ಚಿತ್ರದುರ್ಗ: ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ಕಾನೂನು ಅರಿವಿರಬೇಕಾದದ್ದು ಅನಿವಾರ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾರತ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಬೃಹತ್ ಸಂವಿಧಾನವಾಗಿದೆ. ಬೃಹತ್ ಸಂವಿಧಾನವಿದ್ದರೂ, ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ದಿನ ನಿತ್ಯದ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಬೇಕಾದ ಕಾನೂನುಗಳನ್ನು ಸಂವಿಧಾನದಲ್ಲಿ ನಾವು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಯಾವುದೇ ಕಾನೂನು ಜಾರಿಗೆ ತರಬೇಕಾದರೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಕಾನೂನು ಜಾರಿಗೆ ತರಬೇಕಾಗುತ್ತದೆ ಎಂದರು.
ವಿಶ್ವದಲ್ಲಿಯೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.ಜನಸಾಮಾನ್ಯರಿಗೆ ಕಾನೂನು ನೆರವು ನೀಡುವುದು ಮಾತ್ರವಲ್ಲದೇ ಲೋಕ ಅದಾಲತ್, ಮಧ್ಯಸ್ಥಿಕೆ, ರಾಜಿ ಸಂಧಾನ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸುವ ಮೂಲಕ ಜನರಿಗೆ ಶೀಘ್ರವಾಗಿ ನ್ಯಾಯವನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮಾತನಾಡಿ, ಪ್ರತಿ ವರ್ಷ ನ.9 ರಂದು ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಯಾವೊಬ್ಬ ಭಾರತೀಯ ನಾಗರಿಕನು ಕೂಡ ಆರ್ಥಿಕ ದಿವಾಳಿತನದಿಂದ ನ್ಯಾಯ ಪಡೆಯುವಲ್ಲಿ ವಂಚಿತನಾಗಬಾರದು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಅದರಂತೆ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ 1987ರಲ್ಲಿಯೇ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರು ಕಾನೂನಿನ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.ಪ್ರಧಾನ ಕಾನೂನು ಅಭಿರಕ್ಷಕ ಎಸ್.ವಿಜಯ್ ಕುಮಾರ್, ಕಾನೂನು ಸೇವೆಗಳ ಪ್ರಾಧಿಕಾರ-1987 ವಿಷಯದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಗುಡ್ಡದೇಶ್ವರಪ್ಪ, ವಕೀಲರ ಸಂಘದ ಕಾರ್ಯದರ್ಶಿ ಅರ್.ಗಂಗಾಧರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.