಾಗಿದ್ದರಿಂದ ಈ ವರ್ಷ ಎರಡು ಬೆಳೆಗೂ ನೀರಿನ ಅಭಾವ ಎದುರಾಗದಂತಾಗಿರುವುದು ಸಂತೋಷದ ಸಂಗತಿ. ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈಗಾಗಲೇ ಎರಡನೇ ಬೆಳೆಗೂ ನೀರು ಬಿಡಲು ನಿರ್ಧರಿಸಲಾಗಿದೆ.

ನೀರು ಪೋಲು

ಸಿಂಗಟಾಲೂರು ಏತನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ, ಹತ್ತನ್ನೆರಡು ವರ್ಷಗಳಾಗಿದ್ದರೂ ಎಡಭಾಗದಲ್ಲಿ ನೀರಾವರಿಯೇ ಆಗುತ್ತಿಲ್ಲ. ಸಂಗ್ರಹವಾಗುತ್ತಿರುವ ನೀರು ಪ್ರತಿವರ್ಷ ಪೋಲಾಗುತ್ತಿದೆ. ಈ ವರ್ಷವೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ನೀರು ಕೊಡುವ ಕಾರ್ಯಕ್ಕೆ ಯಾವುದೇ ಚಾಲನೆ ಸಿಕ್ಕಿಲ್ಲ.

ಮಧ್ಯಪ್ರದೇಶ ಮಾದರಿಯಲ್ಲಿಯೇ ರೈತರಿಗೆ ನೀರು ನೀಡಬೇಕು ಎನ್ನುವ ಯೋಜನೆ ಕಾರ್ಯಗತವಾಗುತ್ತಿಲ್ಲ. ಇದಕ್ಕೆ ಟೆಂಡರ್ ಕರೆದರೂ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿದ್ದು, ಪ್ರಸಕ್ತ ಸಾಲಿನಲ್ಲಿ ಈ ಕುರಿತು ಒಂದೇ ಒಂದು ಬೆಳವಣಿಗೆಯಾಗಿಲ್ಲ. ಈಗಿನ ಸರ್ಕಾರವೂ ಕಣ್ಣು ತೆರೆದು ಸಹ ನೋಡುತ್ತಿಲ್ಲ.

ವಿಂಡ್ ಪವರ್ ಪಾಲು

ಸಿಂಗಟಾಲೂರು ಏತನೀರಾವರಿ ಯೋಜನೆ ಅನುಷ್ಠಾನದಲ್ಲಿನ ನಿಧಾನಗತಿಯಿಂದ ರೈತರು ಈಗ ತಮ್ಮ ಭೂಮಿಯನ್ನು ವಿಂಡ್ ಪವರ್ ಮತ್ತು ಸೋಲಾರ್ ಪ್ಲಾಂಟ್‌ಗೆ ಲೀಸ್ ನೀಡುತ್ತಿದ್ದಾರೆ. ಈಗಾಗಲೇ ಸಾವಿರಾರು ಎಕರೆ ಪ್ರದೇಶದ ಭೂಮಿಯನ್ನು ಲೀಸ್‌ಗೆ ನೀಡಲಾಗಿದ್ದು, ಈ ಬಗ್ಗೆಯೂ ಸರ್ಕಾರ ಚಕಾರ ಎತ್ತುತ್ತಿಲ್ಲ.

ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿನ ಭೂಮಿಯನ್ನು ಈ ರೀತಿ ವಾಣಿಜ್ಯ ಉದ್ಧೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವಂತೆಯೇ ಇಲ್ಲ. ಆದರೂ ಅಧಿಕಾರಿಗಳು ಇದಕ್ಕೂ ಕ್ಯಾರೆ ಎನ್ನದೇ ಭೂಮಿಯನ್ನು ಮಾರ್ಪಾಡು ಕೊಡುತ್ತಿದ್ದಾರೆ.

ಹೀಗೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, 2024ನೇ ವರ್ಷದಲ್ಲಿ ಯಾವುದೇ ಯೋಜನೆ ಪರಿಣಾಮಕಾರಿ ಜಾರಿಯಾಗಿಲ್ಲ. ಹೀಗಾಗಿ, ನೀರು ಪೋಲಾಗುತ್ತಲೇ ಇದೆ. ಇದಲ್ಲದೆ ಹಿರೇಹಳ್ಳ ಜಲಾಶಯ ಎತ್ತರ ಹೆಚ್ಚಳ, ನವಲಿ ಸಮಾಂತರ ಜಲಾಶಯ ನಿರ್ಮಾಣದ ಕುರಿತೂ ಈ ವರ್ಷದಲ್ಲಿ ಅಂಥ ಬೆಳವಣಿಗೆಯಾಗಿಲ್ಲ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡುತ್ತದೆ. ಆದರೂ ವಾಸ್ತವದಲ್ಲಿ ಅದು ಜಾರಿಯಾಗುತ್ತಲ್ಲೇ ಇಲ್ಲ. ಹೀಗೆಯೇ ಮತ್ತೊಂದು ವರ್ಷವೇ ಕಳೆದು ಹೋಗುತ್ತಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ